ಮುಖ್ಯಮಂತ್ರಿಯಾಗಿ ಹಾನಗಲ್ಲಿಗೆ ಬೊಮ್ಮಾಯಿ ಕೊಡುಗೆಯೇನು?-ಶಾಸಕ ಮಾನೆ

| Published : Mar 29 2024, 12:48 AM IST

ಮುಖ್ಯಮಂತ್ರಿಯಾಗಿ ಹಾನಗಲ್ಲಿಗೆ ಬೊಮ್ಮಾಯಿ ಕೊಡುಗೆಯೇನು?-ಶಾಸಕ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾನಗಲ್ಲಿನ ವರದಾ ನದಿಗೆ ಬಾಳಂಬೀಡ ಬಳಿ ಏತ ನೀರಾವರಿ ಆರಂಭಿಸಲು ಯೋಜನೆಗೆ ಮೊದಲ ತಾಂತ್ರಿಕ ಅನುಮತಿ ನೀಡಿ ಕ್ಯಾಬಿನೆಟ್‌ಗೆ ತಂದವರು ಆಗಿನ ಜಲ ಸಂಪನ್ಮೂಲ ಸಚಿವರೂ ಆಗಿದ್ದ ಈಗಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಎಂಬುದು ಮಾಜಿ ಮುಖ್ಯಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗೊತ್ತಿಲ್ಲವೆ? ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ಹಾನಗಲ್ಲಿನ ವರದಾ ನದಿಗೆ ಬಾಳಂಬೀಡ ಬಳಿ ಏತ ನೀರಾವರಿ ಆರಂಭಿಸಲು ಯೋಜನೆಗೆ ಮೊದಲ ತಾಂತ್ರಿಕ ಅನುಮತಿ ನೀಡಿ ಕ್ಯಾಬಿನೆಟ್‌ಗೆ ತಂದವರು ಆಗಿನ ಜಲ ಸಂಪನ್ಮೂಲ ಸಚಿವರೂ ಆಗಿದ್ದ ಈಗಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಎಂಬುದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗೊತ್ತಿಲ್ಲವೆ ಎಂದು ಪ್ರಶ್ನಿಸಿದ ಶಾಸಕ ಶ್ರೀನಿವಾಸ ಮಾನೆ, ಆಗಿನ ಶಾಸಕರಾದ ಸಿ.ಎಂ. ಉದಾಸಿ ಅನುಮೋದನೆ ದೊರಕಿಸಿದರು. ಮುಖ್ಯಮಂತ್ರಿಯಾಗಿ ಹಾನಗಲ್ಲಿಗೆ ನೀವೇನು ಮಾಡಿದ್ದೀರಿ ಎಂದು ಕಿಡಿಕಾರಿದರು.

ಹಾನಗಲ್ಲ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವಕುಮಾರ ಅವರು ಬಾಳಂಬೀಡ ಏತ ನೀರಾವರಿ ಯೋಜನೆಗೆ ತಾಂತ್ರಿಕ ಅನುಮತಿ ನೀಡಿ ಕ್ಯಾಬಿನೆಟ್‌ಗೆ ತಂದು, ಮಹತ್ವಾಕಾಂಕ್ಷೆಯ ಯೋಜನೆಯ ಜಾರಿಗೆ ಕಾರಣರಾದರು. ಹೀಗಿರುವಾಗ ಬಾಳಂಬೀಡ ನೀರಾವರಿ ಯೋಜನೆ ನಮ್ಮದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಎಂದು ಶಾಸಕ ಶ್ರೀನಿವಾಸ ಮಾನೆ ತಿರುಗೇಟು ನೀಡಿದ್ದಾರೆ.

