ಸಾರಾಂಶ
ಪಾಲಿಕೆ ವ್ಯಾಪ್ತಿಯಲ್ಲಿ ಅವ್ಯಾಹತ ಗೋವಧೆ: ಆರೋಪ । ಹೋರಾಟದ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಇಮಾಂ ನಗರದ 2ನೇ ಕ್ರಾಸ್‌ನ ನಾಗರಕಟ್ಟೆ ಮುಂಭಾಗದಲ್ಲೇ ಅಕ್ರಮವಾಗಿ ಗೋವುಗಳ ಕಸಾಯಿಖಾನೆ, ಮಾಂಸದಂಗಡಿ ಇದ್ದು, ಇನ್ನೊಂದು ವಾರದೊಳಗೆ ತೆರವುಗೊಳಿಸದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಪಾಲಿಕೆ ವಿಪಕ್ಷ ನಾಯಕ ಆರ್.ಎಲ್.ಶಿವಪ್ರಕಾಶ ಪಾಲಿಕೆ ಆಯುಕ್ತರಿಗೆ ಎಚ್ಚರಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಮಾಂ ನಗರ 2ನೇ ಕ್ರಾಸ್ ನ ನಾಗರಕಟ್ಟೆ ಮುಂಭಾಗದ ಅಕ್ರಮ ಗೋ ಕಸಾಯಿಖಾನೆ, ಗೋಮಾಂಸದಂಗಡಿ ತೆರವುಗೊಳಿಸುವಂತೆ ಸಾಕಷ್ಟು ಸಲ ಸ್ಥಳೀಯ ನಿವಾಸಿಗಳು, ಹಿಂದುಗಳ ಮನವಿ ಕೊಟ್ಟಿದ್ದರೂ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದರು.ನಾಗರಕಟ್ಟೆ ಮುಂದೆಯೇ ಗೋವುಗಳ ವಧೆ ಮಾಡುತ್ತಿರುವುದು ಹಿಂದುಗಳ ಭಾವನೆಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ. ಸ್ಥಳೀಯರ ಪ್ರಕಾರ ಮುಂದೆ ಅದೇ ಜಾಗದಲ್ಲಿ ಐದಾರು ನಾಗರಕಟ್ಟೆಗಳು ಇದ್ದವು. ಆದರೆ, ಈಗ ಒಂದೇ ನಾಗರಕಟ್ಟೆ ಉಳಿದಿದೆ. ಅದರ ಮೇಲೆಯೇ ಗೋವುಗಳನ್ನು ಇಳಿಸಿ, ಗೋವುಗಳ ಆರಾಧಕರು, ಹಿಂದುಗಳ ಭಾವನೆಯನ್ನು ಕದಡವು ಕೆಲಸವನ್ನು ಅಕ್ರಮ ಕಸಾಯಿಖಾನೆ ನಡೆಸುವವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಿತ್ಯವೂ ನಾಗರಕಟ್ಟೆಗೆ ಪೂಜಿಸಲು ಬಂದು, ಹೋಗುವ ಭಕ್ತರ ಮನಸ್ಸಿಗೆ ನೋವುಂಟು ಮಾಡುವಂತಹ ಘಟನೆ ಅಲ್ಲಿ ನಿತ್ಯ ಸಾಮಾನ್ಯವಾಗಿದೆ. ಹಿಂದು-ಮುಸ್ಲಿಂ ಭಾವೈಕ್ಯತೆಗೂ ಧಕ್ಕೆ ತರುವಂತಹ ವಾತಾವಾರಣ ಅಲ್ಲಿದೆ. ಇಮಾಂ ನಗರದ ಗೋ ಕಸಾಯಿಖಾನೆ ತೆರವಿಗೆ ಸ್ಥಳೀಯ ನಿವಾಸಿಗಳು ಆಯುಕ್ತರು, ಸ್ಥಳೀಯ ಪಾಲಿಕೆ ಸದಸ್ಯರಿಗೆ ಮನವಿ ಕೊಟ್ಟಿದ್ದರೂ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದರು.ಅಕ್ರಮ ಗೋವು ಕಸಾಯಿಖಾನೆ, ಗೋಮಾಂಸದಂಗಡಿ ತೆರವಿಗೆ ಹೋದರೆ ಗುಂಪು ಕಟ್ಟಿಕೊಂಡು ಬರುತ್ತಾರೆ. ನಾವೇನು ಮಾಡಬೇಕೆಂಬುದಾಗಿ ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುವ ಪಾಲಿಕೆ ಅಧಿಕಾರಿಗಳಿಗೆ ಅಕ್ರಮ ಗೋವು ಕಸಾಯಿ ಖಾನೆ ತೆರವು ಮಾಡಿಸಲಾಗದಿದ್ದರೆ ಬೇರೆಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ಇಲ್ಲವೇ, ಕೆಲಸಕ್ಕೂ ರಾಜೀನಾಮೆ ಕೊಡಿ. ಗೋ ಹತ್ಯೆ ನಿಷೇಧ ಕಾಯ್ದೆಯಡಿ ಕೇಸ್ ದಾಖಲಿಸಿ, ತೆರವುಗೊಳಿಸಬೇಕೆಂಬ ಕನಿಷ್ಟ ಜ್ಞಾನ, ಅರಿವು ನಿಮಗಿಲ್ಲವೆ ಎಂದು ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಹರಿಹಾಯ್ದರು.
