ಸಾರಾಂಶ
ಶರಣ, ಸಂತರ ಸ್ಮರಣೆಯಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ.
ಹೂವಿನಹಡಗಲಿ: ಮಠ ಮಾನ್ಯಗಳಲ್ಲಿ ಜರುಗುವ ಸಾಮೂಹಿಕ ವಿವಾಹಗಳು, ಬಡ ಕುಟುಂಬಗಳಿಗೆ ಆಸರೆಯಾಗಿದ್ದು, ಮದುವೆಯ ವೆಚ್ಚ ಮಿತವಾಗಿರಬೇಕು ಎಂದು ಗುಡ್ಡದ ವಿರಕ್ತ ಮಠದ ಚನ್ನಬಸವ ಶ್ರೀಗಳು ಹೇಳಿದರು.
ತಾಲೂಕಿನ ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿಯಲ್ಲಿ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.ಶರಣ, ಸಂತರ ಸ್ಮರಣೆಯಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ. ಮಠ ಮಾನ್ಯಗಳಲ್ಲಿ ನಡೆಯುವ ಸಾಮೂಹಿಕ ವಿವಾಹಗಳಿಂದ ಬಡವರ ಏಳ್ಗೆಯನ್ನು ಕಾಣಲು ಸಾಧ್ಯವಿದೆ. ಸುಕ್ಷೇತ್ರದಲ್ಲಿ ಮದುವೆಯಾಗುತ್ತಿರುವ ನವ ಜೋಡಿಗಳು, ಭವಿಷ್ಯದಲ್ಲಿ ಸುಖವಾಗಿರಲು ಗುರು ಹಿರಿಯರಿಗೆ ಗೌರವ ನೀಡುವ ಜತೆಗೆ, ತಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವಂತರನ್ನಾಗಿ ಮಾಡಿದರೆ ಉತ್ತಮ ನಾಗರಿಕ ಸಮಾಜ ನಿರ್ಮಾಣಕ್ಕೆ ಮುನ್ನುಡಿಯಾಗಲಿದೆ ಎಂದರು.
ಬಿಜೆಪಿ ಮುಖಂಡ ಓದೋ ಗಂಗಪ್ಪ ಮಾತನಾಡಿ, ಸಾಮೂಹಿಕ ವಿವಾಹಗಳು ದುಂದು ವೆಚ್ಚಕ್ಕೆ ಕಡಿವಾಣ ಹಾಕುತ್ತದೆ. ಹರ ಗುರು ಚರಮೂರ್ತಿಗಳ ಆಶೀರ್ವಾದ ಪಡೆದು, ವೈವಾಹಿಕ ಜೀವನವನ್ನು ರೂಪಿಸಿಕೊಳ್ಳುತ್ತಿರುವ ತಾವುಗಳು ಮುಂದೆ ಆದರ್ಶ ದಂಪತಿಗಳಾಗಿ ಬಾಳಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಠದ ಚನ್ನವೀರ ಶ್ರೀಗಳು ಮಾತನಾಡಿ, ಸುಖ ಸಂಸಾರ ಜೀವನ ಸಾಗಿಸಲು ತಾಳ್ಮೆಯೊಂದೇ ದಾರಿಯಾಗಿದ್ದು, ಅದನ್ನು ಅರಿತು ಬಾಳಬೇಕು. ಯುವಕರು ದುಶ್ಚಟಗಳಿಗೆ ದಾಸರಾದರೇ, ಆರೋಗ್ಯ ಹಾಳಾಗುವುದಲ್ಲದೇ ಸುಂದರ ಸಂಸಾರ ಕೂಡಾ ಹಾಳಾಗುತ್ತದೆ ಎಂದರು.
ಈ ಸಂದರ್ಭದಲ್ಲಿ 13 ನವ ದಂಪತಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಶಾಖಾ ಗವಿಮಠದ ಡಾ. ಹಿರಿಶಾಂತವೀರ ಸ್ವಾಮೀಜಿ, ಹೊಳಲು ಮಲ್ಲಿಕಾರ್ಜುನ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ಸೇರಿದಂತೆ ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಶ್ರೀಗಳ ಜಂಗಮೋತ್ಸವ ಮೆರವಣಿಗೆ ಸಡಗರ ಸಂಭ್ರಮದಿಂದ ಜರುಗಿತು.