ಧರ್ಮಪುರಕ್ಕೆ ಸುಸಜ್ಜಿತ ಬಸ್ ನಿಲ್ದಾಣ

| Published : Aug 31 2025, 01:08 AM IST

ಧರ್ಮಪುರಕ್ಕೆ ಸುಸಜ್ಜಿತ ಬಸ್ ನಿಲ್ದಾಣ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಯಲ್ಲಿ ಇದುವರೆಗೂ 500 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ನಮ್ಮ ಸರ್ಕಾರ ಸಾಧನೆಯ ಹೊಸ ಮೈಲುಗಲ್ಲು ಸ್ಥಾಪಿಸಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ಡಾ.ರಾಮಲಿಂಗಾರೆಡ್ಡಿ ಹೇಳಿದರು.

ಹಿರಿಯೂರು: ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಯಲ್ಲಿ ಇದುವರೆಗೂ 500 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ನಮ್ಮ ಸರ್ಕಾರ ಸಾಧನೆಯ ಹೊಸ ಮೈಲುಗಲ್ಲು ಸ್ಥಾಪಿಸಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ಡಾ.ರಾಮಲಿಂಗಾರೆಡ್ಡಿ ಹೇಳಿದರು.

ನಗರದ ಹುಳಿಯಾರು ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ಬಸ್ ಘಟಕವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಇದೀಗ ಹಿರಿಯೂರು ಬಸ್ ಡಿಪೋ ಉದ್ಘಾಟನೆ ಆಗಿದ್ದು, ಮೊಳಕಾಲ್ಮೂರು ಮತ್ತು ಹೊಳಲ್ಕೆರೆ ತಾಲೂಕಿನಲ್ಲಿ ನೂತನ ಘಟಕಗಳನ್ನು ನಿರ್ಮಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಅವು ಸಹ ಉದ್ಘಾಟನೆ ಆಗಲಿವೆ ಎಂದು ತಿಳಿಸಿದರು.

ಚಿತ್ರದುರ್ಗವನ್ನು ಹೊಸ ರಾಜ್ಯ ರಸ್ತೆ ಸಾರಿಗೆ ನಿಗಮದ ಪ್ರಮುಖ ವಿಭಾಗವನ್ನಾಗಿ ಹಿಂದೆ ಮಾಡಿದ್ದೇ ನಾವು. ಚಿತ್ರದುರ್ಗ ಜಿಲ್ಲೆಯಲ್ಲಿ ಇದುವರೆಗೂ 5 ಕೋಟಿ ನಲ್ವತ್ತೆoಟು ಲಕ್ಷ ಮಹಿಳೆಯರು ಶಕ್ತಿ ಯೋಜನೆಯ ಅನುಕೂಲ ಪಡೆದಿದ್ದಾರೆ. ನೂತನ ಬಸ್ ಘಟಕದ ಪ್ರಾರಂಭದಿಂದ ಈ ಭಾಗದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ಉಪಯೋಗವಾಗಲಿದೆ ಎಂದರು.

ಸಚಿವ ಸುಧಾಕರ್ ರವರು ಧರ್ಮಪುರಕ್ಕೆ ಸುಸಜ್ಜಿತ ಬಸ್ ನಿಲ್ದಾಣ ಮಾಡಿಕೊಡುವಂತೆ ಮನವಿ ಮಾಡಿದ್ದು, ಶೀಘ್ರ ಅಲ್ಲಿ ಬಸ್ ನಿಲ್ದಾಣದ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ನಗರದ ಬಸ್ ನಿಲ್ದಾಣ ಹಳೆಯದಾಗಿದ್ದು, ಹೈಟೆಕ್ ಬಸ್ ನಿಲ್ದಾಣಕ್ಕೆ ಕೋರಿಕೆ ಸಲ್ಲಿಸಲಾಗಿದ್ದು ಆ ಬೇಡಿಕೆಯನ್ನು ಸಹ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, 2009ರಲ್ಲಿ ನಾನು ಶಾಸಕನಾಗಿದ್ದಾಗ ಈ ಜಾಗವನ್ನು ಡಿಪೋ ಮಾಡಲು ಹಸ್ತಾಂತರ ಮಾಡಲಾಗಿತ್ತು. ಇಂದು ನೂತನ ಡಿಪೋ ನಿರ್ಮಾಣವಾಗಿ ಉದ್ಘಾಟನೆ ಆಗುತ್ತಿರುವುದು ತಾಲೂಕಿನ ಜನರ ಸಂತಸಕ್ಕೆ ಕಾರಣವಾಗಿದೆ ಎಂದರು.

ಡಿಪೋ ಒಳಗೆ ಒಮ್ಮೆಲೇ ಎರಡು ಬಸ್ ಬರಲು ರಸ್ತೆ ಇಕ್ಕಟ್ಟಾಗಿದ್ದು, ಈಗಾಗಲೇ ಸಂಬಂಧಪಟ್ಟವರ ಜೊತೆ ಮಾತನಾಡಿದ್ದು, ರಸ್ತೆ ಅಗಲೀಕರಣ ಮಾಡಿ ಎರಡು ಬಸ್ ಓಡಾಟಕ್ಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು.

ವಿಪ ಸದಸ್ಯ ಕೆ ಎಸ್.ನವೀನ್ ಮಾತನಾಡಿ, ಹಿರಿಯೂರಿನ ಅಭಿವೃದ್ಧಿಯ ದೃಷ್ಟಿಯಿಂದ ಇದು ಮಹತ್ವದ ಮೈಲಿಗಲ್ಲು. ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರ ಹಿರಿಯೂರು. ಇದು ದೊಡ್ಡ ಕೈಗಾರಿಕಾ ಪ್ರದೇಶವಾಗಿ ಬೆಳೆಯುತ್ತಿದೆ. ಡಿಪೋ ಉದ್ಘಾಟನೆ ಈ ತಾಲೂಕಿನ ಜನತೆಗೆ ತುಂಬಾ ಅನುಕೂಲ ಆಗುತ್ತದೆ. ಗ್ರಾಮೀಣ ಭಾಗಗಳಿಗೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ಆದಿ ಜಾoಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಯೋಗೇಶ್ ಬಾಬು, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಪಂ ಸಿಇಒ ಡಾ.ಆಕಾಶ್, ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ವೆಂಕಟೇಶ್, ನಗರಸಭೆ ಅಧ್ಯಕ್ಷ ಬಾಲಕೃಷ್ಣ, ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಶಿವಣ್ಣ, ತಹಸೀಲ್ದಾರ್ ಎಂ.ಸಿದ್ದೇಶ್, ಕೆಎಸ್‌ಆರ್‌ಟಿಸಿ ನಿರ್ದೇಶಕ ಇಬ್ರಾಹಿಂ ಮೈಗೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ನಗರಸಭೆ ಉಪಾಧ್ಯಕ್ಷೆ ಮಂಜುಳಾ ಹಾಗೂ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಸದಸ್ಯರು, ಮುಖಂಡರುಗಳು ಮತ್ತು ಕರಾರಸಾ ನಿಗಮದ ಆಡಳಿತ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

ಬಾನು ಮುಷ್ತಾಕ್‌ಗೆ ಆಹ್ವಾನ:

ಬಿಜೆಪಿಯಿಂದ ಅಪಪ್ರಚಾರ

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಹ್ವಾನಕ್ಕೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸಚಿವ‌ ರಾಮಲಿಂಗಾರೆಡ್ಡಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡಿ ದೇಗುಲ ಮುಜರಾಯಿ ಇಲಾಖೆಗೆ ಸೇರಿದ್ದು, ಹಿಂದೂಗಳಿಗೆ ಸೇರಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬಿಜೆಪಿಯವರಿಗೆ ಚೇಷ್ಟೆ ಮಾಡದಿದ್ದರೆ ನಿದ್ದೆ ಬರಲ್ಲ. ಚಾಮುಂಡೇಶ್ವರಿ ಪ್ರಾಧಿಕಾರ ಅಧಿಕೃತ ಹೌದೋ, ಅಲ್ಲವೋ ಎಂಬುದನ್ನು ಕೋರ್ಟ್ ತೀರ್ಮಾನಿಸುತ್ತದೆ. ನಾಡಹಬ್ಬ ಏಳು ಕೋಟಿ ಜನರಿಗೆ ಸೇರಿರುವಂತಹ ಹಬ್ಬವಾಗಿದೆ. ಬಿಎಸ್‌ವೈ ಕಾಲದಲ್ಲಿ ಅಬ್ದುಲ್ ಕಲಾಂರಿಗೆ ಅಹ್ವಾನಿಸಲಾಗಿತ್ತು. ಈ ಹಿಂದೆ ಕವಿ ನಿಸಾರ್ ಅಹ್ಮದ್ ದಸರಾ ಉದ್ಘಾಟಿಸಿದ್ದರು. ಆಗ ಬಿಜೆಪಿಗರು ಅವರಿಗೆ ಕುಂಕುಮ ಹಚ್ಚಿಕೊಂಡು ಬನ್ನಿ ಎಂದಿದ್ದರಾ? ಅವರವರ ಧರ್ಮ ಅವರಿಗೆ ಶ್ರೇಷ್ಠ. ಯಾವುದೇ ಧರ್ಮವನ್ನು ಯಾರೂ ದ್ವೇಷಿಸಬಾರದು. ಮತಕ್ಕಾಗಿ ಬಿಜೆಪಿಯವರು ಏನು ಬೇಕಾದರೂ ಮಾಡುತ್ತಾರೆ. ಬಿಜೆಪಿಗರಿಗೆ ಜನ ನೆಮ್ಮದಿಯಿಂದ ಇರುವುದು ಬೇಕಾಗಿಲ್ಲ. ಅವರದು ಬರೀ ಬೆಂಕಿ ಹಚ್ಚಿ ಬೇಳೆ ಕಾಳು ಬೇಯಿಸಿಕೊಳ್ಳುವ ಕೆಲಸವಾಗಿದೆ ಎಂದು ಕಿಡಿಕಾರಿದರು.

ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಸಿಎಂ, ಡಿಸಿಎಂ ಈಗಾಗಲೇ ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ ಮಾಡಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದರು.