ಸಂಭ್ರಮದಿಂದ ಹೊಸ ವರ್ಷಕ್ಕೆ ಸ್ವಾಗತ

| Published : Jan 01 2024, 01:15 AM IST

ಸಂಭ್ರಮದಿಂದ ಹೊಸ ವರ್ಷಕ್ಕೆ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸ ವರ್ಷಕ್ಕೆ ಉತ್ತರ ಕನ್ನಡ ಜಿಲ್ಲೆಯ ಜನ ಸಂಭ್ರಮದ ಸ್ವಾಗತ ಕೋರಿದ್ದಾರೆ. ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿದ್ದವು. ಲಾಡ್ಜ್, ರೆಸಾರ್ಟ್ ಭರ್ತಿಯಾಗಿದ್ದವು.

ಕಾರವಾರ: ಜಿಲ್ಲೆಯಾದ್ಯಂತ ಹೊಸ ವರ್ಷಾಚರಣೆ ಸಂಭ್ರಮದಿಂದ ನಡೆಯಿತು. ಮಧ್ಯರಾತ್ರಿ ೧೨ ಗಂಟೆಗೆ ಹಲವೆಡೆ ಪಟಾಕಿ ಸಿಡಿಸಿ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಯಿತು. ಹಲವಾರು ಸಿಹಿ-ಕಹಿಗಳ ನಡುವೆ ೨೦೨೩ರನ್ನು ಬೀಳ್ಕೊಡಲಾಯಿತು.

ಸಂಜೆ ಆಗುತ್ತಿದ್ದಂತೆ ಪ್ರವಾಸಿ ತಾಣಗಳತ್ತ ಜನರು ಬರಲು ಆರಂಭಿಸಿದ್ದರು. ಪ್ರಮುಖವಾಗಿ ಕಾರವಾರದ ರವೀಂದ್ರನಾಥ ಠಾಗೋರ, ಗೋಕರ್ಣದ ಮುಖ್ಯ, ಓಂ, ಕುಡ್ಲೆ, ಮುರ್ಡೇಶ್ವರದ ಕಡಲ ತೀರದಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕವಾಗಿತ್ತು. ಹಲವು ಪ್ರವಾಸಿಗರು ಸಮೀಪದ ಹೊಟೆಲ್‌ಗಳಿಂದ ಊಟ, ಸಿಹಿ ತಿಂಡಿ ಪಾರ್ಸೆಲ್ ತಂದಿದ್ದರೆ, ಇನ್ನು ಕೆಲವರು ತೀರದಲ್ಲೇ ಊಟ ತಯಾರಿಸಿಕೊಂಡರು. ಸ್ಥಳೀಯರೂ ಮನೆಯಿಂದಲೇ ಬಗೆ ಬಗೆಯ ತಿಂಡಿ-ತಿನಿಸು, ಊಟ ಇತ್ಯಾದಿ ತಯಾರಿಸಿಕೊಂಡು ಕುಟುಂಬಸ್ಥರೊಂದಿಗೆ, ಸ್ನೇಹಿತರೊಂದಿಗೆ ಕಡಲ ತೀರಕ್ಕೆ ತೆರಳಿ ಭೋಜನ ಸವಿದರು.