ಗೋ ಮಾಂಸದಂಗಡಿಯವರು ಬಿಸಾಡುವ ಮಾಂಸದ ತುಣುಕುಗಳು, ಮಲಮೂತ್ರ, ಕೊಯ್ದ ಚರ್ಮದ ತುಂಡುಗಳು ಒಳ ಚರಂಡಿ ಸೇರುತ್ತಿದ್ದು, ಇದರಿಂದ ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಸಂಜೆ ವೇಳೆ ಗೋಮಾಂಸ, ಕಸಾಯಿಖಾನೆ ತೊಳೆದ ನೀರನ್ನು ರಸ್ತೆಗೆ ಸುರಿಯುತ್ತಾರೆ. ಇದರಿಂದಾಗಿ ಸೊಳ್ಳೆ, ನೊಣ, ಕ್ರಿಮಿ ಕೀಟಗಳು ಹೆಚ್ಚಾಗುವ ಜೊತೆಗೆ ಅಲ್ಲಿ ದುರ್ವಾಸನೆ ಹೊಡೆಯುತ್ತಿದೆ. ಜನರು ಮೂಗು ಮುಚ್ಚಿಕೊಂಡು ಸಂಚರಿಸಬೇಕಿದ್ದು, ಸಾಂಕ್ರಾಮಿಕ ರೋಗ ಹರಡುವ ತಾಣವಾಗುತ್ತಿದೆ ಎಂದು ದೂರಿದರು.ಆರ್‌ಟಿಐನಡಿ ಪಾಲಿಕೆ ನೀಡಿದ ಮಾಹಿತಿಯಂತೆ ದಾವಣಗೆರೆಯಲ್ಲಿ ಗೋವುಗಳ ಕಸಾಯಿಖಾನೆ, ಗೋಮಾಂಸ ಮಾರಾಟಕ್ಕೆ ಅವಕಾಶ ನೀಡಿಲ್ಲ. ಆದರೆ, ಇಮಾಂ ನಗರ ಸೇರಿದಂತೆ ನಗರದ ವಿವಿಧೆಡೆ ಅಕ್ರಮವಾಗಿ ಗೋ ಕಸಾಯಿಖಾನೆ ಎಗ್ಗಿಲ್ಲದೇ ನಡೆಯುತ್ತಿದ್ದು, ದಷ್ಟಪುಷ್ಟ ಆರೋಗ್ಯದಿಂದ ಕೂಡಿಸುವ ಎತ್ತು, ಕರುಗಳು, ಮರಿಗಳವನ್ನು ವಧೆ ಮಾಡಲಾಗುತ್ತಿದೆ. ಇನ್ನೊಂದು ವಾರದಲ್ಲಿ ಅಕ್ರಮ ಗೋಮಾಂಸದಂಗಡಿ, ಗೋವುಗಳ ಕಸಾಯಿಖಾನೆ ತೆರವು ಮಾಡದಿದ್ದರೆ ಇಮಾಂ ನಗರದ 2ನೇ ಕ್ರಾಸ್‌ನ ನಾಗರಕಟ್ಟೆ ಸ್ಥಳದಿಂದಲೇ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದ್ದು, ಮುಂದೆ ಏನೇ ಆದರೂ ಪಾಲಿಕೆ ಆಯುಕ್ತರೇ ನೇರ ಹೊಣೆ ಎಂದು ಆರ್.ಎಲ್.ಶಿವಪ್ರಕಾಶ ಎಚ್ಚರಿಸಿದರು.
ಬಿಜೆಪಿ ಯುವ ಮುಖಂಡರಾದ ಶಂಕರಗೌಡ ಬಿರಾದಾರ್, ಹಿಂದು ಪರ ಸಂಘಟನೆ ಮುಖಂಡರಾದ ಕೆ.ಆರ್.ಮಲ್ಲಿಕಾರ್ಜುನ, ರಾಕೇಶ ಬಜರಂಗಿ, ಕಿರಣ್, ಮಂಜುನಾಥ, ಮಾಯಕೊಂಡ ರಾಕೇಶ ಇತರರು ಇದ್ದರು.