ಸಾರಾಂಶ
ಫೋಟೋಶೂಟ್ ಹೆಸರಿನಲ್ಲಿ ಮಠದ ಪರಿಸರದಲ್ಲಿ ಜೋಡಿಗಳ ಅಸಭ್ಯ ವರ್ತನೆಯೂ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಮುಜಗರಕ್ಕೆ ಕಾರಣವಾಗುತ್ತಿತ್ತು. ಹೀಗಾಗಿ ಈ ರೀತಿಯ ಫೋಟೋ ಶೂಟ್ ಗಳನ್ನು ನಿಷೇಧಿಸಲಾಗಿದೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಪಾವಿತ್ರ್ಯತೆ ಕಾಪಾಡುವುದಕ್ಕಾಗಿ ಇಲ್ಲಿನ ಶ್ರೀ ಕೃಷ್ಣಮಠದ ಪರಿಸರದಲ್ಲಿ ಪ್ರಿ ವೆಡ್ಡಿಂಗ್ - ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್‌ಗಳನ್ನು ನಿಷೇಧಿಸಲಾಗಿದೆ.ಇತ್ತೀಚೆಗೆ ಉಡುಪಿ ಕೃಷ್ಣಮಠದ ರಥಬೀದಿಯಲ್ಲಿ ಮತ್ತು ಈ ಪರಿಸರದಲ್ಲಿ ಪ್ರಿ ಮತ್ತು ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟಿಂಗ್ ಹೆಚ್ಚಾಗಿತ್ತು. ಸ್ಥಳೀಯ ಮಾತ್ರವಲ್ಲದೆ ಕೇರಳ ಹಾಗೂ ರಾಜ್ಯದ ಬೇರೆ ಕಡೆಗಳಿಂದಲೂ ಫೋಟೋಗ್ರಾಫರ್ ಗಳು ಇಲ್ಲಿಗೆ ಜೋಡಿಗಳನ್ನು ಕರೆದುಕೊಂಡು ಬಂದು ಫೋಟೋ ಶೂಟ್ ಮಾಡುತಿದ್ದರು. ಫೋಟೋಶೂಟ್ ಹೆಸರಿನಲ್ಲಿ ಮಠದ ಪರಿಸರದಲ್ಲಿ ಜೋಡಿಗಳ ಅಸಭ್ಯ ವರ್ತನೆಯೂ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಮುಜಗರಕ್ಕೆ ಕಾರಣವಾಗುತ್ತಿತ್ತು. ಹೀಗಾಗಿ ಈ ರೀತಿಯ ಫೋಟೋ ಶೂಟ್ ಗಳನ್ನು ನಿಷೇಧಿಸಲಾಗಿದೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.
ಅಷ್ಟಮಠಗಳು, ಮಠಾಧೀಶರು ಇರುವ, ನೂರಾರು ವರ್ಷಗಳಿಂದ ಅಷ್ಟಮಠಾಧೀಶರು, ದಾಸವರೇಣ್ಯರು ಓಡಾಡಿದ ರಥಬೀದಿ ಇದಾಗಿದೆ. ಪ್ರತಿದಿನವೂ ಈ ರಥಬೀದಿಯಲ್ಲಿ ದೇವರ ಉತ್ಸವ ನಡೆಯುತ್ತದೆ. ಇದಕ್ಕೆ ತನ್ನದೇ ಆದ ಪಾವಿತ್ರ್ಯವಿದೆ. ಇಲ್ಲಿ ಜೋಡಿಹಕ್ಕಿಗಳು ಸರಸ ಸಲ್ಲಾಪ ನಡೆಸುವುದು ಸರಿಯಲ್ಲ. ಹಾಗೆ ಮಾಡುವುದರಿಂದ ಧಾರ್ಮಿಕ ವಾತಾವರಣಕ್ಕೆ ಅಡ್ಡಿ ಆಗುತ್ತದೆ. ಹೀಗಾಗಿ ಮುಜುಗರದ ಸನ್ನಿವೇಶ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.