ಭಗವಂತನಿಗೆ ಬೇಕಿದ್ದು ನಿಷ್ಕಲ್ಮಷ ಭಕ್ತಿ: ನಿರಂಜನಾನಂದಪುರಿ ಸ್ವಾಮೀಜಿ

| Published : Mar 20 2024, 01:16 AM IST

ಭಗವಂತನಿಗೆ ಬೇಕಿದ್ದು ನಿಷ್ಕಲ್ಮಷ ಭಕ್ತಿ: ನಿರಂಜನಾನಂದಪುರಿ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ದೇವರಿಗೆ ಬೇಕಿರುವುದು ನಿಷ್ಕಲ್ಮಶವಾದ ಭಕ್ತಿಯೇ ಹೊರತು ಒಣ ತೀಟೆಯ ವ್ಯವಸ್ಥೆಯಲ್ಲ ಎಂದು ಬೆಳ್ಳೋಡಿಯ ಕಾಗಿನೆಲೆ ಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ಹೊಸದುರ್ಗ: ದೇವರಿಗೆ ಬೇಕಿರುವುದು ನಿಷ್ಕಲ್ಮಶವಾದ ಭಕ್ತಿಯೇ ಹೊರತು ಒಣ ತೀಟೆಯ ವ್ಯವಸ್ಥೆಯಲ್ಲ ಎಂದು ಬೆಳ್ಳೋಡಿಯ ಕಾಗಿನೆಲೆ ಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ತಾಲೂಕಿನ ಶ್ರೀರಾಂಪುರ ಸಮೀಪದ ಸೂಚಿಕಲ್‌ ಅಮಾನಿಕೆರೆ ತೋಪಿನಲ್ಲಿ ನಡೆಯುತ್ತಿರುವ ದೇವಿಕೆರೆ ಬೀರಲಿಂಗೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಲಾಗಿದ್ದ ಧಾರ್ಮಿಕ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.

ದೇವರ ಹೆಸರಿನಲ್ಲಿ ಅನಾಚಾರ ಮಾಡುವುದು, ಮೌಢ್ಯತೆಯ ಹಬ್ಬಗಳಿಗೆ ಕಡಿವಾಣ ಹಾಕಬೇಕು. ಎಲ್ಲಿಯ ತನಕ ಸಮುದಾಯದ ಜನ ಬಾಯಿ ಚಪಲದ ಹಬ್ಬಗಳಿಗೆ ಕಡಿವಾಣ ಹಾಕಲ್ಲ ಅಲ್ಲಿಯ ತನಕ ಸಮುದಾಯದ ಆರ್ಥಿಕ ವ್ಯವಸ್ಥೆ ಸುಭದ್ರವಾಗಲ್ಲ. ಸಮುದಾಯ ಬಲಿಷ್ಠವಾಗಿ ಸಂಘಟನೆಯಾಗಲು ಶಿಕ್ಷಣ ಮತ್ತು ಆರ್ಥಿಕತೆ ಸುಭದ್ರವಾಗಬೇಕು ಈ ನಿಟ್ಟಿನಲ್ಲಿ ಸಮುದಾಯದ ಜನ ಚಿಂತನೆ ಮಾಡಬೇಕು ಎಂದರು.

ಅಕ್ಷರ ಜ್ಞಾನದಿಂದ ಜಾಗೃತರಾದಾಗ ಮಾತ್ರ ಯಾವುದೇ ಸಮಾಜ ಸುಧಾರಣೆಯಾಗಲು ಸಾಧ್ಯ. ಕುರಿ ಕಡಿಯುವ ಹಿರಿಯರ ಹಬ್ಬವನ್ನು ನಿಲ್ಲಿಸಿ. ಹಿರಿಯರು ಬದುಕಿದ್ದಾಗ ಅವರನ್ನು ಪ್ರೀತಿಯಿಂದ ಕಾಣಿರಿ. ಅನಾಚಾರದ ಹಬ್ಬಗಳನ್ನು ನಿಲ್ಲಿಸಿ ಮಕ್ಕಳಿಗೆ ಶಿಕ್ಷಣ ಕೊಡಿ. ಮಕ್ಕಳು ಶಿಕ್ಷಣವಂತರಾಗಿ ಸಮಾಜದ ಸಂಪತ್ತಾದರೆ ಸಮಾಜ ಸುಧಾರಣೆಯಾಗಲು ಸಾಧ್ಯ ಎಂದರು.

