ಸಾರಾಂಶ
ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಜ.೮ರಂದು ಪುರಪ್ರವೇಶ ಮಾಡಲಿದ್ದು, ಪೌರಸನ್ಮಾನ ಸ್ವೀಕರಿಸುವರು.
ಕನ್ನಡಪ್ರಭ ವಾರ್ತೆ, ಉಡುಪಿ
ಜ.18ರಂದು ತನ್ನ ಚತುರ್ಥ ಪರ್ಯಾಯ ದೀಕ್ಷೆಯನ್ನು ವಹಿಸಿಕೊಳ್ಳಲಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತೀರ್ಥ ಕ್ಷೇತ್ರ ಸಂಚಾರ ಮುಗಿಸಿ ಜ.8ರಂದು ಸಂಜೆ ಉಡುಪಿ ಪುರಪ್ರವೇಶಗೈಯ್ಯಲಿದ್ದು, ಅವರನ್ನು ವೈಭವದ ಮೆರವಣಿಗೆಯಲ್ಲಿ ಸ್ವಾಗತಿಸಿ, ಪೌರಸನ್ಮಾನ ನೀಡಲಾಗುತ್ತದೆ ಎಂದು ಪರ್ಯಾಯ ಸಮಿತಿಯ ಅಧ್ಯಕ್ಷರಾದ ಡಾ. ಎಚ್ ಎಸ್ ಬಲ್ಲಾಳ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದ ಅವರು, ಜ. 8ರಂದು ಮಧ್ಯಾಹ್ನ 3.30 ಗಂಟೆಗೆ ಶ್ರೀ ಸುಗಣೇಂದ್ರ ತೀರ್ಥ ಶ್ರೀಪಾದರು, ಕಿರಿಯ ಪಟ್ಟಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದಂಗಳವರ ಜೊತೆ ನಗರ ಜೋಡುಕಟ್ಟೆಗೆ ಆಗಮಿಸಲಿದ್ದಾರೆ.
ಅಲ್ಲಿ ಅವರನ್ನು ಉಡುಪಿಯ ಜನತೆಯ ಪರವಾಗಿ ಸಕಲ ಗೌರವಗಳೊಂದಿಗೆ ಬರಮಾಡಿಕೊಳ್ಳಲಾಗುವುದು. ನಂತರ ನಡೆಯುವ ಮೆರವಣಿಗೆಯಲ್ಲಿ ಸಮಾಜದ ಪ್ರತಿಯೊಂದು ಸಮುದಾಯದ ತಂಡಗಳು ಭಾಗವಹಿಸಿದ್ದಾರೆ. ವೈವಿಧ್ಯಮಯ ಸಾಂಸ್ಕೃತಿಕ ತಂಡಗಳೂ ಮೆರವಣಿಗೆಯಲ್ಲಿರುತ್ತವೆ. ಜೋಡುಕಟ್ಟೆ, ಕೋರ್ಟ್ ರಸ್ತೆ, ಡಯನಾ ವೃತ್ತ, ಕವಿ ಮುದ್ದಣ ಮಾರ್ಗಸ ತ್ರಿವೇಣಿ ವೃತ್ತ, ಸಂಸ್ಕೃತ ಕಾಲೇಜು ಮಾರ್ಗವಾಗಿ ರಥಬೀದಿಗೆ ಮೆರವಣಿಗೆ ಆಗಮಿಸಲಿದೆ. ಸಂಜೆ 6. 45ಕ್ಕೆ ಶ್ರೀಗಳು ಪುತ್ತಿಗೆ ಮಠವನ್ನು ಪ್ರವೇಶ ಮಾಡಲಿದ್ದಾರೆ.ನಂತರ ರಥಬೀದಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಪೌರಸಮ್ಮಾನ ನಡೆಸಲಾಗುವುದು. ಇದರಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಪರ್ಯಾಯ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆ, ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಭಾಗವಹಿಸಲಿದ್ದಾರೆ ಎಂದು ಪರ್ಯಾಯ ಸಮಿತಿಯ ಕಾರ್ಯಾಧ್ಯಕ್ಷ ಕೆ.ರಘುಪತಿ ಭಟ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಪರ್ಯಾಯ ಸ್ವಾಗತ ಸಮಿತಿ ಪ್ರ.ಕಾರ್ಯದರ್ಶಿ ಬೆಳಪು ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))