ಸಾರಾಂಶ
ಹಿರಿಯೂರು: ಸಾರ್ವಜನಿಕರ ಬೈಕ್ ಮುಂತಾದ ವಾಹನಗಳ ಸಂಚಾರಕ್ಕೆ ಹಂದಿಗಳು ಅಡ್ಡಿ ಉಂಟು ಮಾಡುತ್ತಿದ್ದು, ಇನ್ನು ಏಳು ದಿನಗಳ ಒಳಗಾಗಿ ನಗರ ಪ್ರದೇಶದಿಂದ ಹೊರಗಡೆ ಸ್ಥಳಾಂತರಸಿ ಸಾಕಾಣಿಕೆ ಮಾಡಿಕೊಳ್ಳಬೇಕು ಎಂದು ಪೌರಾಯುಕ್ತ ಎ. ವಾಸಿಂ ಹಂದಿ ಮಾಲೀಕರಿಗೆ ಗಡುವು ನೀಡಿದ್ದಾರೆ.
ನಗರಸಭೆಯಲ್ಲಿ ಸೋಮವಾರ ಹಂದಿ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲವಾದಲ್ಲಿ ಕರ್ನಾಟಕ ಪೌರಸಭೆಗಳ ಕಾಯ್ದೆ 1964 ಕಲಂ 223 ರಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆನೀಡಿದರು.ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಮಾತನಾಡಿ, ಸಾಕಿದ ಹಂದಿಗಳಿಂದ ಸಾರ್ವಜನಿಕರಿಗೆ ಉಪದ್ರವ ಉಂಟಾಗುವುದರ ಜೊತೆಗೆ ಸ್ವಚ್ಛ ಪರಿಸರಕ್ಕೂ ಹಾನಿಯಾಗುತ್ತಿದೆ. ಎಲ್ಲೆಂದರಲ್ಲಿ ಓಡಾಡುತ್ತಾ ಕೊಳಚೆ ಸೃಷ್ಟಿಸುತ್ತಿರುವ ಹಂದಿಗಳನ್ನು ಇನ್ನಾದರೂ ನಗರ ಬಿಟ್ಟು ಹೊರಗೆ ಸಾಕುವ ನಿರ್ಧಾರ ಮಾಡಬೇಕು ಎಂದು ಸೂಚಿಸಿದ್ದಾರೆ.
ನಗರವಾಸಿಗಳು ಹಂದಿಗಳ ಹಾವಳಿ ಬಗ್ಗೆ ಪದೇ ಪದೆ ದೂರುತ್ತಿದ್ದು ಇದುವರೆಗೂ ಹಲವಾರು ಬಾರಿ ಸಭೆ ಕರೆದು ಎಚ್ಚರಿಕೆ ನೀಡಿದರು ಸಹ ನೀವು ನಗರದಾಚೆ ಹಂದಿ ಸಾಕಣೆಗೆ ಮುಂದಾಗಿಲ್ಲ. ಇದರಿಂದಾಗಿ ತೀವ್ರ ತೊಂದರೆಯಾಗುತ್ತಿದೆ ಎಂದು ಹೇಳಿದರು.ನಗರಸಭಾ ಸದಸ್ಯ ಬಿ.ಎನ್. ಪ್ರಕಾಶ್ ಮಾತನಾಡಿ ಒಂದು ವೇಳೆ ನಗರ ವ್ಯಾಪ್ತಿಯಿಂದ ಹೊರಗಡೆ ಹಂದಿ ಸಾಕಾಣಿಕೆ ಮಾಡಿಕೊಳ್ಳದೆ ಹೋದರೆ ನಗರಸಭೆಯಿಂದ ಹಂದಿಗಳನ್ನು ಹಿಡಿಸಿ ಹೊರಗಡೆ ಕಳುಹಿಸಲಾಗುವುದು. ಅದರಿಂದ ಅದ ಯಾವುದೇ ನಷ್ಟಕ್ಕೆ ಪರಿಹಾರ ಕೇಳತಕ್ಕದಲ್ಲ. ಇದರಿಂದ ಉಂಟಾಗುವ ಎಲ್ಲಾ ವಿಧವಾದ ನಷ್ಟ ಕಷ್ಟಗಳಿಗೆ ನೀವೇ ಜವಾಬ್ದಾರರಾಗುತ್ತೀರಿ. ಇನ್ನೂ ಒಂದು ವಾರ ಸಮಯ ಕೊಟ್ಟಿರುವುದರಿಂದ ನಗರದ ಆರೋಗ್ಯದ ಹಿತದೃಷ್ಟಿಯಿಂದ ಹಂದಿಗಳನ್ನು ಹೊರ ಸಾಗಿಸಿ ಸಾಕಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಸದಸ್ಯ ಅನಿಲ್ ಕುಮಾರ್, ನಾಮ ನಿರ್ದೇಶಿತ ಸದಸ್ಯ ಗಿರೀಶ್, ಹಿರಿಯ ಆರೋಗ್ಯ ನಿರೀಕ್ಷಕಿ ವೈ. ಎಸ್. ಸಂಧ್ಯಾ, ಮಹಾಲಿಂಗಪ್ಪ, ಮೀನಾಕ್ಷಿ, ಕಿರಿಯ ಆರೋಗ್ಯ ನಿರೀಕ್ಷಕ ಮಹಾಲಿಂಗರಾಜು ಹಾಗೂ ಹಂದಿ ಸಾಕಣೆ ಮಾಲೀಕರು ಹಾಜರಿದ್ದರು.