ಮೇಯರ್‌ ರಾಮಣ್ಣ ಬಡಿಗೇರ ಮುಂದಿರುವ ಸವಾಲುಗಳೇನು?

| Published : Jul 05 2024, 12:52 AM IST

ಮೇಯರ್‌ ರಾಮಣ್ಣ ಬಡಿಗೇರ ಮುಂದಿರುವ ಸವಾಲುಗಳೇನು?
Share this Article
  • FB
  • TW
  • Linkdin
  • Email

ಸಾರಾಂಶ

ಸಿಸಿ ರಸ್ತೆಗಳೆಲ್ಲ ಮೊದಲಿಗಿಂತ ಒಂದುವರೆ ಅಡಿ ಎತ್ತರವಾಗಿವೆ. ರಸ್ತೆಗಳೆಲ್ಲ ಸಾಕಷ್ಟು ಕಡೆಗಳಲ್ಲಿ ಮೇಲ್ಮಟ್ಟಕ್ಕೇರಿವೆ. ಮಳೆ ನೀರೆಲ್ಲ ಮನೆ, ಅಂಗಡಿ ಮುಗ್ಗಂಟ್ಟು, ವಾಣಿಜ್ಯ ಸಂಕೀರ್ಣಗಳಲ್ಲಿ ನುಗ್ಗುತ್ತದೆ. ಜನ ತೊಂದರೆ ಅನುಭವಿಸುವಂತಾಗಿದೆ.

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನೂತನ ಮೇಯರ್‌ ಆಗಿ ರಾಮಣ್ಣ ಬಡಿಗೇರ ಆಯ್ಕೆಯಾಗಿದ್ದು ಅವರ ಹಾದಿ ಅಂದುಕೊಂಡಷ್ಟು ಸಲೀಸಾಗಿಲ್ಲ. ನೂರೆಂಟು ಸಮಸ್ಯೆಗಳ ಸರಿಮಾಲೆಯೇ ಎದುರಿಗಿವೆ. ರಾಜ್ಯದ 2ನೇ ಮಹಾನಗರ ಎನಿಸಿರುವ ಹುಬ್ಬಳ್ಳಿ ಈಗಲೂ ದೊಡ್ಡ ಹಳ್ಳಿ ಎಂಬಂತೆ ಭಾಸವಾಗುತ್ತದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಬರೀ ಸಮಸ್ಯೆಗಳೇ ಎದುರಿಗೆ ಕಾಣಿಸುತ್ತವೆ.

ಹಾಗಂತ ಎಲ್ಲಿಯೂ ಸುಧಾರಣೆ ಕಂಡಿಲ್ಲ ಅಂತೇನೂ ಇಲ್ಲ. ಸಾಕಷ್ಟು ಸುಧಾರಣೆ ಕಂಡಿದೆ. ಊರ ತುಂಬ ಸಿಸಿ ರಸ್ತೆಗಳು ಬಂದಿವೆ. ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಿವೆ. ಆದರೆ ಯಾವೊಂದು ಕಾಮಗಾರಿಯೂ ವೈಜ್ಞಾನಿಕವಾಗಿ ನಡೆದಿಲ್ಲ; ನಡೆಯುತ್ತಲೂ ಇಲ್ಲ.

ಸಿಸಿ ರಸ್ತೆಗಳೆಲ್ಲ ಮೊದಲಿಗಿಂತ ಒಂದುವರೆ ಅಡಿ ಎತ್ತರವಾಗಿವೆ. ರಸ್ತೆಗಳೆಲ್ಲ ಸಾಕಷ್ಟು ಕಡೆಗಳಲ್ಲಿ ಮೇಲ್ಮಟ್ಟಕ್ಕೇರಿವೆ. ಮಳೆ ನೀರೆಲ್ಲ ಮನೆ, ಅಂಗಡಿ ಮುಗ್ಗಂಟ್ಟು, ವಾಣಿಜ್ಯ ಸಂಕೀರ್ಣಗಳಲ್ಲಿ ನುಗ್ಗುತ್ತದೆ. ಜನ ತೊಂದರೆ ಅನುಭವಿಸುವಂತಾಗಿದೆ. ರಸ್ತೆ ಕಾಮಗಾರಿಗಳನ್ನೆಲ್ಲ ವೈಜ್ಞಾನಿಕತೆಯಿಂದ ಕೈಗೊಳ್ಳಬೇಕು. ಜತೆಗೆ ಈಗ ರಸ್ತೆಗಳ ನಿರ್ಮಾಣದಿಂದ ಆಗಿರುವ ಸಮಸ್ಯೆಯನ್ನು ಬಗೆಹರಿಸಲು ಉಪಾಯ ಕಂಡುಕೊಳ್ಳಬೇಕಿದೆ. ಎಲ್ಲೆಡೆ ಆಮೆಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದಾಗಿ ಇಡೀ ನಗರವೇ ಧೂಳುಮಯವನ್ನಾಗಿಸಿದೆ. ಧೂಳಿನಿಂದ ಮುಕ್ತಗೊಳಿಸಲು ಮೇಯರ್‌ ಕ್ರಮಕೈಗೊಳ್ಳಬೇಕಿದೆ. ಜತೆಗೆ ಕಾಮಗಾರಿಗಳೆಲ್ಲ ತ್ವರಿತಗತಿಯಲ್ಲಿ ನಡೆಯಬೇಕಿದೆ.

