ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ಅವರ ಪುಣ್ಯ ದಿನದ ಪ್ರಯುಕ್ತ ಕೆಪಿಸಿಸಿಯ ಕಾರ್ಮಿಕ ಘಟಕದಿಂದ ಕಳೆದ 35 ವರ್ಷದಿಂದಲೂ ನಿರಂತರವಾಗಿ ನಡೆಯುತ್ತಿರುವ ರಾಜೀವ್ ಜ್ಯೋತಿ ಯಾತ್ರೆಯು ಬೆಂಗಳೂರಿನಿಂದ ಪೆರಂಬದೂರಿಗೆ ತೆರಳುತ್ತಿದ್ದು, ಮಾರ್ಗ ಮಧ್ಯೆ ಚಾಮರಾಜನಗರದಲ್ಲಿ ಜ್ಯೋತಿಯನ್ನು ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು.

ಬೆಂಗಳೂರಿಂದ ಮೇ 15ರಂದು ರಾಜೀವ್ ಜ್ಯೋತಿ ಯಾತ್ರೆ ಹೊರಟು ಮೈಸೂರು, ಮಂಡ್ಯ ಮಾರ್ಗವಾಗಿ ಶನಿವಾರ ಸಂಜೆ ಚಾಮರಾಜನಗರಕ್ಕೆ ತಲುಪಿತು. ಅಲ್ಲಿಂದ ತಮಿಳುನಾಡಿಗೆ ಹೊರಟ ಯಾತ್ರೆಯನ್ನು ಡಾ. ಬಿ.ಆರ್. ಅಂಬೇಡ್ಕರ್ ಭವನದಿಂದ ಕಾಂಗ್ರೆಸ್ ಕಚೇರಿಯವರೆಗೆ ಸ್ವಾಗತಿಸಿ, ತಮಿಳುನಾಡಿಗೆ ಕಳುಹಿಸಿಕೊಟ್ಟರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ರಾಜೀವ್ ಜ್ಯೋತಿ ಸ್ವೀಕರಿಸಿ ಮಾತನಾಡಿ, ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ರಾಂತಿ, ದೂರಸಂಪರ್ಕ ವಲಯದ ಅಭಿವೃದ್ಧಿ, 18 ವರ್ಷಕ್ಕೆ ಮತದಾನದ ಹಕ್ಕು, ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆ ಮತ್ತು ಸ್ಥಳೀಯ ಆಡಳಿತದಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಮೂಲಕ ಆಧುನಿಕ ಭಾರತ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿರುವ ಮಹಾಪುರುಷ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಸ್ಗರ್ ಮಾತನಾಡಿ, ದೇಶದಲ್ಲಿರುವ ಕೋಮುವಾದ, ಭಯೋತ್ಪಾದನೆ, ಅಶಾಂತಿ ತೊಲಗಿಸುವಲ್ಲಿ ರಾಜೀವ್ ಗಾಂಧಿ ಅವರ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವುದು. ನಕ್ಸಲ್‌ವಾದ ತಡೆಯುವಲ್ಲಿ ರಾಷ್ಟ್ರದ ಪೊಲೀಸ್ ಪಡೆಗಳೊಂದಿಗೆ ನಾಗರಿಕರು ಕೈಜೋಡಿಸುವಂತೆ ಮಾಡುವುದು ಈ ಯಾತ್ರೆಯ ಉದ್ದೇಶವಾಗಿದೆ ಎಂದರು.

ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಆರ್.ದೊರೈವೇಲು ಮಾತನಾಡಿ, ರಾಜೀವ್ ಗಾಂಧಿ ಅವರಿಗೆ ಗೌರವ ಸಲ್ಲಿಸಲು ರಾಜೀವ್ ಜ್ಯೋತಿ ಯಾತ್ರೆ ನೆಲಮಂಗಲ, ಕುಣಿಗಲ್, ಯಡಿಯೂರು, ಚನ್ನರಾಯಪಟ್ಟಣ, ಹಾಸನ, ಹೊಳೆನರಸೀಪುರ, ಕೆ.ಆರ್.ನಗರ ಮತ್ತು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಮೂಲಕ ಸಾಗಿ, ನಂತರ ತಮಿಳುನಾಡಿನ ಸತ್ಯಮಂಗಲ, ಕೊಯಮತ್ತೂರು, ಅವಿನಾಶ್, ಪೆರುಮನಲ್ಲೂರು, ಈರೋಡ್, ಭವಾನಿ, ಸೇಲಂ, ಅತ್ತೂರು, ಧರ್ಮಪುರಿ, ಕೃಷ್ಣಗಿರಿ, ತಿರುಪ್ಪತ್ತೂರು, ಉತ್ತಂಗರಾಲ್, ಸಿಂಗಾರಪೇಟೆ, ತಿರುವಣ್ಣಾಮಲೈ, ಜಿಂಜೀ, ತಿಂದಿವನಂ ಮೂಲಕ ಸಾಗಿ ಪಾಂಡಿಚೇರಿಗೆ ಪ್ರವೇಶಿಸುತ್ತದೆ. ರಾಜೀವ್ ಜ್ಯೋತಿ ಯಾತ್ರೆಯು ಮೇ 21ರಂದು ಶ್ರೀಪೆರಂಬದೂರಿನಲ್ಲಿ ಸಮಾಪ್ತಿಯಾಗಲಿದೆ ಎಂದರು.


ಜಾಥಾದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ನಾಗರತ್ನ, ನಗರಸಭಾ ಮಾಜಿ ಅಧ್ಯಕ್ಷೆ ಚಿನ್ನಮ್ಮ, ಪದ್ಮಪುರುಷೋತ್ತಮ, ಕಾಗಲವಾಡಿ ಚಂದ್ರ, ನಾಗಯ್ಯ, ರೂಪೇಶ್, ಜಿಲ್ಲಾ ಕಾಂಗ್ರೆಸ್ ಕಚೇರಿ ಕಾರ್ಯದರ್ಶಿ ಎ.ಎಚ್. ನಸ್ರುಲ್ಲಾ ಖಾನ್, ನಾಗರಾಜು, ಕುಮಾರ್ ಮೊದಲಾದವರು ಇದ್ದರು.