ಹೊಸದುರ್ಗದ ಕನಕ ಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಶೈವ ಪರಂಪರೆಯ ಹಾಲುಮತ ಸಮಾಜದವರು ಹುಟ್ಟು ಲಿಂಗಾಯಿತರು, ಬೇರೆಯವರು ಕಟ್ಟು ಲಿಂಗಾಯಿತರು. ಬಸವಣ್ಣ ಬಂದ ನಂತರ ಅನೇಕರು ಲಿಂಗಾಯಿತರಾದರು. ನಮಗೆ ಪೀಠಗಳಿಲ್ಲದ ಕಾಲದಲ್ಲಿ ನಮ್ಮನ್ನು ಎಲ್ಲರೂ ಬಳಸಿಕೊಂಡರು ಬೆಳೆಸಲಿಲ್ಲ. ಈಗ ನಮ್ಮದೇ ಪೀಠ ಸ್ಥಾಪನೆಯಾಗಿದೆ ನಮ್ಮ ಸಮಾಜದ ಸಂಘಟನೆಯಾಗುತ್ತಿದೆ ಅದಕ್ಕೆ ಸಮಾಜದ ಜನ ಸಹಕಾರಿಯಾಗಬೇಕು ಎಂದರು.

5 ವರ್ಷದ ಹಿಂದೆ ಇದೇ ಜಾಗದಲ್ಲಿ 27 ಕೋಟಿ ರು. ಖರ್ಚುಮಾಡಿ ಹಲ್ಲುಮರಿ ಜಾತ್ರೆ ಮಾಡಿದ್ದಿರಿ. ಇಷ್ಟೊಂದು ಹಣ ಖರ್ಚು ಮಾಡಿ ಜಾತ್ರೆ ಮಾಡುವ ಅವಶ್ಯಕತೆ ಇತ್ತೆ ಎನ್ನುವುದನ್ನು ಎಲ್ಲರೂ ಯೋಚಿಸಬೇಕು. ಇದೆ ಹಣದಲ್ಲಿ ಇಲ್ಲಿ ಒಂದು ನರ್ಸಿಂಗ್‌ ಕಾಲೇಜೋ, ಡಿಪ್ಲಮೋ ಕಾಲೇಜೋ, ಇಂಜಿನಿಯರಿಂಗ್‌ ಕಾಲೇಜೋ ಕಟ್ಟಿದ್ದರೆ ಮಕ್ಕಳು ಇಂದು ವಿದ್ಯಾವಂತರಾಗುತ್ತಿದ್ದರು. ಇಂತಹ ದುಂದು ವೆಚ್ಚದ ಹಬ್ಬಗಳು ನಮ್ಮನ್ನು ಆರ್ಥಿಕವಾಗಿ ಜರ್ಜರಿತ ಮಾಡುತ್ತಿವೆ ಎಂದರು.

ಕುರುಬ ಸಮುದಾಯದವರಾದ ಸಿದ್ದರಾಮಯ್ಯ 2ನೇ ಬಾರಿಗೆ ಮುಖ್ಯಮಂತ್ರಿಯಾಗಿರುವುದು ನಮ್ಮ ಹೆಮ್ಮೆ. ಕುರುಬರು ರಾಜಕೀಯ ಸಮರ್ಥರು ಎನ್ನುವುದನ್ನು ಸಾಬೀತು ಮಾಡಿದ್ದಾರೆ. ನಾವು ಮೋಸ ಮಾಡಿದ ಜನರಲ್ಲ ಮೋಸ ಹೋದ ಜನ, ನಮ್ಮ ಜನ ಜಾಗೃತರಾಗಿ ಸಂಘಟನೆಯಾಗಬೇಕು ಎಂದರು. ರೇವಣಸಿದ್ದೇಶ್ವರ ಮಠದ ಒಡೆಯರ್‌ಗಳು ಹಾಗೂ ನಾಲ್ಕು ನಿಟ್ಟು ನಲವತ್ತೆಂಟು ಅರಿವಾಣದ ಭಕ್ತರು ಹಾಜರಿದ್ದರು.