ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನ ಪಶ್ಚಿಮ ಘಟ್ಟ ಡೀಮ್ಡ್ ಅರಣ್ಯದ ಹೆಸರಿನಲ್ಲಿ ರೈತರಿಗೆ ಕಿರುಕುಳ ನೀಡುತ್ತಿರುವ ಅರಣ್ಯ ಇಲಾಖೆ ಕ್ರಮದ ವಿರುದ್ಧ ಸಮಾಜ ಸೇವಕ ಪ್ರತಾಪ್ ಗೌಡ ನೇತೃತ್ವದಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ರೈತರು ಸಕಲೇಶಪುರ ತಾಲೂಕಿನ ಬಾಚಿಹಳ್ಳಿ ಗ್ರಾಮದಲ್ಲಿ ಭಾನುವಾರ ಸಭೆ ನಡೆಸಿದರು.ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಎಚ್ ಎನ್ ವಿಶ್ವನಾಥ್, ಸಕಲೇಶಪುರ ತಾಲೂಕಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಡೀಮ್ಡ್ ಅರಣ್ಯದ ನೆಪ ಹೇಳಿ ರೈತರಿಗೆ ಕಿರುಕುಳ ನೀಡುತ್ತಿರುವ ಪ್ರಕರಣ ಹೆಚ್ಚುತ್ತಿದ್ದು ಇದನ್ನು ಸಹಿಸಲು ಇನ್ನೂ ಸಾಧ್ಯವಿಲ್ಲ. ಕುಡಿಯುವ ನೀರು ಯೋಜನೆ, ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ, ಸರ್ಕಾರದ ಅಭಿವೃದ್ಧಿ ಕೆಲಸ ಸಹ ಮಾಡಲು ಅರಣ್ಯ ಇಲಾಖೆ ಕಿರುಕುಳ ನೀಡುತ್ತಿದ್ದು, ಇದೇ ರೀತಿ ರೈತರು ಮೌನವಾಗಿದ್ದರೆ ನಮ್ಮ ಸಹಜ ಕಸುಬು ಕೃಷಿಯನ್ನು ಮಾಡಲು ಅರಣ್ಯ ಇಲಾಖೆ ಬಿಡುವುದಿಲ್ಲ. ಇಂತಹ ಪರಿಸ್ಥಿತಿಯನ್ನು ನಾವು ಒಪ್ಪಲು ಸಾಧ್ಯವಿಲ್ಲ. ಈ ಬಗ್ಗೆ ತಾಲೂಕಿನ ಎಲ್ಲಾ ರೈತರು ಬೆಳೆಗಾರ ಸಂಘಟನೆಗಳು, ರಾಜಕೀಯ ಮುಖಂಡರು ಪರಿಸರವಾದಿಗಳು, ಶಾಸಕರ ನೇತೃತ್ವದಲ್ಲಿ ಪಕ್ಷಾತೀತವಾಗಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಸಮಾಜ ಸೇವಕ ಪ್ರತಾಪ್ ಗೌಡ ಬಾಚಿಹಳ್ಳಿ ಡೀಮ್ಡ್ ಅರಣ್ಯದ ಹೆಸರಿನಲ್ಲಿ ಕಂದಾಯ ಇಲಾಖೆ ಮಂಜೂರು ಮಾಡಿರುವ ಕೆಲ ಕಾಫಿತೋಟಗಳು ಕೃಷಿ ಭೂಮಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಯನ್ನು ಕಳಿಸಿ ಕಿರುಕುಳ ನೀಡುತ್ತಿರುವ ಪ್ರಸಂಗ ಹೆಚ್ಚುತ್ತಿದ್ದು, ಅರಣ್ಯ ಅಧಿಕಾರಿಗಳ ಕಿರುಕುಳ ಇದೇ ರೀತಿ ಮುಂದುವರಿದರೆ ಘನ ನ್ಯಾಯಾಲಯ ಹೈಕೋರ್ಟ್ ಬೆಂಗಳೂರು ರೈತರ ಪರ ಅರಣ್ಯ ಇಲಾಖೆ ಕಿರುಕುಳ ನೀಡುವ ಬಗ್ಗೆ ನ್ಯಾಯಾಲಯದಲ್ಲಿ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗುವುದು.ಪಶ್ಚಿಮ ಘಟ್ಟ ಸಕಲೇಶಪುರ ಭಾಗದಲ್ಲಿ ಹಲವು ಕಂದಾಯ ಇಲಾಖೆ ಹಾಗೂ ಗೋಮಾಳ ಜಾಗದಲ್ಲಿ ಅವೈಜ್ಞಾನಿಕ ಸರ್ವೆ ಮಾಡಿ ಕಿರುಕುಳ ನೀಡುವ ಅರಣ್ಯ ಇಲಾಖೆ ಈ ಹಿಂದೆ ಸರ್ಕಾರಕ್ಕೆ ಯಾವುದೇ ನ್ಯಾಯಯುಕ್ತ ಸೂಕ್ತ ದಾಖಲೆಯನ್ನು ಸಲ್ಲಿಸಿಲ್ಲ. ಇಂದಿನ ಅರಣ್ಯ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಕುಳಿತು ಮಾಡಿರುವ ಅವೈಜ್ಞಾನಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರಕ್ಕೆ ಸಲ್ಲಿಸಿರುವ ಸಲ್ಲಿಸಿರುವ ವರದಿಯನ್ನೇ ದಾಖಲೆ ಎನ್ನುತ್ತಿರುವ ಅರಣ್ಯ ಇಲಾಖೆಗೆ ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಮುಖಭಂಗ ಆಗುವ ದಿನ ದೂರವಿಲ್ಲ. ಕೆಲವು ಭಾಗಗಳಲ್ಲಿ ರೈತರಿಗೆ ಎರಡು ಗುಂಟೆ ೯೩ ಸಿ ದಾಖಲೆ ಸಹ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿರುವುದು ಸರಿಯಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗೆ ಹಾಗೂ ಸಕಲೇಶಪುರ ತಾಲೂಕು ತಹಸೀಲ್ದಾರ್, ಕಂದಾಯ ಇಲಾಖೆಗೆ ದಾಖಲೆ ಸಮೇತ ಮಾಹಿತಿ ನೀಡಿ ಮುಂದಿನ ಹೋರಾಟ ರೂಪರೇಷೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಸಭೆಯಲ್ಲಿ ಎಲ್ಲಾ ರೈತರ ನಿರ್ಣಯದಂತೆ ಅರಣ್ಯ ಇಲಾಖೆಯ ಹೋರಾಟ ಸಮಿತಿಯ ಅಧ್ಯಕ್ಷರಾಗಿ ಪ್ರತಾಪ್ ಗೌಡ ಕಾನೂನು ಹೋರಾಟ ಮಾಡಲು ಹಾಗೂ ನೋಟ್ರಿ ವಕೀಲ ಬಿ ಕೆ ವಿಜಯಕುಮಾರ್ ಕುಮತ್ತಳ್ಳಿ, ಹೆತ್ತೂರು ವಾಣಿ ಅವರನ್ನು ಸರ್ವಮತದಿಂದ ಆಯ್ಕೆ ಮಾಡಲಾಯಿತು.ಸಭೆಯಲ್ಲಿ ಸಕಲೇಶಪುರ ತಾಲೂಕಿನ ನೂರಾರು ರೈತರು ಕಾಫಿ ಬೆಳೆಗಾರರು ಏಲಕ್ಕಿ ಬೆಳೆಗಾರ ಸಂಘದ ಮಾಜಿ ಅಧ್ಯಕ್ಷ ಕುಶಲ್ ಗೌಡ, ಹೆತ್ತೂರು ಬೆಳೆಗಾರ ಸಂಘದ ಕಾರ್ಯದರ್ಶಿ ಶ್ರೀಧರ್, ಒಕ್ಕಲಿಗರ ಸಂಘದ ರಾಮಣ್ಣ ದಲಿತ ಹೋರಾಟ ಸಮಿತಿಯ ಅಧ್ಯಕ್ಷ ರಾಮಚಂದ್ರ ಬ್ಯಾಗಡಹಳ್ಳಿ, ಸಕಲೇಶಪುರ ಪುರಸಭೆ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಸಲೀಂ ಇತರೆ ಪ್ರಮುಖರು ಉಪಸ್ಥಿತರಿದ್ದರು.