ಕೆರೆ, ಚೆಕ್‌ ಡ್ಯಾಂಗಳಲ್ಲಿ ಬಂತು ಜಲಕಳೆ

| Published : Dec 29 2024, 01:18 AM IST

ಸಾರಾಂಶ

ಹಳ್ಳಿಗರ ಜಲಮೂಲ ಎಂದೇ ಪರಿಗಣಿಸಲ್ಪಟ್ಟ ಕೆರೆ, ಚೆಕ್ ಡ್ಯಾಮ್, ಬ್ರಿಡ್ಜ್‌ ಕಂ ಬ್ಯಾರೇಜ್ ಮತ್ತು ಏತ ನೀರಾವರಿ ಯೋಜನೆಗಳಲ್ಲಿ ಈಗ ನೀರು ಸಂಗ್ರಹಗೊಂಡು ಜೀವಕಳೆ ಬಂದಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಹಳ್ಳಿಗರ ಜಲಮೂಲ ಎಂದೇ ಪರಿಗಣಿಸಲ್ಪಟ್ಟ ಕೆರೆ, ಚೆಕ್ ಡ್ಯಾಮ್, ಬ್ರಿಡ್ಜ್‌ ಕಂ ಬ್ಯಾರೇಜ್ ಮತ್ತು ಏತ ನೀರಾವರಿ ಯೋಜನೆಗಳಲ್ಲಿ ಈಗ ನೀರು ಸಂಗ್ರಹಗೊಂಡು ಜೀವಕಳೆ ಬಂದಿದೆ. ಇದರೊಂದಿಗೆ ಹುಕ್ಕೇರಿ ತಾಲೂಕಿನ ವಿವಿಧೆಡೆ ಜಲವೈಭವ ಸೃಷ್ಟಿಯಾಗಿದ್ದು ಕೃಷಿಕರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ.

ಕಳೆದ ವರ್ಷ ಉಂಟಾದ ಭೀಕರ ಬರ ಪರಿಸ್ಥಿತಿಯಿಂದ ಕೆರೆ-ಕುಂಟೆ, ಹಳ್ಳ-ಕೊಳ್ಳಗಳು ಸಂಪೂರ್ಣ ಬತ್ತಿ ಹೋಗಿದ್ದವು. ಇದೀಗ ಜಲಮೂಲಗಳು ಎನಿಸಿರುವ ಕೆರೆ, ಚೆಕ್ ಡ್ಯಾಮ್, ಬ್ರಿಡ್ಜ್‌ ಕಂ ಬ್ಯಾರೇಜ್‌ಗಳಲ್ಲಿ ನೀರಿನ ಸೆಲೆ ಜಿನುಗತೊಡಗಿದೆ. ಅಲ್ಲದೇ ಜಲಚರ-ಜಾನುವಾರು, ಪಶು-ಪಕ್ಷಿಗಳಿಗೆ ಜೀವಸೆಲೆಯಾಗಿದ್ದು, ಸಾಕಷ್ಟು ನೀರು ಕೂಡ ಸಂಗ್ರಹಹಗೊಂಡಿದೆ. ಅಷ್ಟೇ ಅಲ್ಲದೆ ಅಪಾರ ಪ್ರಮಾಣದ ಜಲಸಂಪತ್ತು ಮೈದುಂಬಿ ಜಲವೈಭವದ ದೃಶ್ಯಗಳು ಕಣ್ಮನ ಸೆಳೆಯುತ್ತಿವೆ. ಇದರ ಜತೆಗೆ ಅಂತರ್ಜಲ ಮಟ್ಟ ಹೆಚ್ಚಾಗಲು ಕಾರಣವಾಗಿದೆ.

ಜಲಮೂಲ ಹೆಚ್ಚಿಸಿ ಇಡೀ ಹುಕ್ಕೇರಿ ತಾಲೂಕನ್ನು ನೀರಾವರಿಗೆ ಒಳಪಡಿಸುವ ಮಹತ್ವಾಕಾಂಕ್ಷಿ ಹೊತ್ತಿರುವ ಸಣ್ಣ ನೀರಾವರಿ ಇಲಾಖೆಯು ಕೆರೆಗಳ ಪುನಶ್ಚೇತನ, ಏತ ನೀರಾವರಿ, ಹೊಸ ಕೆರೆ ನಿರ್ಮಾಣದಂತಹ ಯೋಜನೆಗಳನ್ನು ರೂಪಿಸಿ, ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಸಫಲವಾಗಿದೆ. ಅಲ್ಲದೇ ಬ್ರಿಡ್ಜ್ ಕಂ ಬ್ಯಾರೇಜ್, ಏತ ನೀರಾವರಿ ಯೋಜನೆಗಳಲ್ಲಿ ನೀರು ತುಂಬಿರುವುದರಿಂದ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಉತ್ತೇಜನ ನೀಡಿದಂತಾಗಿದೆ. ಜೊತೆಗೆ ಈ ಯೋಜನೆಗಳ ಅಕ್ಕಪಕ್ಕದ ಸುಮಾರು ಸಾವಿರಾರು ಹೆಕ್ಟೇರ್ ಜಮೀನಿನ ಪ್ರದೇಶದಲ್ಲಿ ಇದೀಗ ಹಸಿರು ನಳನಳಿಸುತ್ತಿದೆ.