ರಾಜಕಾಲುವೆ ಒತ್ತುವರಿ ತೆರವು:

ಇನ್ನು ರಾಜಕಾಲುವೆ. ಹೆಸರಿಗಷ್ಟೇ ರಾಜಕಾಲುವೆ ಎಂಬಂತಾಗಿದೆ. ಹಿಂದೆ ಸಮೀಕ್ಷೆ ನಡೆಸಿದ ವೇಳೆ ಬರೋಬ್ಬರಿ 156 ಕಡೆಗಳಲ್ಲಿ ಒತ್ತುವರಿ ಮಾಡಿದ್ದು ಬೆಳಕಿಗೆ ಬಂದಿತ್ತು. ಸಾಕಷ್ಟು ಜನ ಪ್ರಭಾವಿಗಳೇ ಅದನ್ನು ಒತ್ತುವರಿ ಮಾಡಿದ ಪ್ರಭಾವದಿಂದಾಗಿ ಆ ಸಮೀಕ್ಷೆಯ ವರದಿಯೇ ಮೂಲೆ ಸೇರಿ ತಿಂಗಳುಗಳೇ ಕಳೆದಿವೆ. ಇದರೊಂದಿಗೆ ಹಿಂದೆ 30-40 ವರ್ಷದ ಹಿಂದೆಯೇ ರಾಜಕಾಲುವೆಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡಿದ್ದು ಆಗಿದೆ. ಆಗ ರಾಜಕಾಲುವೆಗಳ ಮೇಲೆ ದೊಡ್ಡ ದೊಡ್ಡ ಕಟ್ಟಡಗಳೆಲ್ಲ ತಲೆ ಎತ್ತಿವೆ. ಅವುಗಳ ಗುತ್ತಿಗೆ ಅವಧಿ ಮುಗಿದರೂ ಪಾಲಿಕೆ ತಣ್ಣಗೆ ಕುಳಿತಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿ ವರ್ಗವಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ ಚಕಾರವನ್ನೇ ಎತ್ತುತ್ತಿಲ್ಲ. ಮೊದಲು ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು. ಈ ನಿಟ್ಟಿನಲ್ಲಿ ನೂತನ ಮೇಯರ್‌ ಕ್ರಮ ಕೈಗೊಳ್ಳುವರೆ?

ಎಲ್‌ ಆ್ಯಂಡ್‌ ಟಿ ನೀರು:

ನಿರಂತರ ನೀರು ಯೋಜನೆಯ ಗುತ್ತಿಗೆಯನ್ನು ಎಲ್‌ ಆ್ಯಂಡ್‌ ಟಿ ಕಂಪನಿಗೆ ನೀಡಿದೆ. ಆದರೆ ಅದು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಸರ್ವೇ ಸಾಮಾನ್ಯವಾಗಿದೆ. ಮೊದಲು ಬರುವಷ್ಟು ನೀರು ಬರುತ್ತಿಲ್ಲ. ಕಾಮಗಾರಿ ಕೂಡ ಆಮೆಗತಿಯಲ್ಲಿ ಸಾಗಿದೆ. ಎಲ್‌ ಆ್ಯಂಡ್‌ ಟಿ ಕಂಪನಿಗೆ ಕೊಟ್ಟಿರುವ ಗುತ್ತಿಗೆ ರದ್ದು ಮಾಡಿ ಎಂಬ ಬೇಡಿಕೆಯನ್ನು ಪಾಲಿಕೆಯ ಸಾಮಾನ್ಯ ಸಭೆಯಲ್ಲೇ ಕೇಳಿ ಬಂದಿತ್ತು. ಇನ್ಮೇಲಾದರೂ ಅದು ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕಿದೆ. ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳೆಲ್ಲ ಮುಗಿದಿವೆ. ಆದರೆ ಯಾವೊಂದು ಕೆಲಸವೂ ಸಮರ್ಪಕವಾಗಿಲ್ಲ. ಅದಕ್ಕೆ ಹಣವೆಲ್ಲ ವ್ಯರ್ಥ ಎಂದೇ ಪಾಲಿಕೆ ಸದಸ್ಯರೇ ಆರೋಪಿಸುತ್ತಾರೆ. ಲೋಕಾಯುಕ್ತಕ್ಕೂ ಇದು ದೂರು ಹೋಗಿದ್ದುಂಟು. ಅಂಚಟಗೇರಿ ಮೇಯರ್‌ ಆಗಿದ್ದಾಗ ಈ ಬಗ್ಗೆ ಸ್ಮಾರ್ಟ್‌ಸಿಟಿ ಯೋಜನೆ ವಿರುದ್ಧ ನಾಲ್ಕಾರು ಪತ್ರ ಬರೆದು ಆಕ್ಷೇಪಿಸಿದ್ದುಂಟು. ಈ ಮೇಯರ್‌ ಆದರೂ ಆ ಕಾಮಗಾರಿಗಳ ಬಗ್ಗೆ ನಿಗಾವಹಿಸಿ ಕ್ರಮ ಕೈಗೊಳ್ಳಬೇಕಿದೆ.

ವಾರ್ಡ್‌ ಸಮಿತಿ:

ಪಾಲಿಕೆಯಲ್ಲಿ ಆಡಳಿತ ಮಂಡಳಿ ಎರಡುವರೆ ವರ್ಷವಾದರೂ ಈವರೆಗೂ ವಾರ್ಡ್‌ ಸಮಿತಿ ರಚನೆಯಾಗಿಲ್ಲ. ಆ ಬಗ್ಗೆ ಪದೇ ಪದೇ ನಾಗರಿಕರು ಮನವಿ ಸಲ್ಲಿಸುವುದೇ ಆಗಿದೆಯೇ ಹೊರತು ಸಮಿತಿ ಮಾತ್ರ ರಚನೆಯಾಗುತ್ತಲೇ ಇಲ್ಲ. ಇದೀಗ ಕೋರ್ಟ್‌ ಮೆಟ್ಟಿಲು ಏರಲು ಕೂಡ ಕೆಲವರು ಸಿದ್ಧರಾಗಿದ್ದು, ಇದನ್ನು ನಿವಾರಿಸಿ ವಾರ್ಡ್‌ ಸಮಿತಿ ರಚನೆಯಾಗುವಂತೆ ಮಾಡಬೇಕಾದ ಜವಾಬ್ದಾರಿ ನೂತನ ಮೇಯರ್‌ ಮೇಲಿದೆ.

ಕಸ ವಿಲೇವಾರಿ, ಅವ್ಯವಸ್ಥಿತ ಚರಂಡಿ, ಪೌರಕಾರ್ಮಿಕರ ನೇರ ನೇಮಕಾತಿ ಹೀಗೆ ಸಾಲು ಸಾಲು ಸಮಸ್ಯೆಗಳಿವೆ. ಇವುಗಳನ್ನೆಲ್ಲ ಬಗೆಹರಿಸಲು ರಾಮಣ್ಣ ಬಡಿಗೇರ ಕ್ರಮ ಕೈಗೊಳ್ಳುತ್ತಾರೆಯೋ ಅಥವಾ ಹತ್ತರಲ್ಲಿ ಹನ್ನೊಂದು ಎಂಬಂತೆ ಇತರೆ ಮೇಯರ್‌ಗಳಂತೆ ತೆಪ್ಪಗೆ ಅಧಿಕಾರ ಅನುಭವಿಸಿ ನಿರ್ಗಮಿಸುತ್ತಾರೋ ಕಾಯ್ದು ನೋಡಬೇಕಿದೆ.