ಬರ ಪರಿಹಾರ ಜಮಾ ಮಾಡಲು ರೈತಸಂಘ ವಾರ ಗಡುವು

| Published : May 15 2024, 01:38 AM IST

ಸಾರಾಂಶ

ತಾಂತ್ರಿಕ ದೋಷಗಳನ್ನು ನಿವಾರಿಸಿ ಸರ್ಕಾರಿಂದ ಬಿಡುಗಡೆಯಾಗಿರುವ ಬರ ಪರಿಹಾರದ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಲು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್‌ ಸುರೇಶಕುಮಾರ ಟಿ. ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಣಿಬೆನ್ನೂರು: ತಾಂತ್ರಿಕ ದೋಷಗಳನ್ನು ನಿವಾರಿಸಿ ಸರ್ಕಾರಿಂದ ಬಿಡುಗಡೆಯಾಗಿರುವ ಬರ ಪರಿಹಾರದ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಲು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್‌ ಸುರೇಶಕುಮಾರ ಟಿ. ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಮಯದಲ್ಲಿ ರೈತ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಭೀಕರ ಬರಗಾಲದ ಈ ಸಂದರ್ಭದಲ್ಲಿ ರೈತರು ಬಹುದಿನಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಬೆಳೆ ಪರಿಹಾರವೇನೋ ಈಗ ಬಿಡುಗಡೆಯಾಗಿದೆ. ಆದರೆ ಬ್ಯಾಂಕ್ ಖಾತೆಯೊಂದಿಗೆ ಆಧಾರ ಜೋಡಣೆ ಮಿಸ್ ಮ್ಯಾಚಿಂಗ್ ಸಮಸ್ಯೆಯಿಂದ ರೈತರ ಬ್ಯಾಂಕ್ ಖಾತೆಗೆ ಬೆಳೆ ನಷ್ಟ ಪರಿಹಾರ ಜಮಾ ಆಗದೆ ರೈತರನ್ನು ಆತಂಕದಲ್ಲಿ ಸಿಲುಕಿಸಿದೆ. ತಾಂತ್ರಿಕ ದೋಷಗಳೇನೆ ಇದ್ದರೂ ಅಧಿಕಾರಿಗಳೆ ಮುಂದೆ ನಿಂತು ತಾಂತ್ರಿಕ ದೋಷ ಸರಿಪಡಿಸಬೇಕು. ಜಿಲ್ಲಾಧಿಕಾರಿಗಳು, ಜಂಟಿ ಕೃಷಿ ನಿರ್ದೇಶಕರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡದಿದ್ದರೆ ಮುಂದಿನ ವಾರ ಜಿಲ್ಲೆಯ ಎಲ್ಲಾ ತಹಸೀಲ್ದರ್‌ ಕಚೇರಿ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಗೆ ಬೀಗ ಜಡಿದು ಹೆದ್ದಾರಿ ತಡೆ ನಡೆಸುವ ಮೂಲಕ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿದರು. ಮನವಿ ಸ್ವೀಕರಿಸಿದ ತಹಸೀಲ್ದಾರ್‌ ಸುರೇಶಕುಮಾರ ಮಾತನಾಡಿ, ಎಲ್ಲಾ ರೈತರಿಗೆ ನ್ಯಾಯ ಒದಗಿಸಿಕೊಡುತ್ತೇವೆ ಆತಂಕ ಬೇಡ ಎಂದು ಭರವಸೆ ನೀಡಿದರು. ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ., ಕೃಷಿ ಅಧಿಕಾರಿಗಳಾದ ಬಸವರಾಜ ಎಂ. ಅರವಿಂದ, ರೈತ ಮುಖಂಡರಾದ ಚಂದ್ರಣ್ಣ ಬೇಡರ, ಚಂದ್ರಣ್ಣ ಬಣಕಾರ, ಹರಿಹರಗೌಡ ಪಾಟೀಲ, ಬಸವರಾಜ ಯಲ್ಲಕ್ಕನವರ, ಕವಿತಾ ಕೂಸಗೂರ, ಪುಷ್ಪಾ ಅಂಗಡಿ, ಇಂದ್ರಮ್ಮ ಸಣ್ಮನಿ, ಇಂದಿರಾ ಕಮ್ಮಾರ, ಯಲ್ಲಪ್ಪ ಗಂದಣ್ಣನವರ, ಗುರುನಗೌಡ ಉಜ್ಜನಗೌಡ್ರ, ಕಾಂತೇಶ ಬಣಕಾರ, ಶಿವಪ್ಪ ಬಡಪ್ಪನವರ, ಮಂಜು ಶಿವಲಿಂಗಪ್ಪನವರ ಮತ್ತಿತರರಿದ್ದರು.