ಸಾರಾಂಶ
ಹುಮನಾಬಾದ್: ಸ್ವಚ್ಛತೆ. ಕುಡಿಯುವ ನೀರು ಪೂರೈಕೆ, ವಿದ್ಯುತ್ ದೀಪ ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಪುರಸಭೆಗೆ ವಾರದ ಗಡವು ನೀಡಲಾಗಿದೆ ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಪಟ್ಟಣದ ಕೋಳಿವಾಡ, ಬೀಬಿಗಲ್ಲಿ ಸೇರಿದಂತೆ ಸ್ವಚ್ಛತೆ ಕುಡಿಯುವ ನೀರು, ವಿದ್ಯುತ್ ದೀಪ, ರಸ್ತೆ ಸಮಸ್ಯೆಗಳನ್ನು ಆಲಿಸಲು ಶನಿವಾರ ಬೆಳಿಗ್ಗೆ ಶಾಸಕರ ನೇತೃತ್ವದಲ್ಲಿ ಪುರಸಭೆ ಅಧಿಕಾರಿಗಳ ತಂಡದೊಂದಿಗೆ ಸಿಟಿ ರೌಂಡ್ಸ್ ಸಂಧರ್ಭದಲ್ಲಿ ಸ್ಥಾನಿಯಯ ಸಮಸ್ಯೆಗಳನ್ನು ಆಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಇಲ್ಲಿಯವರೆಗೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಆಗಲಿ ಅಥವಾ ಸದಸ್ಯರಾಗಲಿ ಪಟ್ಟಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದು, ಚರಂಡಿ ತುಂಬಿ ದುರ್ನಾತ ಬೀರುತ್ತಿದೆ, ಸ್ವಚ್ಛತೆ ಇಲ್ಲದಿರುವುದು ಕಂಡುಬಂತು, ವಿದ್ಯುತ್ ದೀಪ ಇಲ್ಲದೆ ಜನರು ಕತ್ತಲಲ್ಲೆ ಓಡಾಡುತ್ತಿದ್ದಾರೆ. ಕೊಳವೆ ಬಾವಿ ಇದ್ದು ಕೆಲಸಕ್ಕೆ ಬಾರದಂತಾಗಿದೆ. ಯಾರೊಬ್ಬರೂ ಭೇಟಿ ನೀಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ನಿಗದಿತ ಸಮಯದೊಳಗೆ ಅಗತ್ಯ ಕೆಲಸ ಪೂರ್ಣವಾಗಬೇಕೆಂಬುದು ನಮ್ಮ ಉದ್ದೇಶವಾಗಿದೆ. ಒಂದು ವಾರದಲ್ಲಿ ನೀರಿನ ಹಾಗೂ ಸ್ವಚ್ಛತೆಯ ಕೆಲಸ ಪೊರೈಸಬೇಕು. ವಾರದ ನಂತರ ಪುನಃ ಅದೇ ವಾರ್ಡ್‌ಗೆ ತೆರಳಿ ಪರಿಶೀಲಿಸಲಾಗುವುದು ಎಂದರು.
ಪುರಸಭೆಯ ಮುಖ್ಯಾಧಿಕಾರಿ ಫಿರೋಜ್ ಖಾನ್, ಎಂಜಿನಿಯರ ವಾಜಿದ, ಆರೋಗ್ಯಾಧಿಕಾರಿ ವಿಶ್ವರಾಧ್ಯ, ಸಲಿಮೋದ್ದಿನ್, ಪುರಸಭೆ ಸದಸ್ಯ ರಮೇಶ ಕಲ್ಲೂರ, ಮಾಜಿ ಸದಸ್ಯ ಮಲ್ಲಿಕಾರ್ಜುನ ಸಿಗಿ, ಗಿರೀಶ್ ಪಾಟೀಲ, ಶಿವಲಿಂಗ ಸ್ವಾಮಿ, ಡಿ.ಎನ್.ಪತ್ರಿ, ನಾಗಭೂಷಣ ಸಂಗಮ, ಗಿರೀಶ ತುಂಬಾ ಸೇರಿ ಅನೇಕರು ಇದ್ದರು.