ಇಲ್ಲಿನ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿಕೆ) ಕಾಲೇಜಿನಲ್ಲಿ 2026-2027ನೇ ಸಾಲಿನ ಪ್ರಥಮ ವರ್ಷದ ಬಿ.ಇ. ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿಕೆ) ಕಾಲೇಜಿನಲ್ಲಿ 2026-2027ನೇ ಸಾಲಿನ ಪ್ರಥಮ ವರ್ಷದ ಬಿ.ಇ. ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಣಿಪಾಲದ ಕಾರ್‌ಮಿಕ್ ಡಿಸೈನ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ರತ್ನಾಕರ ಭಟ್ ಅವರು ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ತಾಂತ್ರಿಕ ಕೌಶಲ್ಯಗಳ ಜೊತೆಗೆ ಸೃಜನಶೀಲತೆ, ನಿರಂತರ ಕಲಿಕೆ ಮತ್ತು ಶಿಸ್ತು ಬಹಳ ಮುಖ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ ತಂತ್ರಜ್ಞಾನಗಳನ್ನು ಮೈಗೂಡಿಸಿಕೊಂಡು ದೇಶದ ಪ್ರಗತಿಗೆ ಕೊಡುಗೆ ನೀಡುವ ಎಂಜಿನಿಯರ್‌ಗಳಾಗಿ ರೂಪುಗೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ರಾಮಕೃಷ್ಣ ಹೆಗ್ಡೆ ಅವರು ಕಾಲೇಜಿನ ಶೈಕ್ಷಣಿಕ ವಾತಾವರಣ, ಮೂಲಸೌಕರ್ಯಗಳು ಹಾಗೂ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಸಂಸ್ಥೆ ನೀಡುತ್ತಿರುವ ಪ್ರೋತ್ಸಾಹದ ಕುರಿತು ಪ್ರಾಸ್ತಾವಿಕವಾಗಿ ವಿವರಿಸಿದರು.ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ. ಎಸ್. ಎನ್. ಭಟ್ ಅವರು ಮಾತನಾಡಿ ಕಾಲೇಜು ಜೀವನದಲ್ಲಿ ಸ್ಪಷ್ಟ ಗುರಿ, ಕಠಿಣ ಪರಿಶ್ರಮ ಮತ್ತು ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಇದೇ ಸಂದರ್ಭದಲ್ಲಿ ವಿಶ್ವೇಶ್ವರ ಟೆಕ್ನಲಾಜಿಕಲ್ ಯುನಿವರ್ಸಿಟಿ ವಿಟಿಯು (ವಿಟಿಯು) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಸಂಸ್ಥೆಗೆ ಕೀರ್ತಿ ತಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ವಿದ್ಯಾರ್ಥಿ ಕ್ಷೇಮಪಾಲನಾ ಸಂಯೋಜಕಿ ಸೂಕ್ಷ್ಮ ಅಡಿಗ ಅತಿಥಿಗಳನ್ನು, ವಿದ್ಯಾರ್ಥಿಗಳನ್ನು ಮತ್ತವರ ಪೋಷಕರನ್ನು ಸ್ವಾಗತಿಸಿದರು. ಬೇಸಿಕ್ ಸೈನ್ಸ್ ಮುಖ್ಯಸ್ಥ ದೀಪಕ್ ಶೆಟ್ಟಿ ವಂದಿಸಿದರು. ಪ್ಲೇಸ್ಮೆಂಟ್ ಡೀನ್ ಪ್ರೊ. ಅಕ್ಷತ ನಾಯ್ಕ್ ಅತಿಥಿ ಪರಿಚಯ ಮಾಡಿದರು. ವಿದ್ಯಾರ್ಥಿನಿ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.