ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಶ್ರೀಗಳಿಗೆ ವಾರದ ಗಡುವು

| Published : Apr 12 2025, 12:47 AM IST

ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಶ್ರೀಗಳಿಗೆ ವಾರದ ಗಡುವು
Share this Article
  • FB
  • TW
  • Linkdin
  • Email

ಸಾರಾಂಶ

ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಶ್ರೀಗಳ ವಿರುದ್ಧ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್‌ ಕಿಡಿಕಾರಿದ್ದು, ಸ್ವಾಮೀಜಿಗೆ ವಾರದೊಳಗೆ ನಿಮ್ಮ ನಡವಳಿಕೆ ಸುಧಾರಿಸದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಖಚಿತ ಎಂದು ಖಡಕ್‌ ವಾರ್ನಿಂಗ್‌ ನೀಡಿದ್ದಾರೆ.

ಹುಬ್ಬಳ್ಳಿ: ಬಿಜೆಪಿಯಿಂದ ಉಚ್ಚಾಟಿತರಾಗಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರವಾಗಿ ಬ್ಯಾಟಿಂಗ್‌ ಮಾಡುತ್ತಿರುವ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಶ್ರೀಗಳ ವಿರುದ್ಧ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್‌ ಕಿಡಿಕಾರಿದ್ದು, ಸ್ವಾಮೀಜಿಗೆ ವಾರದೊಳಗೆ ನಿಮ್ಮ ನಡವಳಿಕೆ ಸುಧಾರಿಸದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಖಚಿತ ಎಂದು ಖಡಕ್‌ ವಾರ್ನಿಂಗ್‌ ನೀಡಿದ್ದಾರೆ.

ಇದೇ ವೇಳೆ ಟ್ರಸ್ಟ್‌ ಹಾಗೂ ಪದಾಧಿಕಾರಿಗಳ ವಿರುದ್ಧ ಟೀಕೆ ಮಾಡುತ್ತಿರುವ ಯತ್ನಾಳ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ಕಾನೂನಾತ್ಮಕ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಟ್ರಸ್ಟ್‌ ಹಾಗೂ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಈ ಎಚ್ಚರಿಕೆ ನೀಡಿದರು. ಸಮಾಜದ ಪರವಾಗಿ ಮಾಧ್ಯಮದವರಿಗೆ ವಿವರ ನೀಡಿದ ವಿಧಾನಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಸ್ವಾಮೀಜಿಗೆ ಈ ಹಿಂದೆಯೂ ಒಂದು ಬಾರಿ ನೋಟಿಸ್‌ ನೀಡಲಾಗಿತ್ತು. ಆದರೂ ಅವರು ತಮ್ಮ ನಡವಳಿಕೆ ಸುಧಾರಿಸಿಕೊಂಡಿಲ್ಲ. ಈಗಲೂ ಅವರಿಗೆ ಎಚ್ಚರಿಕೆ ನೀಡುತ್ತಿದ್ದೇವೆ. ತಮ್ಮ ವರ್ತನೆ, ನಡವಳಿಕೆ ಸುಧಾರಿಸಿಕೊಳ್ಳಬೇಕು. ಸಮಾಜದ ಪರವಾಗಿ ಕೆಲಸ ಮಾಡಬೇಕು. ಅದು ಬಿಟ್ಟು ಯಾವುದೋ ವ್ಯಕ್ತಿ ಅಥವಾ ರಾಜಕೀಯ ಪಕ್ಷದ ಪರವಾಗಿ ಹೇಳಿಕೆ ನೀಡುವುದನ್ನು ಬಿಡಬೇಕು. ಇಲ್ಲದಿದ್ದಲ್ಲಿ ಮಾಜಿ, ಹಾಲಿ ಜನಪ್ರತಿನಿಧಿಗಳು, ಮುಖಂಡರ ಸಭೆ ಕರೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಾರದೊಳಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಸ್ವಾಮೀಜಿಯನ್ನು 2008ರಲ್ಲಿ ನೇಮಕ ಮಾಡಿರುವುದು ಟ್ರಸ್ಟ್‌, ಅವರನ್ನು ಕಿತ್ತುಹಾಕುವ ಅಧಿಕಾರವೂ ಟ್ರಸ್ಟ್‌ಗಿದೆ. ಈ ಬಗ್ಗೆ ಶ್ರೀಗಳಿಗೆ ಅರಿವಿರಲಿ. ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

