ಮಂಗಳೂರು: ಮಂಗಳೂರಿನ ಸರ್ಕಾರಿ ವೆನ್ಲಾಕ್‌ ಜಿಲ್ಲಾ ಆಸ್ಪತ್ರೆಗೆ ಮಾಹಿತಿ ನೀಡಿ ತುರ್ತು ಚಿಕಿತ್ಸೆಯ ರೋಗಿಗಳನ್ನು ಕರೆತರಬೇಕೆಂದು ಸೂಚಿಸಿದ್ದರೂ, ಅದನ್ನು ಪಾಲಿಸದೇ, ಮಾಹಿತಿ ನೀಡದೇ ರೋಗಿಗಳನ್ನು ಕರೆತರುತ್ತಿರುವುದರಿಂದ ಆಸ್ಪತ್ರೆಯಲ್ಲಿ ಐಸಿಯು ಬೆಡ್‌ಗಳ ಕೊರತೆ ಉಂಟಾಗುತ್ತಿದೆ. ಈಗಾಗಲೇ ಆಸ್ಪತ್ರೆಗೆ 50 ವೆಂಟಿಲೇಟರ್‌ ಹಾಸಿಗೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವೆನ್ಲಾಕ್‌ ಆಸ್ಪತ್ರೆ ಅಧೀಕ್ಷಕ ಡಾ.ಶಿವಪ್ರಕಾಶ್‌ ತಿಳಿಸಿದರು.

ಅವರು ಶುಕ್ರವಾರ ವೆನ್ಲಾಕ್‌ ಆಸ್ಪತ್ರೆಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಆಸ್ಪತ್ರೆಯಲ್ಲಿ 50 ವೆಂಟಿಲೇಟರ್‌ ಹಾಸಿಗೆಗಳನ್ನು ಹಂತ ಹಂತವಾಗಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಕ್ರಿಟಿಕಲ್‌ ಕೇರ್‌ ಬ್ಲಾಕ್‌ನಲ್ಲಿ (ಸಿಸಿಬಿ) 10 ಹಾಸಿಗೆಗಳ ಐಸಿಯು ಬೆಡ್‌ಗಳು ಹಾಗೂ ಖಾಲಿ ಇರುವ 15 ತುರ್ತು ಚಿಕಿತ್ಸಾ ಕೊಠಡಿಯ ಬೆಡ್‌ಗಳನ್ನು ಮುಂಬರುವ ದಿನಗಳಲ್ಲಿ 15 ಐಸಿಯು ಬೆಡ್‌ಗಳನ್ನಾಗಿ ಪರಿವರ್ತಿಸಲಾಗುವುದು. ಹೊಸದಾಗಿ ನಿರ್ಮಾಣವಾಗಬೇಕಾಗಿರುವ ಹೊರರೋಗಿ ವಿಭಾಗದಲ್ಲಿ 25 ಐಸಿಯು ಬೆಡ್‌ಗಳನ್ನು ಮಾಡಲು ಅವಕಾಶವಿದೆ. ಪ್ರಸ್ತುತ ಇರುವ ಐಸಿಯು ಹಾಸಿಗೆಗಳನ್ನು 50 ವೆಂಟಿಲೇಟರ್‌ ಹಾಸಿಗೆಗಳಿಗೆ ಹೆಚ್ಚಿಸಿದಲ್ಲಿ 3 ಪಾಳಿಯಲ್ಲಿ ತಲಾ ಒಬ್ಬೊಬ್ಬರಂತೆ ಕರ್ತವ್ಯ ನಿರ್ವಹಿಸಲು ಶುಶ್ರೂಷಾಧಿಕಾರಿಗಳ ಅವಶ್ಯಕತೆಯಿದೆ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಬೇರೆ ಭಾಗಗಳಿಂದ, ಬೇರೆ ಆಸ್ಪತ್ರೆಗಳಿಂದ ವೆನ್ಲಾಕ್‌ಗೆ ರೋಗಿಗಳನ್ನು ಕರೆತರುವ ಮೊದಲು ಆಸ್ಪತ್ರೆಗೆ ಮಾಹಿತಿ ನೀಡಬೇಕು. ಬೆಡ್‌ ಫ್ರೀ ಇದೆಯಾ ಎಂದು ತಿಳಿಯಬೇಕು. ಇದಕ್ಕಾಗಿ ಇಲ್ಲಿ ಪಿಆರ್‌ಒ, ಹೆಲ್ಪ್‌ಡೆಸ್ಕ್‌ ಆರಂಭಿಸಲಾಗಿದೆ. ಆದರೂ ಮಾಹಿತಿ ನೀಡದೇ ಕರೆತರುತ್ತಿರುವುದು ಸರಿಯಲ್ಲ. ಮಾಹಿತಿ ನೀಡಿಯೇ ರೋಗಿಗಳ ಕರೆತರಬೇಕು ಎಂದರು.

