ಮಂಗಳೂರು: ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ತಯಾರಿಸಿ ಕಾರ್ಯರೂಪಕ್ಕೆ ತರುವಂತೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದ್ದಾರೆ.
ನಗರದ ವೆನ್‍ಲಾಕ್ ಆಸ್ಪತ್ರೆಯಲ್ಲಿ ಬುಧವಾರ ನಡೆದ ಆರೋಗ್ಯ ರಕ್ಷಾ ಸಮಿತಿ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಆಸ್ಪತ್ರೆಯಲ್ಲಿ ವಿವಿಧ ವಿಭಾಗಗಳನ್ನು ರೋಗಿಗಳ ಸ್ನೇಹಿಯಾಗಿ ಕಾರ್ಯರೂಪಕ್ಕೆ ತರಲು ಮಾಸ್ಟರ್ ಪ್ಲಾನ್ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಶೀಘ್ರವಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.ವೆನ್‍ಲಾಕ್ ಆಸ್ಪತ್ರೆಯ ಹೊರರೋಗಿ ವಿಭಾಗಗಳ ಕಟ್ಟಡವನ್ನು ತೆರವುಗೊಳಿಸಿ ನೂತನ ಅತ್ಯಾಧುನಿಕ ಮಾದರಿಯ ಒ.ಪಿ.ಡಿ. ಕಟ್ಟಡ ನಿರ್ಮಿಸಲು ರಾಜ್ಯ ಸರ್ಕಾರದಿಂದ 70 ಕೋಟಿ ರು. ಅನುದಾನ ಮಂಜೂರಾಗಿದೆ. ಪ್ರಸಕ್ತ ಅಲ್ಲಿರುವ ಎಲ್ಲ ವಿಭಾಗಗಳನ್ನು ಟ್ರಾಮಾ ಬ್ಲಾಕ್‍ಗೆ ಸ್ಥಳಾಂತರಿಸಿ ಹಳೆ ಒ.ಪಿ.ಡಿ ಕಟ್ಟಡವನ್ನು ಕೆಡವಲಾಗುವುದು. ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವೆನ್‍ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್ ತಿಳಿಸಿದರು.ರೋಗಿಗಳಿಗೆ ನೆರವಾಗಲು ಒ.ಪಿ.ಡಿ, ಎಕ್ಸ್ ರೇ, ರೇಡಿಯೋಲಜಿ ಮತ್ತಿತರ ಘಟಕಗಳನ್ನು ಒಂದೇ ಕಡೆ ನಿರ್ಮಿಸಲು ಜಿಲ್ಲಾಧಿಕಾರಿ ಸೂಚಿಸಿದರು.
ಲೇಡಿಗೋಶನ್‌ಗೆ ಪ್ರತ್ಯೇಕ ಸಮಿತಿ:ಲೇಡಿಗೋಶನ್ ಆಸ್ಪತ್ರೆಗೆ ಪ್ರತ್ಯೇಕ ಆರೋಗ್ಯ ರಕ್ಷಾ ಸಮಿತಿ ರಚಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ವೆನ್‍ಲಾಕ್‍ನಲ್ಲಿ ಪಿ.ಎಂ. ಅಭಿಮ್ ಯೋಜನೆಯಡಿ 50 ಬೆಡ್‍ಗಳ ಕ್ರಿಟಿಕಲ್ ಕೇರ್ ಕಟ್ಟಡದ ಕಾಮಗಾರಿ ಕೊನೆಯ ಹಂತದಲ್ಲಿದೆ. ಅತ್ತಾವರ ರಸ್ತೆಯಲ್ಲಿರುವ ವೆನ್‍ಲಾಕ್‍ನ 2.71 ಎಕರೆ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಲು ಪೇ ಆಂಡ್ ಪಾರ್ಕಿಂಗ್ ಕಾಮಗಾರಿಗೆ ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.
ವೆನ್‍ಲಾಕ್ ಹೊಸ ಸರ್ಜಿಕಲ್ ಬ್ಲಾಕ್ ಕಟ್ಟಡದ ನೆಲಮಹಡಿಯ ಮಳಿಗೆಗಳನ್ನು ವಾಣಿಜ್ಯ ಉಪಯೋಗಕ್ಕೆ ಹರಾಜು ಮೂಲಕ ನೀಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ, ಲೇಡಿಗೋಶನ್ ಅಧೀಕ್ಷಕ ಡಾ. ದುರ್ಗಾಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ತಿಮ್ಮಯ್ಯ ಮತ್ತಿತರರು ಇದ್ದರು.