ಸಾರಾಂಶ
ಕನ್ನಡ ಜ್ಯೋತಿ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಕನ್ನಡಪ್ರಭ ವಾರ್ತೆ ತುಮಕೂರುಕರ್ನಾಟಕ ಸಂಭ್ರಮ -50ರ ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ ಅಭಿಯಾನದ ಅಂಗವಾಗಿ ಚಿತ್ರದುರ್ಗ ಜಿಲ್ಲೆಯಿಂದ ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣ್ಣಕ್ಕಿಂದು ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.ವಿವಿಧ ಜಾನಪದ ಕಲಾತಂಡಗಳ ಮುಖೇನ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕೇಂದ್ರದ ರಾಜಬೀದಿಗಳಲ್ಲಿ ಕನ್ನಡ ರಥಯಾತ್ರೆಯ ಮೆರವಣಿಗೆಯನ್ನು ನಡೆಸಲಾಯಿತು. ತಹಸೀಲ್ದಾರ್ ಜಿ.ಎನ್. ಕೀರ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ಧಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ. ಎಂ. ರವಿಕುಮಾರ್ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ ಅವರು ಕನ್ನಡಾಂಬೆಯ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ಧಲಿಂಗಪ್ಪ, ನಾಡು-ನುಡಿಗಾಗಿ ಶ್ರಮಿಸಿದ ಕಲಾವಿದರು, ಲೇಖಕರು, ಹೋರಾಟಗಾರರನ್ನು ಸ್ಮರಿಸುತ್ತಾ, ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯನ್ನು ಕುರಿತು ಜಾಗೃತಿ ಮೂಡಿಸುವುದು, ಅಧಿಕಾರಿ ಹಾಗೂ ನಾಗರೀಕರಲ್ಲಿ ಕನ್ನಡ ವಾತಾವರಣವನ್ನು ನಿರ್ಮಾಣ ಮಾಡುವುದು ಈ ರಥಯಾತ್ರೆಯ ಉದ್ದೇಶವಾಗಿದೆ ಎಂದು ತಿಳಿಸಿದರು. 1973ರಲ್ಲಿ ದಿ, ದೇವರಾಜ ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿದ ನಂತರ 50 ನೇ ವರ್ಷದಲ್ಲಿ ನಾವಿದ್ದೇವೆ. ಈ ರಥಯಾತ್ರೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ ನವೆಂಬರ್ 1 ರಂದು ಮುಕ್ತಾಯವಾಗುತ್ತದೆ ಎಂದರು. ಕರ್ನಾಟಕವು ಶಾಂತಿ ಪ್ರಿಯತೆಗೆ ಸಂಕೇತವಾಗಿದ್ದು, ಕರ್ನಾಟಕದ ನೆಲ-ಜಲದ ರಕ್ಷಣೆ ಪ್ರತಿಯೊಬ್ಬ ಕನ್ನಡಿಗರದ್ದಾಗಿದೆ. ಈಗಿನ ಆಂದ್ರಪ್ರದೇಶದ ಮಡಕಶಿರಾ ಬಹುತೇಕ ಅಚ್ಚ ಕನ್ನಡದ ಪ್ರದೇಶವಾಗಿದ್ದರಿಂದ ಮಡಕಶಿರಾವನ್ನು ತುಮಕೂರು ಜಿಲ್ಲೆಗೆ ಸೇರಿಸಬೇಕು ಎಂದು ಮಧುಗಿರಿಯ ಬೇಡತ್ತೂರಿನಿಂದ ಮಡಕಶಿರಾವರೆಗೆ ಹನುಮಂತಯ್ಯನವರ ನೇತೃತ್ವದಲ್ಲಿ ಕಾಲ್ನಡಿಗೆ ಮೂಲಕ ಜಾಥಾ ನಡೆಸಿ, ಹಲವಾರು ಹೋರಾಟಗಳನ್ನು ನಡೆಸಿದ ಸನ್ನಿವೇಶಗಳನ್ನು ನೆನೆದರು.ಚಿಕ್ಕನಾಯಕನಹಳ್ಳಿ ತಾಲೂಕು ತಹಸೀಲ್ದಾರ್ ಜಿ.ಎನ್.ಕೀರ್ತಿ ಮಾತನಾಡಿ, ಈ ಕನ್ನಡ ರಥಯಾತ್ರೆಯ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಸಿದ ಡೆಪ್ಯೂಟಿ ಚನ್ನಬಸಪ್ಪನವರು, ಆಲೂರು ವೆಂಕಟರಾಯರು, ಕಂಬಳಿ ಸಿದ್ದಪ್ಪ, ಎಸ್.ನಿಜಲಿಂಗಪ್ಪ, ಪದ್ಮಶ್ರೀ ಶಿವಮೂರ್ತಿ ಶಾಸ್ತ್ರಿಗಳು, ಆರ್.ಎಂ.ಡಿ. ಆರಾಧ್ಯ ಅವರನ್ನು ಸ್ಮರಿಸಿದರು. ವಿಶೇಷವಾಗಿ ಏಕೀಕರಣ ಎಂದರೆ ಕೇವಲ ಭೌಗೋಳಿಕವಾಗಿ ಅಲ್ಲದೇ ಸಂಬಂಧಗಳ ಮೂಲಕ ಏಕೀಕರಣವಾಗಬೇಕು ಎಂದು ತಿಳಿಸಿದರು.ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ ಮಾತನಾಡಿ ಕನ್ನಡ ಭಾಷೆ, ಕನ್ನಡ ಶಾಲೆಗಳು ಉಳಿಯಬೇಕು. ಕನ್ನಡ ಮಾಧ್ಯಮವಾಗಬೇಕು. ಕನ್ನಡಿಗರಿಗೆ ಉದ್ಯೋಗಗಳು ದೊರೆಯಬೇಕು. ಕನ್ನಡ ಎಂಬುದು ನಮ್ಮೆಲ್ಲರ ಅನ್ನದ ಭಾಷೆಯಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು, ಸಿ.ಡಿ.ಪಿ.ಓ ಹೊನ್ನಪ್ಪ, ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ನಾಗಭೂಷಣ್, ಚಿಕ್ಕನಾಯಕನಹಳ್ಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿಕುಮಾರ್, ಕರ್ನಾಟಕ ಜಾನಪದ ಅಕಾಡೆಮಿಯ ಸಿಬ್ಬಂದಿಗಳಾದ ಡಿ.ವಿ.ಸುರೇಶ್ ಕುಮಾರ್, ರಾಜೇಶ್ ಬಿ.ಕೆ., ದರ್ಶನ್ ಎಸ್.ಎನ್ ಇತರಿರದ್ದರು.