ಹಾವೇರಿ: ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆ ಶುಕ್ರವಾರ ನಡೆಯಲಿದ್ದು, ಜಿಲ್ಲಾದ್ಯಂತ ಸುಗಮ ಹಾಗೂ ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯ ಎಂಟು ತಾಲೂಕುಗಳ ವ್ಯಾಪ್ತಿಯ 29 ಮತಗಟ್ಟೆಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ.
ಜಿಲ್ಲಾದ್ಯಂತ ಒಟ್ಟು 24,648 ಮತದಾರರಿದ್ದು, ಇವರಲ್ಲಿ 15,547 ಪುರುಷರು ಹಾಗೂ 9,101 ಮಹಿಳಾ ಮತದಾರರಿದ್ದಾರೆ. ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಲು ಅಗತ್ಯ ಸಿಬ್ಬಂದಿ, ವಾಹನಗಳು ಹಾಗೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಹಾವೇರಿ ತಾಲೂಕಿನಲ್ಲಿ 3, ರಾಣೇಬೆನ್ನೂರಿನಲ್ಲಿ 3, ಬ್ಯಾಡಗಿಯಲ್ಲಿ 2, ಹಿರೇಕೆರೂರಿನಲ್ಲಿ 1, ರಟ್ಟಿಹಳ್ಳಿಯಲ್ಲಿ 1, ಶಿಗ್ಗಾಂವಿಯಲ್ಲಿ 4, ಸವಣೂರಿನಲ್ಲಿ 1 ಹಾಗೂ ಹಾನಗಲ್ಲ ತಾಲೂಕಿನಲ್ಲಿ 4 ವಾಹನಗಳು ಸೇರಿದಂತೆ ಒಟ್ಟು 19 ವಾಹನಗಳ ವ್ಯವಸ್ಥೆ ಮಾಡಲಾಗಿದೆ.ಎಲ್ಲ ಮತಗಟ್ಟೆಗಳಿಗೂ ವೆಬ್ಕಾಸ್ಟಿಂಗ್: ಜಿಲ್ಲೆಯ ಎಲ್ಲ 29 ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮತದಾನ ಪ್ರಕ್ರಿಯೆಯನ್ನು ನಿಗಾ ವಹಿಸಲು ಎಲ್ಲ ಮತಗಟ್ಟೆಗಳಲ್ಲೂ ವೆಬ್ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆ ಸಿಬ್ಬಂದಿಗೆ ಅ.13 ಮತ್ತು 17ರಂದು ಎರಡು ಹಂತಗಳಲ್ಲಿ ತರಬೇತಿ ನೀಡಲಾಗಿದೆ. ಮೈಕ್ರೋ ಅಬ್ಸರ್ವರ್ಗಳಿಗೂ ಅ. 14 ಮತ್ತು 15ರಂದು ಎರಡು ಬಾರಿ ತರಬೇತಿ ನೀಡಲಾಗಿದೆ.
ಪೊಲೀಸ್ ಬಂದೋಬಸ್ತ್: ಚುನಾವಣಾ ಕರ್ತವ್ಯಕ್ಕೆ ಮೂರು ಡಿವೈಎಸ್ಪಿ, 10 ಸಿಪಿಐ, 19 ಪಿಎಸ್ಐ, 29 ಎಎಸ್ಐ, 77 ಹೆಡ್ ಕಾನ್ಸ್ಟೆಬಲ್, 85 ಪೊಲೀಸ್ ಕಾನ್ಸ್ಟೆಬಲ್ ಹಾಗೂ 29 ಮಹಿಳಾ ಪೊಲೀಸ್ ಕಾನ್ಸ್ಟೆಬಲ್ಗಳನ್ನು ನಿಯೋಜಿಸುವ ಮೂಲಕ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.ಮತಗಟ್ಟೆಯೊಳಗೆ ಮೊಬೈಲ್, ಪೆನ್ ನಿಷೇಧ: ಮತದಾನದ ದಿನ ಮತಗಟ್ಟೆಯೊಳಗೆ ಹರಿತವಾದ ವಸ್ತುಗಳು, ಮೊಬೈಲ್ ಕ್ಯಾಮೆರಾ, ಪೆನ್, ಬೆಂಕಿಪೊಟ್ಟಣ, ಲೈಟರ್ ಹಾಗೂ ನೀರಿನ ಬಾಟಲಿಗಳಂತಹ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಮತದಾರರು ಚುನಾವಣಾ ಆಯೋಗ ನಿಗದಿಪಡಿಸಿರುವ ಗುರುತಿನ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಕಡ್ಡಾಯವಾಗಿ ತರಬೇಕು.
