ಹನೂರಿನಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ತೇರಿಗೆ ಸ್ವಾಗತ

| Published : Dec 05 2024, 12:30 AM IST

ಸಾರಾಂಶ

ಕನ್ನಡದ ಜ್ಯೋತಿ ಹೊತ್ತ ಕನ್ನಡದ ತೇರು ಬುಧವಾರ ಹನೂರು ಪಟ್ಟಣಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಹನೂರು ತಾಲೂಕು ಆಡಳಿತ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಾಗೂ ನಾನಾ‌ ಕನ್ನಡ ಪರ ಸಂಘಟನೆಗಳಿಂದ ಪಟ್ಟಣದಲ್ಲಿ ಕನ್ನಡ ರಥವನ್ನು ಸ್ವಾಗತಿಸಲಾಯಿತು.

ಕನ್ನಡಪ್ರಭ ವಾರ್ತೆ ಹನೂರು

ಮಂಡ್ಯದಲ್ಲಿ ಡಿ.20, 21 ಮತ್ತು 22 ರಂದು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡದ ಜ್ಯೋತಿ ಹೊತ್ತ ಕನ್ನಡದ ತೇರು ಬುಧವಾರ ಹನೂರು ಪಟ್ಟಣಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಹನೂರು ತಾಲೂಕು ಆಡಳಿತ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಾಗೂ ನಾನಾ‌ ಕನ್ನಡ ಪರ ಸಂಘಟನೆಗಳಿಂದ ಪಟ್ಟಣದಲ್ಲಿ ಕನ್ನಡ ರಥವನ್ನು ಸ್ವಾಗತಿಸಲಾಯಿತು. ಈ ವೇಳೆ ಕನ್ನಡ ಜ್ಯೋತಿ ಹೊತ್ತ ರಥಕ್ಕೆ ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್ ಸಮ್ಮುಖದಲ್ಲಿ ನೆರೆದಿದ್ದ ಗಣ್ಯರು ಪೂಜೆ ಸಲ್ಲಿಸಿದರು. ಬಳಿಕ‌ ತಹಸೀಲ್ದಾರ್ ಮಾತನಾಡಿ, ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯದೆಲ್ಲೆಡೆ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥ ಯಾತ್ರೆಯು ಕನ್ನಡಿಗರಲ್ಲಿ ನಾಡು ನುಡಿಯ ಜಾಗೃತಿ ಮೂಡಿಸುತ್ತಿದೆ. ಮಂಡ್ಯದಲ್ಲಿ ಜರುಗುವ ಸಾಹಿತ್ಯ ಸಮ್ಮೇಳನಕ್ಕೆ ಹನೂರಿನ ಜನತೆಯ ಪರವಾಗಿ ಶುಭ ಕೋರುತ್ತೆವೆ’ ಎಂದು ಹೇಳಿದರು.

ರಥವು ಹನೂರಿನ‌ ಆರ್‌ಎಂಸಿ ಆವರಣದಿಂದ ಹೊರಟು ಡಾ.ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಖಾಸಗಿ ಬಸ್‌ ನಿಲ್ದಾಣ‌ ಮುಖೇನ ಬಂಡಳ್ಳಿ ರಸ್ತೆಯಲ್ಲಿ ಸಂಚರಿಸಿತು. ಮೆರವಣಿಗೆ ಮಾರ್ಗದುದ್ದಕ್ಕೂ ಡೋಲುದಲ್ಲಿ ಕುಣಿತ ಕುಣಿದು ವಿದ್ಯಾರ್ಥಿಗಳು ಕುಪ್ಪಳಿಸಿದರು. ಆಕರ್ಷಕ ಕನ್ನಡ ರಥ ಪಥಸಂಚಲನ ಸಾಗಿತು. ಈ ಸಂದರ್ಭದಲ್ಲಿ ಪಪಂ ಸದಸ್ಯ ಸೊಮ್ಮಣ್ಣ, ಬಿಇಒ ಗುರುಲಿಂಗಯ್ಯ ಕಂದಾಯ ಇಲಾಖಾಧಿಕಾರಿ ಶೇಷಣ್ಣ, ಇಸಿಒ ಆಶೋಲ್, ಮಹೇಶ್ ತಾಲೂಕು ಕಸಾಪ ಕಾರ್ಯದರ್ಶಿ ಅಭಿಲಾಷ್, ತಾಲೂಕು ಕನ್ನಡ ಪರ ಹೋರಾಟಗಾರ ವಿನೋದ್, ರಾಹಿಲ್ ಸೇರಿದಂತೆ ಹಲವರು ಹಾಜರಿದ್ದರು.