ಇನ್ನು ಟ್ರಸ್ಟ್‌ ಅಧ್ಯಕ್ಷ ಪ್ರಭಣ್ಣ ಹುಣಸಿಕಟ್ಟೆ ಅವರ ಮೇಲೆ ಬಸನಗೌಡ ಪಾಟೀಲ ಯತ್ನಾಳ ಅವರು ಇಲ್ಲ-ಸಲ್ಲದ ಆರೋಪ ಮಾಡಿದ್ದಾರೆ. ಖರೀದಿಸಿದ ಆಸ್ತಿಯೆಲ್ಲ ಟ್ರಸ್ಟ್‌ ಹೆಸರಲ್ಲೇ ಇವೆ. ಮೊದಲಿಗೆ 2 ಎಕರೆ ಜಮೀನನ್ನು ಪ್ರಭಣ್ಣ ಹೆಸರಲ್ಲಿ ಖರೀದಿಸಲಾಗಿತ್ತು. ಆಗ ಕೆಲವೊಂದು ತೊಡಕುಗಳಿದ್ದವು. ಹೀಗಾಗಿ, ಅವರ ಹೆಸರಲ್ಲಿ ಖರೀದಿಸಲಾಗಿತ್ತು. ಆದರೆ, ಖರೀದಿಯಾದ ಬಳಿಕ ಟ್ರಸ್ಟ್‌ಗೆ ದಾನ ಪತ್ರದ ಮೂಲಕ ನೀಡಿದ್ದಾರೆ. ಯತ್ನಾಳ ಅರಿವಿಲ್ಲದೇ ಏನೇನೋ ಆರೋಪ ಮಾಡುತ್ತಿದ್ದಾರೆ. ಇದರಿಂದ ಟ್ರಸ್ಟ್‌ ಅನ್ನು ಅವಮಾನ ಮಾಡಿದ್ದಾರೆ. ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಕಾನೂನಾತ್ಮಕ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಟ್ರಸ್ಟ್‌ನ ಮತ್ತೊಬ್ಬ ಮುಖಂಡ, ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ವ್ಯಕ್ತಿಯ ಹಿಂದೆ ಹೋಗುವುದು ಸರಿಯಲ್ಲ. ವ್ಯಕ್ತಿಯ ವೈಯಕ್ತಿಕ ವಿಚಾರಕ್ಕೆ ಸ್ವಾಮೀಜಿಗಳನ್ನು ನೇಮಿಸಿಲ್ಲ. ಗುರುಗಳಾದಂಥವರು ಸಮಾನವಾಗಿ ನಡೆದುಕೊಳ್ಳಬೇಕು. ಎಲ್ಲರೂ ಕೂಡಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಎಲ್ಲರಿಗೂ ಸೇರಿದ್ದು. ಇದನ್ನು ಸ್ವಾಮೀಜಿ ಅರ್ಥ ಮಾಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ಟ್ರಸ್ಟ್‌ನ ಅಧ್ಯಕ್ಷ ಪ್ರಭಣ್ಣ ಹುಣಸಿಕಟ್ಟೆ, ಮಾಜಿ ಸಚಿವ ಮುರುಗೇಶ ನಿರಾಣಿ, ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ, ಮಾಜಿ ಶಾಸಕರಾದ ಎಂ.ಎಸ್‌. ಅಕ್ಕಿ, ಎಸ್.ಐ. ಚಿಕ್ಕನಗೌಡರ, ಮುಖಂಡರಾದ ರಾಜಶೇಖರ ಮೆಣಸಿನಕಾಯಿ, ಎಲ್‌.ಎಂ. ಪಾಟೀಲ, ರಮೇಶ ಪಾಟೀಲ, ನಾಗರಾಜ ಪಟ್ಟಣಶೆಟ್ಟಿ, ಕಲ್ಲಪ್ಪ ಯಲಿನಾಳ, ಭರತ ಅಸೂಟಿ, ಎಂ.ಎಸ್‌. ಮಲ್ಲಾಪುರ ಇದ್ದರು.

ಆಣೆ-ಪ್ರಮಾಣ ಮಾಡಲಿ

ಮೀಸಲಾತಿ ಹೋರಾಟ ವಾಪಸ್ ಪಡೆಯಲು ಸ್ವಾಮೀಜಿಗೆ ₹10 ಕೋಟಿ ಆಮಿಷ ಒಡ್ಡಿದ್ದೆ ಎಂದು ಯತ್ನಾಳ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಇದು ಸುಳ್ಳು. ನಾನು ಯಾವುದೇ ಬಗೆಯ ಹೋರಾಟ ಕೈಬಿಡುವಂತೆ ಸ್ವಾಮೀಜಿಗೆ ಆಮಿಷ ಒಡ್ಡಿಲ್ಲ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಸ್ಪಷ್ಟಪಡಿಸಿದರು.

ಈ ಬಗ್ಗೆ ಇಲ್ಲಿನ ಸಿದ್ದಾರೂಢ ಮಠ ಅಥವಾ ವಿಜಯಪುರದ ಸಿದ್ದೇಶ್ವರ ಮಠದಲ್ಲಿ ಯತ್ನಾಳ್ ಆಣೆ ಮಾಡಲಿ. ಸಾಬೀತಾದರೆ ನಾನು ಸಾರ್ವಜನಿಕ ಜೀವನದಿಂದಲೇ ನಿವೃತ್ತಿ ಹೊಂದುತ್ತೇನೆ. ಇಲ್ಲದಿದ್ದಲ್ಲಿ ಅವರು ರಾಜೀನಾಮೆ ನೀಡಲಿ ಎಂದು ಸವಾಲೆಸೆದರು.