ಸಾರಾಂಶ
ವಿದ್ಯುತ್ ಚಾಲಿತ ಮಗ್ಗದ ನೇಕಾರರ ಬಾಕಿ ಬಿಲ್ ಸಂಬಂಧಿಸಿದ ಸಮಸ್ಯೆ ಇತ್ಯರ್ಥಗೊಳಿಸಿ ಸರ್ಕಾರ ನೇಕಾರರ ಆತ್ಮಹತ್ಯೆ ತಡೆಯಬೇಕೆಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ವಿದ್ಯುತ್ ಚಾಲಿತ ಮಗ್ಗದ ನೇಕಾರರ ಬಾಕಿ ಬಿಲ್ ಸಂಬಂಧಿಸಿದ ಸಮಸ್ಯೆ ಇತ್ಯರ್ಥಗೊಳಿಸಿ ಸರ್ಕಾರ ನೇಕಾರರ ಆತ್ಮಹತ್ಯೆ ತಡೆಯಬೇಕೆಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ನೇಕಾರರ ಮೇಲಿನ ಸಾಲದ ಹೊರೆಯಿಂದ ರಾಜ್ಯದಲ್ಲಿ 51 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಇದನ್ನು ನಿಲ್ಲಿಸಲು ರಾಷ್ಟ್ರೀಕೃತ ಬ್ಯಾಂಕ್ ಒಳಗೊಂಡಂತೆ ನೇಕಾರರ ಸಂಪೂರ್ಣ ಸಾಲಮನ್ನಾ ಮಾಡಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ತಲಾ ₹10 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಕಳೆದ ಏಪ್ರಿಲ್ 1ರಿಂದ ಹೆಚ್ಚುವರಿಯಾಗಿರುವ ವಿದ್ಯುತ್ ಬಿಲ್ ಕೆಲವರು ತುಂಬಲು ಆಗದೆ ಇರುವ ಕಾರಣ ಸರ್ಕಾರವೇ ಅದನ್ನು ಭರಿಸಿಕೊಳ್ಳಬೇಕು. ಇಲ್ಲವಾದರೆ ಯಾವುದೇ ಹೊರೆ ಹಾಕದೆ ಪ್ರತಿ ಯೂನಿಟ್ ಗೆ ₹1.25 ಪೈಸೆಯಂತೆ ಕಂತುಗಳ ಮೂಲಕ ಬಾಕಿ ಬಿಲ್ ರಿಸಿಕೊಳ್ಳಬೇಕು. ಸರ್ಕಾರದ ವಿಳಂಬ ನೀತಿಯಿಂದ ಈ ಸಮಸ್ಯೆಗೆ ಸರ್ಕಾರವೇ ಹೊಣೆ ಹೊರಬೇಕೆಂದು ಆಗ್ರಹಿಸಿದರು.ರಾಜ್ಯದ ಕೆಎಚ್ ಡಿಸಿ ನಿಗಮದಲ್ಲಿ ನೂರಾರು ಕೋಟಿ ರು.ಅವ್ಯವಹಾರವಾಗಿದ್ದು, ಅದನ್ನು ತೀವ್ರಗತಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿಪಡಿಸಬೇಕು. ಕಳಪೆ ಬಟ್ಟೆ ಪೂರೈಸಿರುವ ಅವ್ಯವಹಾರದ ಹಣವನ್ನು ಮರಳಿ ನಿಗಮಕ್ಕೆ ಸೇರಿಸಬೇಕು. ನಿಗಮದಲ್ಲಿ ಅನೇಕ ವರ್ಷಗಳಿಂದ ನೇಕಾರಿಕೆ ಮಾಡುತ್ತಿರುವವರಿಗೆ ನಿವೇಶನಗಳಿಲ್ಲ. ಕೂಡಲೇ ನಿವೇಶನ ಹಂಚಿಕೆ ಮಾಡಬೇಕೆಂದು ಪ್ರತಿಭಟನಾಕಾರರು
ಆಗ್ರಹಿಸಿದರು.