ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗೆ ಎರಡು ಪಕ್ಷಗಳಲ್ಲೂ ಬಂಡಾಯ ಭೀತಿ ಎದುರಾಗಿದೆ. ಎರಡು ಪಕ್ಷಗಳು ಹೇಗೆ ನಿಭಾಯಿಸುತ್ತವೆ ಎಂಬುದರ ಮೇಲೆ ಚುನಾವಣೆ ನಿಂತಿದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗೆ ಎರಡು ಪಕ್ಷಗಳಲ್ಲೂ ಬಂಡಾಯ ಭೀತಿ ಎದುರಾಗಿದೆ. ಎರಡು ಪಕ್ಷಗಳು ಹೇಗೆ ನಿಭಾಯಿಸುತ್ತವೆ ಎಂಬುದರ ಮೇಲೆ ಚುನಾವಣೆ ನಿಂತಿದೆ.ಆಗಿರುವುದೇನು?
ಪಶ್ಚಿಮ ಪದವೀಧರ ಕ್ಷೇತ್ರದ ವ್ಯಾಪ್ತಿ ಉತ್ತರ ಕನ್ನಡ, ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆ. ಈ ನಾಲ್ಕು ಜಿಲ್ಲೆಗಳ ಪದವೀಧರರೇ ಇದಕ್ಕೆ ಮತದಾರರು. ಈ ಕ್ಷೇತ್ರದಲ್ಲಿ ಮೊದಲು ಕಾಂಗ್ರೆಸ್ ತೆಕ್ಕೆಯಲ್ಲೇ ಇತ್ತು. ಮೊದಲು ನಡೆದ ಮೂರು ಚುನಾವಣೆಯಲ್ಲಿ ಕಾಂಗ್ರೆಸ್‌ನ ವೈ.ಎಸ್. ಪಾಟೀಲ, 1984ರಿಂದ 2008ರ ವರೆಗೆ ಬರೋಬ್ಬರಿ ನಾಲ್ಕು ಚುನಾವಣೆಯಲ್ಲಿ ಎಚ್.ಕೆ. ಪಾಟೀಲ, 2008ರಲ್ಲಿ ಬಿಜೆಪಿಯಿಂದ ಮೋಹನ ಲಿಂಬಿಕಾಯಿ, 2014 ಹಾಗೂ 2020ರಲ್ಲಿ ನಡೆದ ಎರಡು ಚುನಾವಣೆಯಲ್ಲಿ ಬಿಜೆಪಿಯಿಂದ ಎಸ್.ವಿ. ಸಂಕನೂರು ಆಯ್ಕೆಯಾಗಿರುವುದುಂಟು.ಬಂಡಾಯದ ಕೂಗು
ಚುನಾವಣೆ 11 ತಿಂಗಳು ಬಾಕಿಯಿರುವಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ ಮೋಹನ ಲಿಂಬಿಕಾಯಿ ಅವರನ್ನು ಆಯ್ಕೆ ಮಾಡಿ ಘೋಷಿಸಿತು. ಇನ್ನು ಕಾಂಗ್ರೆಸ್ ಘೋಷಿಸಿದ ಎರಡು ತಿಂಗಳಲ್ಲಿ ತನ್ನ ಅಭ್ಯರ್ಥಿಯನ್ನಾಗಿ ಹಾಲಿ ಸದಸ್ಯ ಎಸ್.