ಸಾರಾಂಶ
ಚಳ್ಳಕೆರೆ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯ ಬಡ ಜನರ ಕಲ್ಯಾಣಕ್ಕೆ ಶ್ರಮಿಸುತ್ತಿದೆ. ಕೇಂದ್ರದಲ್ಲೂ ಸಹ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅನೇಕ ಕೊಡುಗೆಗಳನ್ನು ನೀಡಿದ್ದು, ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರಿಗೆ ಮತ ನೀಡಿ ಲೋಕಸಭೆಗೆ ಆಯ್ಕೆ ಮಾಡಿಕಳಿಸಿ ಎಂದು ಕ್ಷೇತ್ರದ ಶಾಸಕ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಮತದಾರರಲ್ಲಿ ಮನವಿ ಮಾಡಿದರು.
ಶುಕ್ರವಾರ ಕ್ಷೇತ್ರ ವ್ಯಾಪ್ತಿಯ ಜಾಜೂರು, ಪಗಡಲಬಂಡೆ, ಚನ್ನಮ್ಮನಾಗತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಗ್ರಾಮಗಳಲ್ಲಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪಪರ ಮತಯಾಚನೆ ಮಾಡಿದರು.ಬಿ.ಎನ್.ಚಂದ್ರಪ್ಪ ಈ ಹಿಂದೆ ಈ ಕ್ಷೇತ್ರದ ಲೋಕಸಭಾ ಸದಸ್ಯರಾಗಿ ಹಲವಾರು ಜನಪರ ಯೋಜನೆಗಳಿಗೆ ಸಹಕಾರ ನೀಡಿದ್ದಾರೆ. ಲೋಕಸಭೆಯಲ್ಲೂ ಸಹ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ. ಮತ್ತೊಮ್ಮೆ ಪಕ್ಷ ಅವರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದು, ನೀವೆಲ್ಲರೂ ಅವರಿಗೆ ಮತ ನೀಡುವ ಮೂಲಕ ಪಕ್ಷದ ಆಯ್ಕೆಯನ್ನು ಸಮರ್ಥಿಸಬೇಕು ಎಂದರು.ಕಾಂಗ್ರೆಸ್ ಹಿರಿಯ ಮುಖಂಡ ಟಿ.ಪ್ರಭುದೇವ್, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ.ಶಶಿಧರ, ಚನ್ನಕೇಶವ, ಕೆಎಂಎಫ್ ನಿರ್ದೇಶಕ ಸಿ.ವೀರಭದ್ರಬಾಬು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಗದ್ದಿಗೆ ತಿಪ್ಪೇಸ್ವಾಮಿ, ಸಿ.ಟಿ.ಶ್ರೀನಿವಾಸ್, ಡಿ.ಕೆ.ಕಾಟಯ್ಯ, ರೆಡ್ಡಿಹಳ್ಳಿ ಶಿವಣ್ಣ, ಎಚ್.ಹನುಮಂತಪ್ಪ, ಎನ್.ಮಂಜುನಾಥ, ಬಿ.ಟಿ.ರಮೇಶ್ ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾಬಾಯಿ ಮುಂತಾದವರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.