ಸರ್ವ ಜನಾಂಗದ ಹಿತಚಿಂತನೆ ಕಾಂಗ್ರೆಸ್ ಧ್ಯೇಯ

| Published : May 01 2024, 01:29 AM IST

ಸಾರಾಂಶ

ಜನತೆಯ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ವಿವಿಧ ಯೋಜನೆ ಜಾರಿಗೆ ತರಲು ಪ್ರಣಾಳಿಕೆ ಬಿಡುಗಡೆ

ರೋಣ: ಸರ್ವ ಜನಾಂಗದ ಹಿತ ಚಿಂತನೆ ಕಾಂಗ್ರೆಸ್‌ ಪಕ್ಷದ ಧ್ಯೇಯವಾಗಿದ್ದು, ದೇಶದ ಸಮಗ್ರ ಅಭಿವೃದ್ಧಿ ಹಾಗೂ ಜನತೆ ಶಾಂತಿ ನೆಮ್ಮದಿಯಿಂದ ಇರಲು ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕಿದೆ. ಈ ದಿಸೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲವು ಅತಿ ಮುಖ್ಯವಾಗಿದೆ ಎಂದು ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ವೀರೇಶ ಕಲಹಾಳ ಹೇಳಿದರು.

ತಾಲೂಕಿನ ಕುರಡಗಿ ಗ್ರಾಮದಲ್ಲಿ ಬಾಗಲಕೋಟೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಮತಯಾಚನೆ ಮಾಡಿ ಮಾತನಾಡಿದರು.

ಕಾಂಗ್ರೆಸ್ ಜನತೆಗೆ ನೀಡಿದ ಭರವಸೆಯಂತೆ ನಡೆದುಕೊಂಡ ಪಕ್ಷವಾಗಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪೂರ್ವ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದು ಯಶಸ್ವಿಯಾಗಿದೆ. ಅದರಂತೆ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ವಿವಿಧ ಯೋಜನೆ ಜಾರಿಗೆ ತರಲು ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಕೊಟ್ಟು ಮಾತಿನಂತೆ ನಡೆದುಕೊಳ್ಳಲಿದೆ. ದೇಶದ ಜನರನ್ನು ಸದಾ ವಂಚಿಸುತ್ತಾ ಬಂದಿರುವ ಬಿಜೆಪಿಯಿಂದ ಅಭಿವೃದ್ಧಿ ಶೂನ್ಯವಾಗಿದೆ.‌ ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ ಎಂದರು.

ಕಾಂಗ್ರೆಸ್ ಗೆಲುವು ನಿಶ್ಚಿತ: ಕೇಂದ್ರದ ಬಿಜೆಪಿ ಸರ್ಕಾರದ ಆಡಳಿತ ವಿರೋಧ ನೀತಿಗೆ ಜನತೆ ಬೇಸತ್ತಿದ್ದಾರೆ.‌ ಅಲ್ಲದೇ ಬಾಗಲಕೋಟೆ ಲೋಕಸಭೆಯಿಂದ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಗೊಂಡ ಪಿ.ಸಿ. ಗದ್ದಿಗೌಡ್ರ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಆದ್ದರಿಂದ ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಹೊಸ ಮನ್ವಂತರಕ್ಕೆ ಜನತೆ ನಾಂದಿ ಹಾಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕುರಡಗಿ ಗ್ರಾಪಂ ಅಧ್ಯಕ್ಷ ವೀರಪ್ಪ ರಾಮಣ್ಣವರ, ಮಾಜಿ ಉಪಾಧ್ಯಕ್ಷ ಮಲ್ಲಯ್ಯ ವಸ್ತ್ರದ, ಗ್ರಾಪಂ ಸದಸ್ಯರಾದ ಶೌಕತ್ತಲಿ ನದಾಫ, ಡಾ. ವಿಜಯಕುಮಾರ ರಾಮಣ್ಣವರ, ಹಿರಿಯ ಮುಖಂಡ ಸಿದ್ದು ಹಿರೇಗೌಡ, ಯುವ ಮುಖಂಡ ಹರಳಯ್ಯ ಹೊಸಮನಿ, ಈರಪ್ಪ ಬೇವಿನಮರದ, ಜೈಭೀಮ ಸಂಘ ಕುರಡಗಿ ಗ್ರಾಮ ಘಟಕ ಅಧ್ಯಕ್ಷ ವೀರೇಶ ದೊಡ್ಡಮನಿ, ಶರಣಪ್ಪ ದೊಡ್ಡಮನಿ, ಗ್ರಾಪಂ ಸದಸ್ಯೆ ಜಯಲಕ್ಷ್ಮಿ ವಾಲ್ಮೀಕಿ, ಈರಪ್ಪ ಜಾಧವ, ದಾವಲಸಾಬ್‌ ದಾಯಮ್ಮನವರ, ವೀರಭದ್ರಪ್ಪ ಹೂಗಾರ, ಕಾಂತು ಪಾಟೀಲ, ಮಾರುದ್ರಯ್ಯ ಪೂಜಾರ, ಸತ್ಯಪ್ಪ ಗವಾರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.