ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ:
ಯಾವ ಘನಕಾರ್ಯ ಮಾಡಿದ್ದೇವೆ ಎಂದು ರಾಜ್ಯದ ಜನರ ವೋಟ್ ಕೇಳುತ್ತಿದ್ದೀರಿ? ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಅವರು ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.ಹುನಗುಂದ ಕ್ಷೇತ್ರದ ಗೋರಬಾಳ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಬಲಕುಂದಿ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬರಗಾಲದಿಂದ ತತ್ತರಿಸಿರುವ ಕರ್ನಾಟಕದ ರೈತರ ನೆರವಿಗೆ ಪರಿಹಾರ ಬಿಡುಗಡೆ ಮಾಡದ ನಿಮಗೆ ಮತ ಕೇಳುವ ನೈತಿಕ ಹಕ್ಕೆಲ್ಲಿದೆ ಎಂದು ತರಾಟೆ ಪ್ರಶ್ನಿಸಿದರು.
ರೈತರ ಸಾಲ ಮನ್ನಾ ಮಾಡಿದ್ದೀರಾ? ಅವರ ಆದಾಯ ದುಪ್ಪಟ್ಟಾಗಿದೆಯಾ? ದಿನಬಳಕೆ ವಸ್ತುಗಳ ಬೆಲೆ ಕಡಿಮೆ ಆಗಿದೆಯಾ? ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿದ್ದೀರಾ? ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ₹15 ಲಕ್ಷ ಜಮಾ ಮಾಡಿದ್ದೀರಾ? ಮತ ಕೇಳುವ ಮುನ್ನ ನೀವು ಈ ಪ್ರಶ್ನೆಗಳಿಗೆ ಉತ್ತರ ಕೊಡಬೇಕಲ್ಲವೇ ಎಂದು ಬಿಜೆಪಿ ಮುಖಂಡರನ್ನು ಪ್ರಶ್ನೆ ಹಾಕಿದ್ಧಾರೆ.ಯಾವಾಗಲೂ ಅಭಿವೃದ್ಧಿ ಆಧಾರದ ಮೇಲೆ ರಾಜಕಾರಣ ಮಾಡಬೇಕು. ಬಿಜೆಪಿ ಎಂದಿಗೂ ಅಭಿವೃದ್ಧಿ ಕೆಲಸಗಳ ಮೇಲೆ ರಾಜಕಾರಣ ಮಾಡಿಲ್ಲ. ಅವರಿಗೆ ಸಮಾಜದಲ್ಲಿ ಜಾತಿ ಸಂಘರ್ಷ, ಧರ್ಮ ಸಂಘರ್ಷ ಸೃಷ್ಟಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಿ ಗೊತ್ತೇ ಹೊರತು, ಸರ್ವ ಧರ್ಮಿಯರನ್ನು ಒಟ್ಟಿಗೆ ಕರೆದೊಯ್ಯುವುದು ಗೊಲ್ಲೆ ಇಲ್ಲ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಮಾತನಾಡಿ, ಈ ಚುನಾವಣೆಯಲ್ಲಿ ಸೋಲು ಖಚಿತ ಎಂಬುದು ಮನವರಿಕೆಯಾಗುತ್ತಿದ್ದಂತೆ ಬಿಜೆಪಿ ನಾಯಕರು ದಿನಕ್ಕೊಂದು ಕತೆ ಹೇಳಲು ಆರಂಭಿಸಿದ್ದಾರೆ. ದೇಶದಲ್ಲಿರುವ ಅಗ್ರಗಣ್ಯ ಶ್ರೀಮಂತರು ತಮ್ಮ ಸ್ವಂತ ಆಸ್ತಿಯಿಂದ ಇಡೀ ಭಾರತ ದೇಶವನ್ನು 18 ತಿಂಗಳು ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಅಂಥ ಶ್ರೀಮಂತರ ₹ 14 ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್ ತಟಗಾರ್ ಮಾತನಾಡಿ, ಕೆಲವರು ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಸಾಮರ್ಥ್ಯ ಪ್ರಶ್ನೆ ಮಾಡಿದ್ದಾರೆ. ನಮ್ಮ ಶಾಸಕರ ತಂಟೆಗೆ ಬರಬೇಡಿ, ನಮ್ಮ ಸಹನೆಗೂ ಮಿತಿ ಇದೆ. ಮತ್ತೆ ಮತ್ತೆ ಕೆಣಕುವ ಪ್ರಯತ್ನ ಮಾಡಿದರೆ ನಾವೂ ಸಿದ್ದರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶಾಂತಕುಮಾರ ಸುರಪುರ, ವೆಂಕಟೇಶ್, ಮಲ್ಲನಗೌಡ, ಮಹಾಂತೇಶ ಪಾಟೀಲ ಮತ್ತಿತರ ಮುಖಂಡರು ವೇದಿಕೆಯಲ್ಲಿದ್ದರು.ಬಾಕ್ಸ್
ಹಾಲುಮತ ಸಮಾಜ ನಿರ್ಲಕ್ಷ್ಯಬಿಜೆಪಿ ಹಾಲುಮತ ಸಮಾಜಕ್ಕೆ ಅನ್ಯಾಯ ಮಾಡಿದೆ. ಈ ಸಮಾಜ ಎಚ್ಚೆತ್ತುಕೊಳ್ಳಬೇಕು ಎಂದು ಒಬಿಸಿ ಘಟಕದ ಅಧ್ಯಕ್ಷ ವಿಜಯ ಮಹಾಂತೇಶ ಗದ್ದನಕೇರಿ ಹೇಳಿದರು. ಹಾಲುಮತ ಸಮಾಜದವರು ಬಿಜೆಪಿಗೆ ಮತ ನೀಡಬೇಡಿ ಎಂದು ಶಾಸಕ ಬಸನಗೌಡ ಪಾಟೀಲ ಕರೆ ನೀಡಿದ್ದಾರೆ. ಸಮಾಜದ ಪರವಾಗಿ ಕರೆ ನೀಡಲು ಅವರಿಗೆ ಏನು ಅಧಿಕಾರ ಇದೆ. ಈ ಚುನಾವಣೆಯಲ್ಲಿ ಹಾಲುಮತ ಸಮಾಜದ ಒಬ್ಬ ಮುಖಂಡರಿಗೂ ಬಿಜೆಪಿ ಟಿಕೆಟ್ ಸಿಕ್ಕಿಲ್ಲ. ಈ ಸಮಾಜದ ಬಗ್ಗೆ ಅಷ್ಟೊಂದು ಕಳಕಳಿ ಇದ್ದರೆ ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಅವರಿಗೆ ಯತ್ನಾಳ್ ಟಿಕೆಟ್ ಕೊಡಿಸಬೇಕಿತ್ತು ಎಂದು ಕುಟುಕಿದರು.