ವೆನ್ಲಾಕ್‌ ಆಸ್ಪತ್ರೆಯಲ್ಲಿ ಒಟ್ಟು 116 ಐಸಿಯು ಬೆಡ್‌ಗಳಿದ್ದು, 92 ಐಸಿಯು ಬೆಡ್‌ಗಳು ಇತರ ಸೇವೆಗಳಿಗೆ ಹಾಗೂ 24 ಐಸಿಯು ಬೆಡ್‌ಗಳು (ವೆಂಟಿಲೇಟರ್‌ ಇರುವ) ಪೋಸ್ಟ್‌ ಅಪರೇಟಿವ್‌ ವಾರ್ಡ್‌ನಲ್ಲಿ ಲಭ್ಯವಿದ್ದು, ವೆಂಟಿಲೇಟರ್‌ ಇಲ್ಲದ 29 ಐಸಿಯು ಬೆಡ್‌ಗಳು ಲಭ್ಯವಿದೆ. ಇದರಲ್ಲಿ 21 ಎಂಐಸಿಯು, 27 ಎಸ್‌ಐಸಿಯು/ಎಚ್‌ಡಿಯು, 8 ಇಐಸಿಯು 8, 8 ಸಿಐಸಿಯು, 10 ಪಿಐಸಿಯು, 18 ಎನ್‌ಐಸಿಯು, 24 ಪೋಸ್ಟ್‌ ಆಪರೇಟಿವ್‌ ಐಸಿಯು ಒಳಗೊಂಡಿದೆ. ಪ್ರಸ್ತುತ ಮಂಜೂರಾದ 138 ಶುಶ್ರೂಷಾಧಿಕಾರಿಗಳಲ್ಲಿ 100 ಮಂದಿ ಕಾರ್ಯನಿರತರಾಗಿದ್ದು, 6 ಮಂದಿ ಶುಶ್ರೂಷ ತರಬೇತಿ ಶಾಲೆಗೆ ನಿಯೋಜನೆಗೊಂಡಿದ್ದು, 32 ಹುದ್ದೆ ಖಾಲಿ ಇದೆ. ಎನ್‌ಎಚ್‌ಎಂ 54ರಲ್ಲಿ 48 ಕಾರ್ಯನಿರತರಾಗಿದ್ದು, 6 ಹುದ್ದೆ ಖಾಲಿ, ಕೆ.ಎಂ.ಸಿ. 156 (ಕ್ಯಾಥಲ್ಯಾಬ್‌ ಸೇರಿ) ಕಾರ್ಯನಿರತರಾಗಿದ್ದಾರೆ. ಒಟ್ಟು 304 ಶುಶ್ರೂಷಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಲಭ್ಯವಿರುವ ಹಾಸಿಗೆಗಳಿಗೆ ಐಪಿಎಚ್‌ ನಿಯಮ ಪ್ರಕಾರ 830 ಶುಶ್ರೂಷಾಧಿಕಾರಿಗಳು ಅವಶ್ಯವಿದ್ದು, 304 ಮಂದಿ ಕರ್ತವ್ಯದಲ್ಲಿದ್ದು, 526 ಸಿಬ್ಬಂದಿ ಹೆಚ್ಚುವರಿ ಬೇಕಾಗಿದೆ. ಅನಾಸ್ತೇಶಿಯಾ ಟೆಕ್ನಿಷಿಯನ್‌ 18, ಇಂಟೆನ್ಸಿವ್‌ 6, ಐಸಿಯು ಟೆಕ್ನಿಷಿಯನ್‌ 18 ಸಿಬ್ಬಂದಿ ಬೇಕಾಗಿದೆ ಎಂದರು.

