ನಿರ್ಮಾಣ ಹಂತದ ಸ್ವಾಗತ ಕಮಾನು ಧರೆಗೆ

| Published : Dec 06 2024, 08:57 AM IST

ಸಾರಾಂಶ

ನಿರ್ಮಾಣ ಹಂತದಲ್ಲಿದ್ದ ಸ್ವಾಗತ ಕಮಾನಿನ ಆರ್ ಸಿಸಿ ಕಳಚಿ ಬಿದ್ದ ಘಟನೆ ತಾಲೂಕಿನ ದೀಟೂರು ಗ್ರಾಮದ ಬಳಿ ಬುಧವಾರ ನಡೆದಿದೆ

ಹರಿಹರ: ನಿರ್ಮಾಣ ಹಂತದಲ್ಲಿದ್ದ ಸ್ವಾಗತ ಕಮಾನಿನ ಆರ್ ಸಿಸಿ ಕಳಚಿ ಬಿದ್ದ ಘಟನೆ ತಾಲೂಕಿನ ದೀಟೂರು ಗ್ರಾಮದ ಬಳಿ ಬುಧವಾರ ನಡೆದಿದೆ.ಘಟನೆಯಲ್ಲಿ ಓರ್ವ ಕಾರ್ಮಿಕನಿಗೆ ಸಣ್ಣ, ಪುಟ್ಟ ಗಾಯವಾಗಿರುವುದು ಬಿಟ್ಟರೆ ಬೇರೆ ಕಾರ್ಮಿಕರು ಅಪಾಯದಿಂದ ಅದೃಷ್ಟವಷಾತ್ ಪಾರಾಗಿದ್ದಾರೆ. ದೀಟೂರು ಗ್ರಾಮದ ಮಹೇಶ್ವರಸ್ವಾಮಿ ದೇವಸ್ಥಾನದ ವತಿಯಿಂದ ಗ್ರಾಮದ ಆರಂಭದ ಸ್ಥಳದಲ್ಲಿ ಸ್ವಾಗತ ಕಮಾನನ್ನು ನಿರ್ಮಿಸಲಾಗುತ್ತಿತ್ತು. 30 ಅಡಿಯ ಈ ರಸ್ತೆಯಲ್ಲಿ ಸ್ವಾಗತ ಕಮಾನಿಗಾಗಿ ಎರಡೂ ಬದಿ ಪಿಲ್ಲರ್ ನಿರ್ಮಾಣ ಕಾರ್ಯ ಆಗಿತ್ತು. ಎರಡು ಪಿಲ್ಲರ್‍ಗಳ ಮಧ್ಯದಲ್ಲಿ ಆರ್ ಸಿಸಿ ಹಾಕುವ ಕಾರ್ಯ ನಡೆದಿತ್ತು. ಅಂದಾಜು 15 ಕಾರ್ಮಿಕರಿಂದ ಬೆಳಿಗ್ಗೆಯಿಂದ ಆರ್‍ಸಿಸಿ ಹಾಕುವ ನಡೆದಿದೆ.

ಮಧ್ಯಾಹ್ನ 2ರ ಸುಮಾರಿಗೆ ಆಧಾರವಾಗಿಟ್ಟಿದ್ದ ಕಟ್ಟಿಗೆ ಪೋಲ್ಸ್ ಗಳು ಭಾರ ತಾಳಲಾರದೆ ಉರುಳಿದ್ದು, ಅದರ ಜೊತೆಗೆ ಕಬ್ಬಿಣದ ಸರಳಿನ ಹಂದರ ಹಾಗೂ ಆರ್‍ಸಿಸಿಯು ಮೇಲಿನಿಂದ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಓರ್ವ ಕಾರ್ಮಿಕನು ಹಂದರದ ಕೆಳಕ್ಕೆ ಸಿಕ್ಕಿ ಬಿದ್ದಿದ್ದಾನೆ. ಇತರೆ ಕಾರ್ಮಿಕರು ತಕ್ಷಣ ಕಾರ್ಯಪ್ರವೃತ್ತರಾಗಿ ಆತನನ್ನು ಹೊರಕ್ಕೆ ಸುರಕ್ಷಿತವಾಗಿ ಕರೆತಂದರು.