ಮಂಗಳೂರು: ಮಂಗಳೂರಿನ ವೆನ್ಲಾಕ್‌ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಧಾನ ಮಂತ್ರಿ ಅಭಿಮ್‌ (ಪಿಎಂ ಅಭಿಮ್‌) ಯೋಜನೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹಾಗೂ ಶಾಸಕ ವೇದವ್ಯಾಸ ಕಾಮತ್‌ ಅವರ ನೇತೃತ್ವದಲ್ಲಿ ಗುರುವಾರ ವೀಕ್ಷಿಸಲಾಯಿತು.

ಪಿಎಂ ಅಭಿಮ್‌ ಯೋಜನೆಯಲ್ಲಿ 24 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಕ್ರಿಟಿಕಲ್‌ ಕೇರ್‌ ಬ್ಲಾಕ್‌, 1.3 ಕೋಟಿ ರು. ವೆಚ್ಚದ ಇಂಟಿಗ್ರೇಟ್‌ ಹೆಲ್ತ್‌ ಲ್ಯಾಬ್‌ (ಎಚ್‌ಐಎಚ್‌ಎಲ್‌) ಮೊದಲಾದ ಕಾಮಗಾರಿಗಳನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜನರ ಅವಶ್ಯಕತೆಗೆ ತಕ್ಕಂತೆ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವಂತೆ, ಆಸ್ಪತ್ರೆ ಆವರಣಕ್ಕೆ ಅನಗತ್ಯ ಸಾರ್ವಜನಿಕರು ಮುಕ್ತವಾಗಿ ಬರುವಂತೆ ಆಗದಂತೆ ಪರಿಹಾರ ಕಾಮಗಾರಿ ಯೋಜನೆ, ಹಳೆ ಕಟ್ಟಡ ಮತ್ತು ಹೊಸ ಕಟ್ಟಡಗಳ ಸಂಪರ್ಕ ವ್ಯವಸ್ಥೆ ಮೊದಲಾದ ಬಗ್ಗೆ ಮಾಹಿತಿ ಪಡೆದು ಸಲಹೆ-ಸೂಚನೆಗಳನ್ನು ನೀಡಲಾಯಿತು.

ಬಳಿಕ ಸಂಸದರು ಆಸ್ಪತ್ರೆಯ ಕೆಲವು ಕಚೇರಿ, ಬ್ಲಾಕ್‌, ಚಿಕಿತ್ಸಾ ಕೊಠಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರಲ್ಲಿ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್‌ ಚೌಟ, ನರೇಂದ್ರ ಮೋದಿ ಪ್ರಧಾನಿಯಾಗಿ 12 ವರ್ಷ ಪೂರ್ತಿಗೊಳಿಸಿದ ಹಿನ್ನೆಲೆಯಲ್ಲಿ ಜನಸಂಪರ್ಕ ಅಭಿಯಾನ ಆಯೋಜಿಸಿದ್ದು, ಅದರಂತೆ ಪ್ರತೀ ವಿಧಾನಸಭಾ ಕ್ಷೇತದಲ್ಲಿ ಕೇಂದ್ರದಿಂದ ಆಗುತ್ತಿರುವ ಅಭಿವೃದ್ಧಿ ಕೆಲಸಗಳ ಪರಿಶೀಲನೆ, ಸಮಾಜದ ಪ್ರಮುಖರ ಭೇಟಿ, ಜನಸಂಪರ್ಕ ಕಾರ್ಯಕ್ರಮ ಸೇರಿದಂತೆ ಬೇರೆ ಬೇರೆ ಕಾರ್ಯಕ್ರಮ ಹಮ್ಮಿಕೊಳ್ಳದ್ಗಿದ್ದು, ಅದರ ಭಾಗವಾಗಿ ಇಂದು ವೆನ್ಲಾಕ್‌ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಪಿಎಂ ಅಭಿಮ್‌ ಯೋಜನೆಯಡಿಯ ಕ್ರಿಟಿಕಲ್‌ ಕೇರ್‌ ಬ್ಲಾಕ್‌, ಎಚ್‌ಐಎಚ್‌ಎಲ್ (ಲ್ಯಾಬ್‌) ಕಾಮಗಾರಿ ಪರಿಶೀಲನೆ ನಡೆಸಲಾಗಿದೆ. ಎಂಆರ್‌ಪಿಎಲ್‌ನ ಸಿಎಸ್‌ಆರ್‌ನ 10 ಕೋಟಿ ರು. ಅನುದಾನದ ಕಾಮಗಾರಿಗೆ ಟೆಂಡರ್‌ ಆಗಿದ್ದು, ಶೀಘ್ರ ಕೆಲಸ ಆರಂಭವಾಗಲಿದೆ ಎಂದರು.

ಒಟ್ಟು 35 ಕೋಟಿ ರು. ವರೆಗಿನ ಕೆಲಸಗಳು ನಡೆಯಲಿದ್ದು, ವೀಕ್ಷಣೆ ನಡೆಸಲಾಗಿದೆ. ಲ್ಯಾಬ್‌ ಇನ್ನು 2-3 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಉಳಿದ ಕಾಮಗಾರಿಗಳೂ ಪ್ರಗತಿಯಲ್ಲಿದ್ದು, ಆದಷ್ಟು ಶೀಘ್ರ ಪೂರ್ಣಗೊಳ್ಳುವ ವಿಶ್ವಾಸ ಇದೆ. ಯೋಜನೆಯಡಿ 24 ಸಿಬ್ಬಂದಿ ಮಂಜೂರಾಗಿದ್ದು, ಅದರ ಪ್ರಕ್ರಿಯೆಗೂ ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.

ವೆನ್ಲಾಕ್‌ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಿವಪ್ರಕಾಶ್‌ ಮತ್ತಿತರ ಅಧಿಕಾರಿಗಳು ಇದ್ದರು.