ವಿ. ಸಂಕನೂರ ಅವರಿಗೆ ಮೂರನೆಯ ಬಾರಿಗೆ ಬಿಜೆಪಿ ಟಿಕೆಟ್ ನೀಡಿ ಘೋಷಿಸಿತು. ಹಾಗೆ ನೋಡಿದರೆ ಇಷ್ಟೊಂದು ಮುಂಚಿತವಾಗಿ ಎರಡು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಖೈರುಗೊಳಿಸಿ ಹೆಸರು ಘೋಷಿಸಿರುವುದು ಇದೇ ಮೊದಲು. ಎರಡು ಪಕ್ಷಗಳಲ್ಲೂ ಡಜನಗಟ್ಟಲೇ ಆಕಾಂಕ್ಷಿಗಳಿದ್ದರು. ಇದೀಗ ಎರಡು ಪಕ್ಷಗಳು ಬಂಡಾಯದ ಕೂಗು ಜೋರಾಗಿ ಕೇಳಿ ಬರುತ್ತಿದೆ. ಕಾಂಗ್ರೆಸ್‌ನಲ್ಲಿ ಮೂರ್ನಾಲ್ಕು ಬಾರಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಕಣಕ್ಕಿಳಿದು ಸೋತಿರುವ ಆರ್.ಎಂ. ಕುಬೇರಪ್ಪ ಈಸಲ ತಮಗೆ ಟಿಕೆಟ್ ಸಿಗುವುದು ಖಚಿತ ಎಂದು ಭಾವಿಸಿದ್ದರು. ಈ ಸಲ ಸರ್ಕಾರ ಕೂಡ ತಮ್ಮದೇ ಇದೆ. ಹೀಗಾಗಿ ಟಿಕೆಟ್ ಕೊಟ್ಟರೆ ಗೆಲವು ಖಚಿತ. ದಶಕಗಳಿಂದಲೇ ವಿಧಾನ ಪರಿಷತ್ ಪ್ರವೇಶಿಸಬೇಕು ಎಂಬ ತಮ್ಮ ಕನಸು ನನಸಾಗುತ್ತದೆ ಎಂದು ನಿರೀಕ್ಷೆಯನ್ನಿಟ್ಟುಕೊಂಡಿದ್ದರು. ಆದರೆ, ಕನಸು ಕನಸಾಗಿಯೇ ಉಳಿದಿದೆ. ಪಕ್ಷದ ಟಿಕೆಟ್ ಪಡೆಯುವಲ್ಲಿ ವಿಫಲವಾಗಿದ್ದಾರೆ. ಪಕ್ಷದ ಮುಖಂಡರು ಸಮಾಧಾನ ಪಡಿಸುವ ಯತ್ನವನ್ನೂ ಮಾಡಿರುವುದುಂಟು.ಪಕ್ಷ ಸೂಕ್ತವಾದ ಸ್ಥಾನಮಾನ ನೀಡಬೇಕು. ಇಲ್ಲದಿದ್ದಲ್ಲಿ ಅಭಿಮಾನಿಗಳ ಬೆಂಬಲದಿಂದ ಪಕ್ಷೇತರರಾಗಿ ಕಣಕ್ಕಿಳಿಯುತ್ತೇನೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಯಾವುದಕ್ಕೂ ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆ ಮುಗಿಯುವ ವರೆಗೂ ಕಾಯುತ್ತೇನೆ. ಆ ಬಳಿಕ ನಿರ್ಧಾರ ಕೈಗೊಳ್ಳುತ್ತೇನೆ ಎಂಬುದು ಕುಬೇರಪ್ಪ ಅವರ ಮಾತು.
ಬಿಜೆಪಿಯಲ್ಲೂ ಬಂಡಾಯಬಿಜೆಪಿಯಲ್ಲೂ ಬಂಡಾಯದ ಕೂಗು ಜೋರಾಗುತ್ತಿದೆ. ಟಿಕೆಟ್ ಘೋಷಣೆಯಾದ ಮರುದಿನವೇ ಲಿಂಗರಾಜ ಪಾಟೀಲ ಅಸಮಾಧಾನ ವ್ಯಕ್ತಪಡಿಸಿ ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೇ ಸಮಾಧಾನ ಪಡಿಸಿದ್ದಾರೆ. ಲಿಂಗರಾಜ ಪಾಟೀಲ ಸಮಾಧಾನ ಆಗಿದ್ದಾರೆನ್ನುವಷ್ಟರಲ್ಲೇ ಇದೀಗ ಧಾರವಾಡದ ಸುಧೀಂದ್ರ ದೇಶಪಾಂಡೆ ಬಂಡಾಯದ ಕೂಗು ಹಾಕಿದ್ದಾರೆ. ತಾವು ಆಕಾಂಕ್ಷಿಯಾಗಿದ್ದೆ. ಆದರೆ, ಪಕ್ಷ ತಮಗೆ ಟಿಕೆಟ್ ನೀಡಿಲ್ಲ. ಹೀಗಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಸಂಕನೂರ ಅವರಿಗೆ ಟಿಕೆಟ್ ಕೊಟ್ಟಿರುವುದು ಪಕ್ಷದಲ್ಲೇ ಸಾಕಷ್ಟು ಅಸಮಾಧಾನವನ್ನುಂಟು ಮಾಡಿದೆ. ತಮ್ಮ ಸ್ಪರ್ಧೆಗೆ ಮಹೇಶ ನಾಲ್ವಾಡ ಅವರು ಬೆಂಬಲಿಸಲಿದ್ದಾರೆ. ಇವರು ಆಕಾಂಕ್ಷಿಯಾಗಿದ್ದರು ಎಂದು ದೇಶಪಾಂಡೆ ಹೇಳಿದ್ದಾರೆ.
ಒಟ್ಟಿನಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದಿಂದ ಪರಿಷತ್‌ಗೆ ನಡೆಯುವ ಚುನಾವಣೆಗೆ ಎರಡು ಪಕ್ಷಗಳಲ್ಲೂ ಬಂಡಾಯದ ಕೂಗು ಕೇಳಿ ಬರುತ್ತಿರುವುದಂತೂ ಸತ್ಯ. ಅದ್ಹೇಗೆ ನಿಭಾಯಿಸುತ್ತಾರೋ ಕಾಯ್ದು ನೋಡಬೇಕು.ಪಕ್ಷದ ಮುಖಂಡರು, ಸಚಿವರು ನನ್ನೊಂದಿಗೆ ಮಾತನಾಡಿ ಸ್ಥಾನಮಾನ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಉಪಚುನಾವಣೆ ಮುಗಿಯುವ ವರೆಗೂ ಗಡುವು ನೀಡುತ್ತೇನೆ. ಉಪಚುನಾವಣೆ ಮುಗಿದ ಮೇಲೆ ಪಕ್ಷದಿಂದ ಸ್ಥಾನಮಾನದ ಭರವಸೆ ಸಿಗದಿದ್ದಲ್ಲಿ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿಯುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಕಾಂಗ್ರೆಸ್ ಟಿಕೆಟ್ ವಂಚಿತ ಆರ್.ಎಂ. ಕುಬೇರಪ್ಪ ಹೇಳಿದ್ದಾರೆ.
ಈ ಸಲ ತಮಗೆ ಬಿಜೆಪಿ ಟಿಕೆಟ್ ಸಿಗುವ ಭರವಸೆ ಇತ್ತು. ಆದರೆ, ಸಂಕನೂರ ಅವರಿಗೆ ಟಿಕೆಟ್ ನೀಡಿರುವುದು ಬೇಸರ ಮಾಡಿದೆ. ಅವರಿಗೆ ಟಿಕೆಟ್ ಸಿಕ್ಕಿರುವುದು ಪಕ್ಷದಲ್ಲೇ ಅಸಮಾಧಾನವಿದೆ. ಅವರೆಲ್ಲರಿಂದ ತಮಗೆ ಬೆಂಬಲ ಸಿಗಲಿದೆ. ಈ ಸಲ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಬಿಜೆಪಿ ಟಿಕೆಟ್ ವಂಚಿತ ಸುಧೀಂದ್ರ ದೇಶಪಾಂಡೆ ಹೇಳಿದ್ದಾರೆ.