ಸಾರಾಂಶ
ನ್ಯಾಮತಿ ತಾಲೂಕಿನ ಬಸವನಹಳ್ಳಿಯ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿದಾರರಿಗೆ ತೂಕದಲ್ಲಿ ವಂಚನೆ ಮಾಡಿದ ಪ್ರಕರಣದಡಿ ಸ್ಥಳದಲ್ಲೇ ನ್ಯಾಯಬೆಲೆ ಅಂಗಡಿ ಅಮಾನತು ಮಾಡಲು ದಾವಣಗೆರೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ದಾವಣಗೆರೆ: ನ್ಯಾಮತಿ ತಾಲೂಕಿನ ಬಸವನಹಳ್ಳಿಯ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿದಾರರಿಗೆ ತೂಕದಲ್ಲಿ ವಂಚನೆ ಮಾಡಿದ ಪ್ರಕರಣದಡಿ ಸ್ಥಳದಲ್ಲೇ ನ್ಯಾಯಬೆಲೆ ಅಂಗಡಿ ಅಮಾನತು ಮಾಡಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಜಿಲ್ಲಾಧಿಕಾರಿ ಶನಿವಾರ ಹೊನ್ನಾಳಿಗೆ ಭೇಟಿ ನೀಡಿ ದುರಸ್ತಿಯಾದ ಕಾಲುವೆ ವೀಕ್ಷಣೆಯಾಗಿ ಬಸವನಹಳ್ಳಿ ಮಾರ್ಗವಾಗಿ ತೆರಳಿದ್ದರು. ಅಲ್ಲಿ ನ್ಯಾಯಬೆಲೆ ಅಂಗಡಿ ನೋಡಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅವರು ತಮ್ಮ ವಾಹನ ನಿಲ್ಲಿಸಿ ನ್ಯಾಯಬೆಲೆ ಅಂಗಡಿಗೆ ತೆರಳಿದರು.ಆಗ ಅಲ್ಲಿ ಓರ್ವ ಮಹಿಳೆ ಪಡಿತರ ಧಾನ್ಯಗಳನ್ನು ಪಡೆದುಕೊಂಡಿದ್ದರು. ಅವರನ್ನು ಮಾತನಾಡಿಸಿ ನಿಮ್ಮ ಮನೆಯಲ್ಲಿ ಎಷ್ಟು ಸದಸ್ಯರಿದ್ದಾರೆ, ಎಷ್ಟು ಆಹಾರ ಧಾನ್ಯ ನೀಡುತ್ತಿದ್ದಾರೆ ಎಂದು ಮಾಹಿತಿ ಪಡೆದುಕೊಂಡರು. ಮಹಿಳೆ 3 ಕೆ.ಜಿ. ಅಕ್ಕಿ ಹಾಗೂ 2 ಕೆ.ಜಿ. ರಾಗಿ ಪಡೆಯಲಾಗಿದೆ ಎಂದಾಗ ತೂಕದ ನಿಖರತೆ ಪರೀಕ್ಷೆ ಮಾಡಲು ಮರುತೂಕ ಮಾಡಲು ಡಿಸಿ ತಿಳಿಸಿದರು.
ಆಗ ಒಟ್ಟು ಆಹಾರ ಧಾನ್ಯ 5 ಕೆಜಿ ನೀಡಬೇಕಿದ್ದುದು 4 ಕೆಜಿ 300 ಗ್ರಾಂ ತೂಕ ಮಾತ್ರ ಬಂದಿತು. ಪಡಿತರರಿಗೆ ತೂಕದಲ್ಲಿ 700 ಗ್ರಾಂ ಮೋಸ ಮಾಡಲಾಗುತ್ತಿದೆ ಎಂಬುದನ್ನು ಜಿಲ್ಲಾಧಿಕಾರಿ ಅರಿತರು. ಬಳಿಕ ಸ್ಥಳದಲ್ಲಿಯೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ, ಸದರಿ ನ್ಯಾಯಬೆಲೆ ಅಂಗಡಿಯನ್ನು ಅಮಾನತು ಮಾಡಲು ಸೂಚನೆ ನೀಡಿದರು.ಈ ವೇಳೆ ಹೊನ್ನಾಳಿ ಉಪವಿಭಾಗಾಧಿಕಾರಿ ಅಭಿಷೇಕ್ ಹಾಗೂ ತಹಸೀಲ್ದಾರ್ ಉಪಸ್ಥಿತರಿದ್ದರು.
- - - -31ಕೆಡಿವಿಜಿ40, 41ಃ:ತೂಕದಲ್ಲಿ ವಂಚನೆ ಮಾಡಿದ ಹಿನ್ನಲೆಯಲ್ಲಿ ನ್ಯಾಮತಿ ತಾಲೂಕು ಬಸವನಹಳ್ಳಿಯ ನ್ಯಾಯಬೆಲೆ ಅಂಗಡಿಯನ್ನು ಅಮಾನತು ಮಾಡಲು ಡಿಸಿ ಸೂಚನೆ ನೀಡಿದರು.