ಎಲ್ಲ ಜಿಲ್ಲೆಗಳಿಂದ ರೋಗಿಗಳು ದಾಖಲು:


ವೆನ್ಲಾಕ್‌ ಆಸ್ಪತ್ರೆಗೆ ದ.ಕ. ಹಾಗೂ ಹತ್ತಿರದ ಜಿಲ್ಲೆಗಳಿಂದ ಮಾತ್ರವಲ್ಲದೇ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ರೋಗಿಗಳು ಚಿಕಿತ್ಸೆ ಆಗಮಿಸುತ್ತಿದ್ದಾರೆ. 2025ರ ಎಪ್ರಿಲ್‌ನಿಂದ 2026ರ ಮಾರ್ಚ್‌ವರೆಗೆ ಒಟ್ಟು 2,76,543 ಮಂದಿ ಹೊರರೋಗಿಗಳಾಗಿ, 27,937 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಇದರಲ್ಲಿ ಕೇರಳದಿಂದ 54,695, ಬಾಗಲಕೋಟೆಯಿಂದ 7,137, ಚಿಕ್ಕಮಗಳೂರಿನಿಂದ 10,940, ಚಿತ್ರದುರ್ಗದಿಂದ 4,026, ದ.ಕ.ದಿಂದ 1,59,121, ದಾವಣಗೆರೆಯಿಂದ 6,943, ಹಾಸನದಿಂದ 5,850, ಹಾವೇರಿಯಿಂದ 5,884, ಶಿವಮೊಗ್ಗದಿಂದ 11,437, ಉತ್ತರ ಕನ್ನಡದಿಂದ 7,276, ಉಡುಪಿಯಿಂದ 11,020 ಸೇರಿದಂತೆ ಎಲ್ಲ ಜಿಲ್ಲೆಗಳಿಂದ ವೆನ್ಲಾಕ್‌ ಆಸ್ಪತ್ರೆಗೆ ರೋಗಿಗಳು ಒಳ ಹಾಗೂ ಹೊರ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆಯಾ ಜಿಲ್ಲಾಸ್ಪತ್ರೆಗಳಲ್ಲಿ ಜಿಲ್ಲಾ ಮಟ್ಟದ ವ್ಯವಸ್ಥೆಗಳಿದ್ದರೂ, ತುರ್ತು ಚಿಕಿತ್ಸೆಗೆ ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಮಾಹಿತಿ ನೀಡದೇ ಬರುತ್ತಿರುವುದರಿಂದ ದ.ಕ. ಜಿಲ್ಲೆಯ ಜನರು ಎಲ್ಲಿಗೆ ಹೋಗಬೇಕು ಎಂದು ಅವರು ಪ್ರಶ್ನಿಸಿದರು.

ಬೆಡ್‌ ಮಾಹಿತಿ ನೀಡಲು ಆನ್‌ಲೈನ್‌ ವ್ಯವಸ್ಥೆ: ವೆನ್ಲಾಕ್‌ ಆಸ್ಪತ್ರೆಯಲ್ಲಿ ಒಟ್ಟು ಇರುವ ಬೆಡ್‌, ಭರ್ತಿಯಾಗಿರುವ, ಖಾಲಿ ಇರುವ ಬೆಡ್‌ಗಳ ಮಾಹಿತಿಯನ್ನು ಆನ್‌ಲೈನ್‌ ಮೂಲಕ ತಿಳಿಸುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಆದಷ್ಟು ಶೀಘ್ರ ಅನುಷ್ಠಾನ ಮಾಡಲಾಗುವುದು. ಇದರಿಂದ ಬೆಡ್‌ ಮಾಹಿತಿ ಸಾರ್ವಜನಿಕರಿಗೆ ತಿಳಿಯಲಿದೆ ಎಂದು ಡಿಎಚ್‌ಒ ಡಾ.ತಿಮ್ಮಯ್ಯ ತಿಳಿಸಿದರು.