ಕನ್ನಡಪ್ರಭ ವಾರ್ತೆ ಪಾವಗಡ
ಗ್ರಾಮೀಣ ಜನತೆಯ ಕುಂದುಕೊರತೆ ನಿವಾರಿಸುವ ಹಿನ್ನಲೆ ಇನ್ನೂ ಮುಂದೆ ಪ್ರತಿವಾರ ಗ್ರಾಪಂ ಕೇಂದ್ರ ಕಚೇರಿದಲ್ಲಿ ಜನಸಂಪರ್ಕ ಸಭೆ ನಡೆಸುವ ಮೂಲಕ ಸ್ಥಳದಲ್ಲಿಯೇ ಸಮಸ್ಯೆ ನಿವಾರಣೆಗೆ ಒತ್ತು ನೀಡುವುದಾಗಿ ಶಾಸಕ ಹಾಗೂ ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಹೇಳಿದರು.ಸೋಮವಾರ ಪಟ್ಟಣದ ಶಾಸಕರ ಕಚೇರಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಇಲಾಖಾವಾರು ಜನ ಸಾಮಾನ್ಯರ ಸಮಸ್ಯೆ ನಿವಾರಣೆ ಹಿನ್ನಲೆಯಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳ ಜತೆ ತಾಲೂಕು ಕೇಂದ್ರದಲ್ಲಿ ಜನ ಸಂಪರ್ಕ ಸಭೆ ನಡೆಸಿದ್ದು ಜಮೀನು ಹಾಗೂ ನಿವೇಶನಕ್ಕೆ ಸಂಬಂಧಪಟ್ಟಂತೆ 150ಕ್ಕಿಂತ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. ಗ್ರಾಪಂ ಹಾಗೂ ಇತರೆ ಕಚೇರಿಗಳಿಗೆ ಅಧಿಕಾರಿಗಳ ಭೇಟಿ ನಿರ್ಲಕ್ಷ್ಯ ಹಾಗೂ ಸಾರ್ವಜನಿಕ ಸಮಸ್ಯೆ ನಿವಾರಣೆಯಲ್ಲಿ ವಿಳಂಬದ ಬಗ್ಗೆ ದೂರುಗಳು ಕೇಳಿಬಂದಿವೆ. ಇದಕ್ಕೆ ಮುಖ್ಯವಾಗಿ ಪಿಡಿಒಗಳು ಕೇಂದ್ರ ಸ್ಥಾನದಲ್ಲಿ ಇಲ್ಲದೇ ಇರುವುದು ಗೊತ್ತಾಗಿದೆ. ಗ್ರಾಪಂಗೆ ಬೇಕಾಬಿಟ್ಟಿ ಭೇಟಿ ಹಾಗೂ ಜನತೆಯ ಸಮಸ್ಯೆಗೆ ಸ್ಪಂದಿಸದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ತಾಪಂ ಇಒಗೆ ಖಡಕ್ ಆದೇಶ ನೀಡಲಾಗಿದೆ ಎಂದರು.
ಇನ್ನೂ ಮುಂದೆ ತಾಲೂಕಿನ ಪ್ರತಿ ಗ್ರಾಪಂ ಕೇಂದ್ರ ಕಚೇರಿಯಲ್ಲಿ ವಾರಕ್ಕೊಮ್ಮೆ ತಾಲೂಕು ಮಟ್ಟದ ಅಧಿಕಾರಿಗಳ ಜತೆ ಜನ ಸಂಪರ್ಕ ಸಭೆ ಏರ್ಪಾಡಿಸಿ ಅಹವಾಲು ಸ್ವೀರಿಸುವ ಮೂಲಕ ಸ್ಥಳದಲ್ಲಿಯೇ ಸಮಸ್ಯೆ ನಿವಾರಿಸುವುದಾಗಿ ಹೇಳಿದರು. ಈ ವೇಳೆ ತಹಸೀಲ್ದಾರ್ ವೈ.ರವಿ, ತಾಪಂ ಇಒ ಮಧುಸೂದನ್, ಪುರಸಭೆ ಮುಖ್ಯಾಧಿಕಾರಿ ಜಾಫರ್ ಷರೀಫ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಜಯ್‌ಕುಮಾರ್ ಇತರರಿದ್ದರು.