ಮತದಾನಕ್ಕೆ ಮಾನ್ಯವಾದ 10 ದಾಖಲೆಗಳು: ಮತದಾನಕ್ಕೆ ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಭಾರತೀಯ ಪಾಸ್ಪೋರ್ಟ್, ಸರ್ಕಾರಿ, ಸಾರ್ವಜನಿಕ ವಲಯದ ಉದ್ಯಮಗಳು, ಸ್ಥಳೀಯ ಸಂಸ್ಥೆಗಳು ಅಥವಾ ಖಾಸಗಿ ಕೈಗಾರಿಕಾ ಸಂಸ್ಥೆಗಳು ನೀಡಿರುವ ಸೇವಾ ಗುರುತಿನ ಚೀಟಿ, ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ, ಪದವೀಧರರ ಕ್ಷೇತ್ರದ ಮತದಾರರು ಉದ್ಯೋಗಿಗಳಾಗಿರುವ ಶಿಕ್ಷಣ ಸಂಸ್ಥೆಗಳು ನೀಡಿರುವ ಸೇವಾ ಗುರುತಿನ ಚೀಟಿ, ವಿಶ್ವವಿದ್ಯಾಲಯ ನೀಡಿರುವ ಮೂಲ ಪದವಿ ಅಥವಾ ಡಿಪ್ಲೊಮಾ ಪ್ರಮಾಣಪತ್ರ, ಸಕ್ಷಮ ಪ್ರಾಧಿಕಾರ ನೀಡಿರುವ ಮೂಲ ದೈಹಿಕ ಅಂಗವೈಕಲ್ಯ ಪ್ರಮಾಣಪತ್ರ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನೀಡುವ ವಿಶಿಷ್ಟ ಅಂಗವೈಕಲ್ಯ ಗುರುತಿನ ಚೀಟಿ (ಯುಡಿಐಡಿ) ದಾಖಲೆಗಳನ್ನು ಮಾನ್ಯ ಮಾಡಲಾಗಿದೆ.
ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿ: ಜಿಲ್ಲೆಯ ಎಂಟು ತಾಲೂಕುಗಳ ತಹಸೀಲ್ದಾರ್ ಕಚೇರಿಗಳಲ್ಲಿ ಮಸ್ಟರಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಗುರುವಾರ ಮಸ್ಟರಿಂಗ್ ಕೇಂದ್ರಗಳಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ಸಾಮಗ್ರಿಗಳನ್ನು ವಿತರಿಸಿ ನಿಯೋಜಿತ ಮತಗಟ್ಟೆಗಳಿಗೆ ಕಳುಹಿಸಲಾಯಿತು. ಶುಕ್ರವಾರ ಮತದಾನ ಮುಕ್ತಾಯವಾದ ಬಳಿಕ ಆಯಾ ತಾಲೂಕುಗಳ ತಹಸೀಲ್ದಾರ್ ಕಚೇರಿಗಳಲ್ಲಿ ಸ್ಥಾಪಿಸಿರುವ ಡಿ-ಮಸ್ಟರಿಂಗ್ ಕೇಂದ್ರಗಳಲ್ಲಿ ಮತಪೆಟ್ಟಿಗೆಗಳು ಹಾಗೂ ಚುನಾವಣಾ ದಾಖಲೆಗಳನ್ನು ಸಂಗ್ರಹಿಸಲಾಗುತ್ತದೆ. ನಂತರ ಸೂಕ್ತ ಪೊಲೀಸ್ ಭದ್ರತೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ತಲುಪಿಸಿ, ಅಲ್ಲಿಂದ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಗೆ ಸಾಗಿಸಿ ಹಸ್ತಾಂತರಿಸಲಾಗುತ್ತದೆ.
ಅ.27ರಂದು ಮತ ಎಣಿಕೆ ಕಾರ್ಯ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿರುವ ಎಣಿಕೆ ಕೇಂದ್ರದಲ್ಲಿ ಅ. 27ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಅಗತ್ಯವಿರುವ ಎಲ್ಲ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.