ಕ್ಯಾಬಿನೆಟ್‌ ವರೆಗೆ ಬಂದಿದ್ದ ಯೋಜನೆಗೆ ಶಾಸಕರಾಗಿದ್ದ ಸಿ.ಎಂ. ಉದಾಸಿ ಅವರು ತಮ್ಮ ಸರ್ಕಾರದಲ್ಲಿ ಅನುಮೋದನೆ ದೊರಕಿಸಿದರು. ಅವರನ್ನು ನೆನಪಿಸಿಕೊಳ್ಳಬೇಕು. ಹಿಂದೆ ರಾಜ್ಯದಲ್ಲಿ ೩ ವರ್ಷದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಅಗತ್ಯ ಅನುದಾನ ನೀಡಲಿಲ್ಲ. ಈಗ ನಮ್ಮ ಕಾಂಗ್ರೆಸ್ ಸರ್ಕಾರ ಯೋಜನೆ ಪೂರ್ಣಗೊಳಿಸಿದ್ದು, ಪ್ರಾಯೋಗಿಕ ಪರೀಕ್ಷೆ ಸಹ ಮಾಡಲಾಗಿದೆ. ಮಳೆಯ ಅಭಾವದಿಂದ ನದಿಯಲ್ಲಿ ನೀರಿಲ್ಲ. ಹಾಗಾಗಿ ಕೆರೆ-ಕಟ್ಟೆಗಳಿಗೆ ಹರಿಸುವುದು ಸಾಧ್ಯವಾಗಿಲ್ಲ. ಭಗವಂತನ ಕೃಪೆಯಿಂದ ಉತ್ತಮ ಮಳೆ ಸುರಿದರೆ ಬರುವ ಜೂನ್ ತಿಂಗಳಿನಲ್ಲಿ ಕೆರೆ-ಕಟ್ಟೆಗಳಿಗೆ ನೀರು ಹರಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ನಾವೇನು ಮಾಡಿಲ್ಲ ಎನ್ನುವುದನ್ನು ಹೇಳಬೇಡಿ. ಮುಖ್ಯಮಂತ್ರಿ ಆಗಿದ್ದ ನೀವೇನು ಮಾಡಿದ್ದೀರಿ ಎನ್ನುವುದನ್ನು ಮೊದಲು ಹೇಳಿ. ನಿಮಗೆ ಮುಖ್ಯಮಂತ್ರಿಯಾಗುವ ಯೋಗ ಒದಗಿ ಬಂದಿತ್ತಲ್ಲವೇ? ಆದರೆ ನಮ್ಮ ಹಾವೇರಿ ಜಿಲ್ಲೆಗೆ ಮಾತ್ರ ಅಭಿವೃದ್ಧಿಯ ಯೋಗ ಏಕೆ ಕೂಡಿ ಬರಲಿಲ್ಲ? ಎನ್ನುವುದನ್ನು ಹೇಳಿ ಎಂದು ಬಸವರಾಜ ಬೊಮ್ಮಾಯಿ ಅವರಿಗೆ ಶ್ರೀನಿವಾಸ ಮಾನೆ ಸವಾಲು ಹಾಕಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ವಿಜಯಕುಮಾರ ದೊಡ್ಡಮನಿ, ಮುಖಂಡರಾದ ರಾಜೇಂದ್ರ ಬಾರ್ಕಿ, ಉಮೇಶ ಗೌಳಿ, ಮಿಯ್ಯಾಜಾನ ಕಂಬಳಿ, ಶಿವಪ್ಪ ಬಾರ್ಕಿ, ಸಂತೋಷ ದುಂಡಣ್ಣನವರ, ರಾಜೇಂದ್ರ ಜಿನ್ನಣ್ಣನವರ, ಗೀತಾ ಪೂಜಾರ, ಅನಿತಾ ಶಿವೂರ, ಬಸವರಾಜ ಚಲವಾದಿ, ನಾಗಯ್ಯ ಹಿರೇಮಠ, ಮಂಜಣ್ಣ ತಡಸದ, ಮಂಜಣ್ಣ ಕಡೂರ, ತಿಪ್ಪಣ್ಣ ಬಾರ್ಕಿ, ರಫೀಕ್ ಉಪ್ಪಣಸಿ, ಗುಡ್ಡಪ್ಪ ಕೆಂಚಣ್ಣನವರ, ಚಂದ್ರು ಮರೆಕ್ಕನವರ, ಈರಣ್ಣ ಹೇರೂರ, ಭರಮಗೌಡ ನಂದಿಹಳ್ಳಿ, ಅಶೋಕ ಮೋರೆ ಈ ಸಂದರ್ಭದಲ್ಲಿ ಇದ್ದರು.