ಸಾರಾಂಶ
ಡಾ। ಬಿ.ಆರ್.ಅಂಬೇಡ್ಕರ್ ಅವರು ಬೆಳಗಾವಿ ಜಿಲ್ಲೆ ನಿಪ್ಪಾಣಿಗೆ ಭೇಟಿ ನೀಡಿ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ನಿಪ್ಪಾಣಿಗೆ ಬಿಜೆಪಿ ಹಮ್ಮಿಕೊಂಡಿರುವ ಭೀಮ ಹೆಜ್ಜೆ-100 ರಥಯಾತ್ರೆ ಶನಿವಾರ ಸಂಜೆ ನಗರಕ್ಕೆ ಆಗಮಿಸಿದಾಗ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೋರಿದರು.
ಕನ್ನಡಪ್ರಭ ವಾರ್ತೆ ಹಾವೇರಿ
ಡಾ। ಬಿ.ಆರ್.ಅಂಬೇಡ್ಕರ್ ಅವರು ಬೆಳಗಾವಿ ಜಿಲ್ಲೆ ನಿಪ್ಪಾಣಿಗೆ ಭೇಟಿ ನೀಡಿ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ನಿಪ್ಪಾಣಿಗೆ ಬಿಜೆಪಿ ಹಮ್ಮಿಕೊಂಡಿರುವ ಭೀಮ ಹೆಜ್ಜೆ-100 ರಥಯಾತ್ರೆ ಶನಿವಾರ ಸಂಜೆ ನಗರಕ್ಕೆ ಆಗಮಿಸಿದಾಗ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೋರಿದರು.ನಗರದ ಸಂಗೂರ ಕರಿಯಪ್ಪ ವೃತ್ತದ ಬಳಿ ರಥಯಾತ್ರೆಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಬಳಿಕ, ರಥಯಾತ್ರೆ ಪುರಸಿದ್ದೇಶ್ವರ ದೇವಸ್ಥಾನದಿಂದ ಡಾ। ಬಿ.ಆರ್.ಅಂಬೇಡ್ಕರ ವೃತ್ತ ತಲುಪಿತು.
ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಯಾತ್ರೆಯ ನೇತೃತ್ವ ವಹಿಸಿದ್ದ ಮಾಜಿ ಸಂಸದ ಮುನಿಸ್ವಾಮಿ, ಕಾಂಗ್ರೆಸ್‌ನವರು ಅಂಬೇಡ್ಕರ್ ಅವರನ್ನು ಅವಮಾನ ಮಾಡಿದ ಬಗ್ಗೆ ಬಿಜೆಪಿ ನಿರಂತರವಾಗಿ ಕಾರ್ಯಕ್ರಮ ಮಾಡಿಕೊಂಡು ಜನರಿಗೆ ತಿಳಿಸುತ್ತಾ ಬಂದಿದೆ. ನೂರು ವರ್ಷಗಳ ಹಿಂದೆ ಅಂಬೇಡ್ಕರ್ ಅವರು ನಿಪ್ಪಾಣಿಯಲ್ಲಿ ಹಿತಕಾರಿಣಿ ಸಭಾದ ಅಧಿವೇಶನದಲ್ಲಿ ಭಾಗವಹಿಸಿದ್ದರು. ಶಿಕ್ಷಣ ಮತ್ತು ವಸತಿ ಶಾಲೆಯ ಬಗ್ಗೆ ಮಾತನಾಡಿದ್ದರು. ಈ ಐತಿಹಾಸಿಕ ಭೀಮ ಹೆಜ್ಜೆಗೆ ಈಗ ಶತಮಾನದ ಸಂಭ್ರಮ ಎಂದರು.ರಾಜ್ಯದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಮೀಸಲಾಗಿದ್ದ ₹38 ಸಾವಿರ ಕೋಟಿ ನುಂಗಿ ಹಾಕಿದೆ. ಅಭಿವೃದ್ಧಿ ನಿಗಮಗಳಿಗೂ ಬಿಡಿಗಾಸು ಕೊಟ್ಟಿಲ್ಲ. ಅಂಬೇಡ್ಕರ್ ಹೆಸರು ಹೇಳಿಕೊಂಡು ದಲಿತರ ಮತ ಪಡೆಯುವ ಕಾಂಗ್ರೆಸ್, ದಲಿತ ವರ್ಗದ ಏಳಿಗೆಗೆ ಏನನ್ನೂ ಮಾಡದೆ ಅನ್ಯಾಯ ಮಾಡುತ್ತಲೇ ಬಂದಿದೆ. ಅಂಬೇಡ್ಕರ್‌ಗೆ ಮಾಡಿದ ಅವಮಾನವನ್ನೇ ಕಾಂಗ್ರೆಸ್‌ನವರು ದಲಿತರಿಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.