ದೊಡ್ಡಬಳ್ಳಾಪುರ: ನೇಕಾರಿಕೆ ತೀವ್ರ ಸಂಕಷ್ಟದಲ್ಲಿದ್ದು, ಜಾಗತಿಕ ಹಾಗೂ ಸ್ಥಳೀಯ ಬೆಳವಣಿಗೆಗಳು ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ನೇಕಾರರ ಬದುಕು ಮೂರಾಬಟ್ಟೆಯಾಗಿದೆ ಎಂದು ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು ಹೇಳಿದರು

ದೊಡ್ಡಬಳ್ಳಾಪುರ: ನೇಕಾರಿಕೆ ತೀವ್ರ ಸಂಕಷ್ಟದಲ್ಲಿದ್ದು, ಜಾಗತಿಕ ಹಾಗೂ ಸ್ಥಳೀಯ ಬೆಳವಣಿಗೆಗಳು ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ನೇಕಾರರ ಬದುಕು ಮೂರಾಬಟ್ಟೆಯಾಗಿದೆ ಎಂದು ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು ಹೇಳಿದರು.ಇಲ್ಲಿನ ನೇಕಾರ ಹೋರಾಟ ಸಮಿತಿ ನೇತೃತ್ವದಲ್ಲಿ ತಹಸೀಲ್ದಾರ್‌ ಕಚೇರಿ ಮುಂಭಾಗ ನೇಯ್ಗೆ ಉದ್ಯಮದ ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ ಖಂಡಿಸಿ ಮತ್ತು ಸೀರೆ ಉತ್ಪಾದನ ವೆಚ್ಚಕ್ಕೆ ಅನುಗುಣವಾಗಿ ಸೀರೆಗಳ ಬೆಲೆ ಹೆಚ್ಚಿಸಬೇಕೆಂದು ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚಾ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ. ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ ಸೀರೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಸೀರೆ ಬೆಲೆ ಹೆಚ್ಚಿಸಬೇಕು, ನೇಯ್ಗೆ ಉದ್ಯಮದ ಕಚ್ಚಾ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎಂದರು.

ಮಗ್ಗದ ಮಾಲೀಕರೆಲ್ಲ ಒಂದಾಗಿ:

ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿರುವ ಕಾರಣದಿಂದ ನಮ್ಮ ಹೋರಾಟಗಳು ಫಲ ನೀಡುತ್ತಿಲ್ಲ, 25ಕ್ಕೂ ಹೆಚ್ಚು ಮಗ್ಗಗಳನ್ನು ಹೊಂದಿರುವ ಎಲ್ಲಾ ಮಾಲೀಕರು ಒಟ್ಟಾಗಿ ಸೇರಿ ಚರ್ಚಿಸಿ ಒಮ್ಮತದ ನಿರ್ಧಾರ ಕೈಗೊಂಡು ಸ್ಥಳೀಯವಾಗಿ ನೇಕಾರರ ಹೋರಾಟವನ್ನು ಬಲಿಷ್ಠಗೊಳಿಸಿದರೆ ನಮ್ಮ ಹೋರಾಟಕ್ಕೆ ಫಲ ಸಿಗುತ್ತದೆ ಎಂದರು.

ಇದು ಎಚ್ಚರಿಕೆ ಹೋರಾಟ:

ತಾಲೂಕಿನ ನೇಕಾರರಿಗೆ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳ ಕುರಿತು ಎಚ್ಚರಿಸುವ ಸಲುವಾಗಿ ಇಂದು ಸಾಂಕೇತಿಕ ಪ್ರತಿಭಟನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೇಕಾರರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಇಂದೇ ನಾವೆಲ್ಲರೂ ಎಚ್ಚೆದ್ದುಕೊಳ್ಳಬೇಕು ನೇಕಾರಿಕೆ ನಂಬಿ ಜೀವನ ಸಾಗಿಸುತ್ತಿರುವ ಪ್ರತಿ ಮಾಲೀಕ, ಕಾರ್ಮಿಕರು ಒಂದಾಗಬೇಕು ಎಂದು ತಿಳಿಸಿದರು.

ಪ್ರತಿಭಟನಾಕಾರರು ಈ ವೇಳೆ ನೇಕಾರರ ಸಮಸ್ಯೆಯನ್ನು ಬಗೆಹರಿಸುವಂತೆ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.

ಬೆಂಗಳೂರು ‌ಟೆಕ್ಸ್‌ಟೈಲ್‌ ಬ್ಯಾಂಕ್‌ನ ಅಧ್ಯಕ್ಷ ಎಣ್ಣೆಗೆರೆ ಆರ್.ವೆಂಕಟರಾಮಯ್ಯ, ನೇಕಾರ ಮಹಾಮಂಡಳಿ ಅಧ್ಯಕ್ಷ ಪಿ. ಸಿ.ವೆಂಕಟೇಶ್‌, ಜಂಟಿ ಕಾರ್ಯದರ್ಶಿ ಅಮರನಾಥ್, ನೇಕಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಿ.ಎ ವೆಂಕಟೇಶ, ದೊಡ್ಡಬಳ್ಳಾಪುರ ವೀವರ್ಸ್ ಅಸೋಸಿಯೇಷನ್ ಅಧ್ಯಕ್ಷ ‌ನರಸಿಂಹಮೂರ್ತಿ, ನೇಕಾರ ಮುಖಂಡ ವೆಂಕಟೇಶ್, ಹೋರಾಟ ಸಮಿತಿಯ ‌ಮಲ್ಲೇಶ್ ಇತರಿದ್ದರು.

6ಕೆಡಿಬಿಪಿ2-

ದೊಡ್ಡಬಳ್ಳಾಪುರದ ತಾಲೂಕು ಕಚೇರಿ ಮುಂಭಾಗ ನೇಕಾರ ಹೋರಾಟ ಸಮಿತಿಯಿಂದ ನೇಯ್ಗೆ ಉದ್ಯಮದ ಕಚ್ಚಾ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಮಾಡಲಾಯಿತು.