ಕನ್ನಡಪ್ರಭ ವಾರ್ತೆ ಶಿರಸಿ
ನಗರದ ಹೊಸಪೇಟೆ ರಸ್ತೆಯಲ್ಲಿರುವ ನೂತನ ವೆಲ್‌ನೆಸ್ಟ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್‌ನ್ನು ಹೃದ್ರೋಗ ತಜ್ಞ, ಸಂಸದ ಡಾ. ಸಿ.ಎನ್. ಮಂಜುನಾಥ್ ಭಾನುವಾರ ಲೋಕಾರ್ಪಣೆಗೊಳಿಸಿದರು.ನಂತರ ಮಾತನಾಡಿದ ಅವರು, ಒಬ್ಬ ನಿಜವಾದ ಆರೋಗ್ಯವಂತ ಹೇಗಿರಬೇಕೆಂದರೆ ನೆಮ್ಮದಿಯಿಂದ ಇರಬೇಕು, ಮಲಗಿದ ತಕ್ಷಣ ನಿದ್ದೆ ಬರಬೇಕು ಅಂಥವನು ಮಾತ್ರ ನಿಜವಾದ ಶ್ರೀಮಂತ ಎಂದು ಅಭಿಪ್ರಾಯಪಟ್ಟರು.2014ರಲ್ಲಿ ನಮ್ಮ ದೇಶದಲ್ಲಿ 350 ಮೆಡಿಕಲ್ ಕಾಲೇಜುಗಳಿದ್ದವು ಈಗ ಕೇವಲ 11 ವರ್ಷದಲ್ಲಿ 822 ಮೆಡಿಕಲ್ ಕಾಲೇಜುಗಳಾಗಿವೆ. ಇದು ಸಂತೋಷದ ವಿಷಯ ಎಂದು ಹೇಳಿದರು
ನಮ್ಮ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಮೆಡಿಕಲ್ ಸ್ಟೋರ್ಸ್‌ಗಳಿಗಿಂತ ಹೆಚ್ಚಾಗಿ ವೈನ್ ಸ್ಟೋರ್ಸ್ ಹೆಚ್ಚಾಗಿ ಕಾಣುತ್ತಿವೆ. ಕುಡಿಯುವರ ಸಂಖ್ಯೆ ಹೆಚ್ಚಳವಾಗುತ್ತಾ ಹೊರಟಿದೆ. ಅದನ್ನು ತಡೆಯುವ ಕೆಲಸವಾಗಬೇಕು ಎಂದು ಹೇಳಿದರು.ಸಚಿವ ಮಂಕಾಳ ವೈದ್ಯ ಮಾತನಾಡಿ, 12 ಜನ ವೈದ್ಯರು ಸೇರಿಕೊಂಡು ಉತ್ತರಕನ್ನಡ ಜಿಲ್ಲೆಗೆ ಅವಶ್ಯ ಇರುವ ವೆಲ್ ನೆಸ್ಟ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಒಂದೇ ವರ್ಷದಲ್ಲಿ ನಿರ್ಮಿಸಿ ಉದ್ಘಾಟಿಸಿ ಜನರ ಬಳಕೆಗೆ ನೀಡಿರುವುದು ಅತ್ಯಂತ ಸಂತಸ ತಂದಿದೆ. ಈ ಆಸ್ಪತ್ರೆ ಆಡಳಿತ ಮಂಡಳಿಯವರು ಬಡವರಿಗೆ ಗುಣಮುಖಮಾಡಿ ಕಳಿಸಿರಿ ಎಂದು ಕಿವಿಮಾತು ಹೇಳಿದರು. ಒಂದು ವೇಳೆ ಅಂತವರ ಬಿಲ್ ಹೆಚ್ಚುಕಡಿಮೆ ಆದರೂ ಜನ ಜನಪ್ರತಿನಿಧಿಗಳಾದ ನಾವು ಸರ್ಕಾರದಿಂದ ಏನಾದರೂ ಒಂದು ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭೀಮಣ್ಣ ನಾಯ್ಕ್ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ. ಮಂಜುನಾಥ್ ಸಿ.ಎನ್., ಭೀಮಾ ಶಂಕರ್ ಗುಳೇದ, ಕೆ. ಅಬ್ದುಲ್ ಕರೀಮ್, ಮುಸ್ತಾಫ್, ಡಾ. ಮಧುಕೇಶ್ವರ್ ಜಿ.ವಿ., ಡಾ. ಜಹೀರ್‌ಅಹ್ಮದ್, ಡಾ. ರೂಪಾ, ಡಾ. ಪೃಥ್ವಿ, ಡಾ. ಪ್ರಜ್ವಲ್ ಚಂದ್ರ, ಡಾ. ವರ್ಷಾ, ಡಾ. ಶ್ರೀ ಶೃತಿ, ಆಡಳಿತಾಧಿಕಾರಿ ಮಹೇಶ ಹೆಗಡೆ ಸೇರಿ ಅನೇಕರಿದ್ದರು.