ರೈತರಿಗೆ, ಮಹಿಳೆಯರಿಗೆ, ಬಡವರಿಗೆ ಮೋದಿ ಕಾರ್ಯಕ್ರಮಗಳೇನು?

| Published : May 05 2024, 02:09 AM IST

ಸಾರಾಂಶ

ಚಿಕ್ಕೋಡಿ ಪಟ್ಟಣದ ಆರ್.ಡಿ.ಕಾಲೇಜು ಮೈದಾನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿಪ್ರಧಾನಿ ನರೇಂದ್ರ ಮೋದಿಯವರು 10 ವರ್ಷದ ಅವಧಿಯಲ್ಲಿ ರೈತರಿಗೆ, ಮಹಿಳೆಯರಿಗೆ, ಹಿಂದುಳಿದವರರಿಗೆ, ಅಲ್ಪಸಂಖ್ಯಾತರಿಗೆ, ಬಡವರಿಗೆ ಏನು ಕಾರ್ಯಕ್ರಮಗಳನ್ನು ನೀಡಿದ್ದಾರೆಂದು ತಿಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.ಪಟ್ಟಣದ ಆರ್.ಡಿ.ಕಾಲೇಜು ಮೈದಾನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರ ಅವಧಿಯಲ್ಲಿ ₹75 ಸಾವಿರ ಕೋಟಿ ರೈತರ ಸಾಲವನ್ನು ಮನ್ನಾ ಮಾಡಿದ್ದೇವು. ರೈತರಿಗೆ ನಮ್ಮ ಅವಧಿಯಲ್ಲಿ ಕಬ್ಬಿಗೆ ಬೆಂಬಲ ಬೆಲೆ ನೀಡಿದ್ದೇವೆ ಎಂದರು.ರೈತರ ಆದಾಯ ದ್ವಿಗುಣ ಮಾಡುತ್ತೇನೆಂದು ಹೇಳಿದರು. ಆದರೆ ರೈತರ ಆದಾಯ ದ್ವಿಗುಣ ಆಗಲಿಲ್ಲ. ರೈತರು ಬೆಳೆದ ಬೆಳೆಗಳಿಗೆ ನ್ಯಾಯ ಒದಗಿಸಲಿಲ್ಲ. ರೈತರ ಸಾಲಮನ್ನಾ ಮಾಡಲಿಲ್ಲ. ಆದರೆ, ಅಂಬಾನಿ, ಅದಾನಿ ಸೇರಿದಂತೆ ಹಲವು ಕೈಗಾರಿಕೆ ಉದ್ಯಮಿಗಳ ₹16 ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದಾರೆ ಎಂದು ಆರೋಪಿಸಿದರು.ಬಡವರು ಜೀವನ ಮಾಡುವುದು ಕಷ್ಟವಾಗಿದೆ. ಕಳೆದ ವಿಧಾನಸಭೆಯಲ್ಲಿ ನೀಡಿದ 5 ಗ್ಯಾರಂಟಿ ಯೋಜನೆಗಳನ್ನು ಸೇರಿ 82 ಭರವಸೆಗಳನ್ನು ಈಡೇರಿಸಿದ್ದೇವೆ. ಪೆಟ್ರೋಲ್, ಡಿಸೇಲ್, ಗ್ಯಾಸ್‌ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಏರಿಕೆ ಆಗಿವೆ. ‌ಈಗಲಾದರೂ ನೀವು ಬಡವರ ಪರ ಇದ್ದಿರಾ ಎಂದು ಪ್ರಶ್ನಿಸಿದರು.ಅಣ್ಣಾಸಾಬ್ ಜೊಲ್ಲೆ ಎಂದಾದರೂ ನಿಮ್ಮ ಪರವಾಗಿ ಧ್ವನಿ ಎತ್ತಿದ್ದಾನಾ? ರಾಜ್ಯದಲ್ಲಿ ಬರಗಾಲ ಬಂದರೂ ಅನುದಾನ ಬಿಡುಗಡೆ ಮಾಡಲಿಲ್ಲ. ಪ್ರತಿ ವರ್ಷ ₹4 ಲಕ್ಷ ಕೋಟಿ ತೆರಿಗೆ ಕಟ್ಟುತ್ತಿದ್ದೇವೆ. 7 ತಿಂಗಳಾದರೂ ಅನುದಾನ ಬಿಡುಗಡೆ ಮಾಡಲಿಲ್ಲ. ನಾವು ಸುಪ್ರೀಂ ಕೋರ್ಟ್‌ಗೆ ಹೋದ ಬಳಿಕ ₹3,400 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಕರ್ನಾಟಕಕ್ಕೆ ಮೋದಿ‌ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.

ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಚುನಾವಣೆಗೆ ಇನ್ನೆರಡು ದಿನ ಉಳಿದಿದೆ. ಬೂತಮಟ್ಟದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕೆಲಸ ಮಾಡಬೇಕು. ಪುತ್ರಿ ಗೆಲುವಿನ ಮೂನ್ಸೂಚನೆ ದೊರತ್ತಿದೆ. ಪ್ರಿಯಾಂಕಾ ಗೆಲುವಾದರೇ ಸ್ಥಳೀಯ ಶಾಸಕರ ಜತೆಗೂಡಿ ಚಿಕ್ಕೋಡಿ ಸರ್ವಾಂಗೀಣ ಅಭಿವೃದ್ಧಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ಕರ್ನಾಟಕದ 7 ಕೋಟಿ ಜನಸಂಖ್ಯೆಯಲ್ಲಿ 4.5 ಕೋಟಿ ಜನ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಜಾರಿಗೆ ತಂದಂತೆ ಗ್ಯಾರಂಟಿ ಯೋಜನೆಗಳನ್ನು ಕೇಂದ್ರದಲ್ಲಿಯೂ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದರು.ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ವಿಶ್ವಗುರು ಬಸವೇಶ್ವರ, ಡಾ.ಅಂಬೇಡ್ಕರ್, ಶಿವಾಜಿ ಮಹಾರಾಜರು, ರಾಯಣ್ಣ, ಜೈನ್‌ ಮುನಿಗಳನ್ನು ನೆನೆಯುತ್ತೇನೆ. ಸರ್ವ ಸಮುದಾಯದ ಅಭಿವೃದ್ಧಿಗೆ ತಂದೆಯವರು ಶ್ರಮಿಸಿದ್ದಾರೆ. ಚಿಕ್ಕೋಡಿ ಕ್ಷೇತ್ರದ ಅಭಿವೃದ್ಧಿ ಕನಸು ಕಂಡಿರುವೆ. ಆತ್ಮೀಯ ಮತದಾರರ ಇದೊಂದು ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಶಾಸಕ ಲಕ್ಷ್ಮಣ ಸವದಿ, ಕುಡಚಿ ಶಾಸಕ ಮಹೇಂದ್ರ ತಮ್ಮನ್ನವರ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿಯನ್ನು ಆಶೀರ್ವದಿಸಬೇಕು ಎಂದು ಕೋರಿದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ನಾಗರಾಜ ಯಾದವ, ಕಡೂರು ಶಾಸಕ ಆನಂದ, ಶಾಸಕರಾದ ಶಾಸಕ ಎಚ್.‌ಡಿ.ತಿಮ್ಮಯ್ಯ, ರವಿಶಂಕರ, ಆರ್‌ ಕೃಷ್ಟಮೂರ್ತಿ, ಮಾಜಿ ಸಚಿವರಾದ ವೀರಕುಮಾರ ಪಾಟೀಲ್, ಎ.ಬಿ.ಪಾಟೀಲ್, ಶಶಿಕಾಂತ್ ನಾಯಕ, ಮಾಜಿ ಶಾಸಕರಾದ ಶ್ಯಾಮ್ ಘಾಟಗೆ, ಕಾಕಾ ಸಾಹೇಬ್ ಪಾಟೀಲ್, ಸುಭಾಷ್ ಜೋಶಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಕಾರ್ಯದರ್ಶಿ ದಯಾನಂದ ಪಾಟೀಲ್, ಮಹಾವೀರ ಮೋಹಿತೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ್‌ ಹಣವನ್ನವರ್‌ ಸೇರಿದಂರೆ ಸಾವಿರಾರು ಬೆಳಗಾವಿ ಜಿಲ್ಲೆಯ ಮುಖಂಡರು ಉಪಸ್ಥಿತರಿದ್ದರು.

ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾಗೆ ಚುನಾವಣೆಗೆ ನಿಲ್ಲಿಸಬೇಕೆಂದು ಇರಲಿಲ್ಲ. ಸತೀಶ್ ಜಾರಕಿಹೊಳಿಗೆ ದುಂಬಾಲು ಬಿದ್ದು ನಿಲ್ಲಿಸಿದ್ದೇವೆ. ಪ್ರಿಯಾಂಕಾ ಜಾರಕಿಹೊಳಿ ಅವರನ್ನು ನಿಲ್ಲಿಸಿದರೇ ನನ್ನ ಮಗನನ್ನು ನಿಲ್ಲಿಸುತ್ತೇನೆಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ಪ್ರಿಯಾಂಕಾ, ಮೃಣಾಲ್‌ ಅವರಿಬ್ಬರನ್ನು ನಿಲ್ಲಿಸಿದ್ದೇವೆ. ನೀವೆಲ್ಲರೂ ಸೇರಿ ಇಬ್ಬರನ್ನು ಗೆಲ್ಲಿಸಬೇಕು. ಪ್ರಿಯಾಂಕಾ ಗೆದ್ದರೇ ಲೋಕಸಭೆಯಲ್ಲಿ ನಿಮ್ಮ ಪರ ಧ್ವನಿ ಎತ್ತುತ್ತಾಳೆಂಬ ವಿಶ್ವಾಸ ನಮಗಿದೆ.

-ಸಿದ್ದರಾಮಯ್ಯ, ಸಿಎಂ.