ಸಾರಾಂಶ
ನಾವು ರೂಪಿಸಿದ ದೇವರಿಗಿಂತ ನಮ್ಮನ್ನು ರೂಪಿಸಿದ ದೇವರು ದೊಡ್ಡವನು. ಆತ ಬೇರೆಲ್ಲೂ ಇಲ್ಲ, ಅಂತರಂಗದಲ್ಲಿ ಇದ್ದಾನೆ ಎಂದು ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಶ್ರೀಗಳು ದೇವರ ನಿಜದ ನೆಲೆಯ ಬಗ್ಗೆ ಹೀಗೆ ವ್ಯಾಖ್ಯಾನ ಮಾಡಿದರು.
ಹುಬ್ಬಳ್ಳಿ: ನಾವು ರೂಪಿಸಿದ ದೇವರಿಗಿಂತ ನಮ್ಮನ್ನು ರೂಪಿಸಿದ ದೇವರು ದೊಡ್ಡವನು. ಆತ ಬೇರೆಲ್ಲೂ ಇಲ್ಲ, ಅಂತರಂಗದಲ್ಲಿ ಇದ್ದಾನೆ ಎಂದು ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಶ್ರೀಗಳು ದೇವರ ನಿಜದ ನೆಲೆಯ ಬಗ್ಗೆ ಹೀಗೆ ವ್ಯಾಖ್ಯಾನ ಮಾಡಿದರು.
ಇಲ್ಲಿನ ಉಣಕಲ್ಲ ಸಿದ್ದಪ್ಪಜ್ಜನ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಿರುವ 3ನೇ ದಿನದ ಪ್ರವಚನದಲ್ಲಿ ದೇವರ ಬಗ್ಗೆ ಸ್ಪಷ್ಟತೆಯನ್ನು ನೀಡಿದ ಅವರು, ಕಲ್ಲಿನ ದೇವರುಗಳ ಬೆನ್ನು ಹತ್ತಿ ಬಸವಳಿಯದೇ ಅಂತರಂಗದಲ್ಲಿ ಅರಿಯುವ ಯತ್ನ ಮಾಡುವಂತೆ ನೆರೆದಿದ್ದ ಅಪಾರ ಜನಸ್ತೋಮಕ್ಕೆ ಕಿವಿಮಾತು ಹೇಳಿದರು.ದೇವರು ಮನುಷ್ಯರ ಮೈಮೇಲೆ ಬರುತ್ತದೆ, ಬೇಡಿಕೆ ಇಡುತ್ತದೆ. ಬೇಡಿಕೆ ಈಡೇರಿಸದಿದ್ದರೆ ಕಾಡುತ್ತದೆ ಎನ್ನುವ ಭಯ ಹುಟ್ಟಿಸಲಾಗಿದೆ. ಹಾಗಾಗಿ, ಇಂದು ಜನರು ಅಂತರಂಗದ ಬದಲು ತಳಮಳ, ಅಶಾಂತಿ, ಅಪನಂಬಿಕೆಗಳು ತುಂಬಿಕೊಂಡು ಅತೃಪ್ತ ಜೀವಿಗಳಂತೆ ಆಗಿದ್ದಾರೆ. ದೇವರು ಭಯದಿಂದ ಜನರನ್ನು ಹೊರಗೆ ತರದಿದ್ದರೆ ಸತ್ಯಕ್ಕೆ ಅಪಚಾರ ಬಗೆದಂತೆ ಎಂದರು.
ದೇವರು ಯಾವತ್ತೂ ಕಾಡುವುದಿಲ್ಲ. ನಮ್ಮ ಮನದ ಭ್ರಾಂತಿ ಕಾಡುತ್ತದೆ. ಚರಾಚರಗಳಲ್ಲಿ ದೇವರು ಇದ್ದಾನೆ. ಜಗತ್ತಿಗೆ ದೇವರೊಬ್ಬನೆ, ಆತ ಶಾಶ್ವತ. ಆದರೆ, ಯಾರಿಗೂ ಯಾವುದೇ ರೂಪದಲ್ಲಿ ಕಾಣುವುದಿಲ್ಲ. ದೇವರನ್ನು ಕಾಣುವ ಗೋಜಿಗೆ ಹೋಗದೆ, ಅನುಭವಿಸಬೇಕು. ಅಂತರಂಗದಲ್ಲಿ ಆತ್ಮಾನುಭೂತಿ ಹೊಂದಬೇಕು. ಅದಕ್ಕಾಗಿ ಆಧ್ಯಾತ್ಮಜೀವಿ ಆಗಬೇಕೆಂದು ಶ್ರೀಗಳು ಸಲಹೆ ನೀಡಿದರು.ಬಸವಣ್ಣನ ಸಪ್ತ ಸೂತ್ರಗಳ ಬದುಕಿನಲ್ಲಿ ಅಳವಡಿಸಿಕೊಂಡು ಅನುಸರಿಸಿದರೆ ಅಂತರಂಗ ಶುದ್ಧವಾಗುತ್ತದೆ. ಶುದ್ಧ ಅಂತಃಕರಣದಲ್ಲಿ ಆ ಪರಮಾತ್ಮ ಶಾಶ್ವತವಾಗಿ ನೆಲೆಸಿರುತ್ತಾನೆ. ಸತ್ಯಶುದ್ಧ ಕಾಯಕದಿಂದ ರೂಪಿತವಾದ ಬದುಕು ದೇವರಿಗೆ ಅರ್ಪಿತವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ನೂತನ ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ ನೀಡಿದವರನ್ನು ಸನ್ಮಾನಿಸಲಾಯಿತು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಪ್ರಾಸ್ತಾವಿಕ ಮಾತನಾಡಿದರು. ಎಸ್.ಐ. ನೇಕಾರ ವಂದಿಸಿದರು.