ಗೋವಾದಲ್ಲಿ ವಿಜೃಂಭಣೆಯಿಂದ ಹೊಸ ವರ್ಷಾಚರಣೆ ನಡೆಯುತ್ತದೆ. ತಿಂಗಳು ಮೊದಲೇ ಅಲ್ಲಿನ ಲಾಡ್ಜ್, ರೆಸಾರ್ಟ್‌ಗಳು ಬುಕ್ ಆಗಿರುತ್ತವೆ. ಹೀಗಾಗಿ ಅಲ್ಲಿ ಉಳಿದುಕೊಳ್ಳಲು ಅವಕಾಶ ಸಿಗದೇ ಇದ್ದವರು ಕಾರವಾರ-ಅಂಕೋಲಾದಲ್ಲಿ ಲಾಡ್ಜ್, ರೆಸಾಟ್‌ಗಳಲ್ಲಿ ಉಳಿದುಕೊಂಡು ಡಿ. ೩೧ರಂದು ಗೋವಾಕ್ಕೆ ತೆರಳಿ ಹೊಸ ವರ್ಷವನ್ನು ಸಂಭ್ರಮಿಸಿದರು. ಇದಲ್ಲದೇ ಮುರ್ಡೇಶ್ವರದಲ್ಲಿ ಲಾಡ್ಜ್‌ಗಳು ತುಂಬಿದ್ದರಿಂದ ಭಟ್ಕಳ, ಹೊನ್ನಾವರದಲ್ಲಿ, ಗೋಕರ್ಣದಲ್ಲಿ ಲಾಡ್ಜ್, ರೆಸಾರ್ಟ್ ಫುಲ್ ಆಗಿದ್ದರಿಂದ ಅಂಕೋಲಾ, ಕುಮಟಾ ಭಾಗದಲ್ಲಿ ಪ್ರವಾಸಿಗರು ವಾಸ್ತವ್ಯ ಹೂಡಿದ್ದರು. ದಾಂಡೇಲಿ, ಜೋಯಿಡಾ ಭಾಗದಲ್ಲಿ ಕೂಡಾ ಹೋಮ್ ಸ್ಟೇ, ರೆಸಾರ್ಟ್, ಲಾಡ್ಜ್‌ಗಳು ತುಂಬಿದ್ದವು. ಕೆಲವು ರೆಸಾರ್ಟ್, ಹೊಟೆಲ್‌ಗಳಲ್ಲಿ ಕೂಡಾ ಹೊಸ ವರ್ಷದ ಹಿನ್ನೆಲೆಯಲ್ಲಿ ಸಂಗೀತ ಸಂಜೆ, ಆರ್ಕೆಸ್ಟ್ರಾ, ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಟಾಗೋರ ಕಡಲತೀರದಲ್ಲಿ ಸಂಗೀತ ಸಂಜೆ: ಇಲ್ಲಿನ ರವೀಂದ್ರನಾಥ ಟಾಗೋರ್ ಕಡಲ ತೀರಗಳಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ಸಂಗೀತ ಸಂಜೆಯಲ್ಲಿ ಇಂಡಿಯನ್ ಐಡಿಯಲ್ ಖ್ಯಾತಿಯ ನಚಿಕೇತ ಲೇಲೆ, ಮಿಶ್ಮಿ ಬೋಸ್ ಜನರನ್ನು ಮಂತ್ರ ಮುಗ್ಧಗೊಳಿಸಿದರು.ಉತ್ತರ ಕನ್ನಡ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.ವಿವಿಧ ಹಿಂದಿ ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಿದರು. ಇದಕ್ಕೂ ಪೂರ್ವ ಸ್ಥಳೀಯ ಕಲಾವಿದರಿಂದ ನೃತ್ಯ ಹಾಗೂ ಗಾಯನ ಕೂಡಾ ನಡೆಯಿತು.ಮುಖ್ಯ ವೇದಿಕೆ ಹೋರತಾಗಿ ಎಲ್‌ಇಡಿ ಸ್ಕ್ರೀನ್ ಇರಲಿಲ್ಲ. ಹೀಗಾಗಿ ಸಾರ್ವಜನಿಕರಿಗೆ ವೀಕ್ಷಿಸಲು ಸಮಸ್ಯೆ ಉಂಟಾಯಿತು. ಶಾಸಕ ಸತೀಶ‌ ಸೈಲ್, ಜಿಲ್ಲಾಡಳಿತ ಗಂಗೂಬಾಯಿ ಮಾನಕರ, ಅಪರ‌ ಜಿಲ್ಲಾಧಿಕಾರಿ ಪ್ರಕಾಶ ರಜಪೂರ ಒಳಗೊಂಡು ಅಧಿಕಾರಿಗಳು, ಸಿಬ್ಬಂದಿ ಇದ್ದರು.‌