ಕುಸಿಯುತ್ತಿರುವ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಸಣ್ಣ ನೀರಾವರಿ ಇಲಾಖೆಯು ಕೋಚರಿ, ಯರನಾಳ, ಗೋಟೂರ, ದಡ್ಡಿ, ಸೊಲ್ಲಾಪುರ, ಹೊನ್ನಿಹಳ್ಳಿ, ಬೈರಾಪುರ ಸೇರಿದಂತೆ 42 ಕ್ಕೂ ಹೆಚ್ಚು ಬ್ರಿಡ್ಜ್ ಕಂ ಬ್ಯಾರೇಜ್‌ಗಳನ್ನು ನಿರ್ಮಿಸಿದೆ. ಹರಗಾಪುರ, ಹುಲ್ಲೋಳಿಹಟ್ಟಿ, ಬೆಳ್ಳಂಕಿ, ಹಗೇದಾಳ ಸೇರಿದಂತೆ 12 ಕಡೆಗಳಲ್ಲಿ ಚೆಕ್ ಡ್ಯಾಮ್ ನಿರ್ಮಿಸಿದೆ.

ಇನ್ನು ಕಮತನೂರ, ಬೋಳಶಾನಟ್ಟಿ, ಉಳ್ಳಾಗಡ್ಡಿ ಖಾನಾಪುರ, ಕಣಗಲಾ, ಅಮ್ಮಣಗಿ ಸೇರಿದಂತೆ 45 ಕಡೆಗಳಲ್ಲಿ ಕೆರೆ ನಿರ್ಮಿಸಲಾಗಿದೆ. ಇದೇ ವೇಳೆ ಶಿರಹಟ್ಟಿ, ಸಲಾಮವಾಡಿ, ಬಸಾಪುರ, ಕರಗುಪ್ಪಿ, ಮಸರಗುಪ್ಪಿ, ಪಚ್ಚನಕೆರೆ ಏತ ನೀರಾವರಿ ಯೋಜನೆಗಳನ್ನು ಸಹ ಅನುಷ್ಠಾನಗೊಳಿಸಲಾಗಿದೆ. ತನ್ಮೂಲಕ ಬೇಸಿಗೆ ದಿನಗಳನ್ನು ಸಮರ್ಥವಾಗಿ ಎದುರಿಸುವ ದೂರದೃಷ್ಟಿ ಹೊಂದಿದ್ದು ರೈತರ ಆದಾಯವೂ ಹೆಚ್ಚಳವಾಗುವ ಆಶಾಭಾವ ಮೂಡಿಸಿದೆ.

ಬಹುನಿರೀಕ್ಷಿತ ₹42 ಕೋಟಿ ವೆಚ್ಚದ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮುಕ್ತಾಯ ಹಂತದಲ್ಲಿದ್ದು ಶೀಘ್ರವೇ ಕಾರ್ಯಾರಂಭ ಆಗುವ ಲಕ್ಷಣಗಳಿವೆ. ಜೊತೆಗೆ ₹94 ಕೋಟಿ ವೆಚ್ಚದ ಘಟಪ್ರಭಾ ನದಿಯಿಂದ ಹಿರಣ್ಯಕೇಶಿ ನದಿ ಮೇಲೆ ಬರುವ ಬ್ಯಾರೇಜ್‌ಗಳಿಗೆ ನೀರು ತುಂಬಿಸುವ ಯೋಜನೆಯೂ ಪ್ರಾರಂಭವಾಗಲಿದೆ.

ತಾಲೂಕು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಮತ್ತು ಮಾರ್ಗದರ್ಶನ ಹಾಗೂ ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸುತ್ತಿರುವ ಪರಿಣಾಮ ಸಣ್ಣ ನೀರಾವರಿ ಇಲಾಖೆಯಲ್ಲಿ ವಿವಿಧ ಯೋಜನೆಗಳು ತ್ವರಿತಗತಿಯಲ್ಲಿ ಅನುಷ್ಠಾನವಾಗುತ್ತಿವೆ. ಹಾಗಾಗಿ ನೀರಾವರಿ ಕ್ಷೇತ್ರ ಮತ್ತಷ್ಟು ವಿಸ್ತರಣೆಯಾಗಿದೆ.

ಜಲಮೂಲ ಹೆಚ್ಚಿಸುವ ನಿಟ್ಟಿನಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್, ಚೆಕ್ ಡ್ಯಾ, ಮತ್ತು ಏತ ನೀರಾವರಿ ಯೋಜನೆ ಮತ್ತು ಕೆರೆ ನಿರ್ಮಾಣ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದರಿಂದ ನೀರಾವರಿ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.

ಸಂಜಯ ಮಾಳಗಿ, ಎಇಇ ಸಣ್ಣ ನೀರಾವರಿ ಇಲಾಖೆ