ಸಾರಾಂಶ
ಜ್ಞಾನಾರ್ಜನೆ ತಪಸ್ಸು ಇದ್ದಂತೆ. ಸಮಯ ಪಾಲನೆ ಮಾಡಿ ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಾರೋ ಅವರಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ.
ಭಾಲ್ಕಿ:
ಜ್ಞಾನದ ಹಸಿವು ಇರುವ ವಿದ್ಯಾರ್ಥಿಗಳಿಂದ ಅಸಾಧ್ಯವೂ ಸಾಧ್ಯವಾಗುತ್ತದೆ ಎಂದು ಹಿರೇಮಠ ಸಂಸ್ಥಾನದ ಸಂಸ್ಥಾಪಕ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.ತಾಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನಲ್ಲಿ ಪಿಯು ಪರೀಕ್ಷೆಯಲ್ಲಿ 600 ಅಂಕಗಳಿಗೆ ಕ್ರಮವಾಗಿ 592, 591, 589 ಅಂಕ ಪಡೆದು ರಾಜ್ಯಕ್ಕೆ 7, 8, 10ನೇ ರ್‍ಯಾಂಕ್ ಪಡೆದಿರುವ ರಕ್ಷಿತಾ ಸಂಜುಕುಮಾರ, ರಕ್ಷಿತಾ ಶರಣಬಸವ, ರಕ್ಷಿತಾ ಉಮೇಶಕುಮಾರ ಅವರನ್ನು ಸನ್ಮಾನಿಸಿ ಮಾತನಾಡಿದರು.
ಜ್ಞಾನಾರ್ಜನೆ ತಪಸ್ಸು ಇದ್ದಂತೆ. ಸಮಯ ಪಾಲನೆ ಮಾಡಿ ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಾರೋ ಅವರಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಉಪನ್ಯಾಸಕರ ಗುಣಾತ್ಮಕ ಬೋಧನೆ ಮನನ ಮಾಡಿಕೊಂಡು ಅವರ ಸಲಹೆಯಂತೆ ಅಭ್ಯಾಸ ಮಾಡಿರುವುದರಿಂದ ರಾಜ್ಯಮಟ್ಟದಲ್ಲಿ ಅಮೋಘ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು.ಹಳ್ಳಿ ಮಕ್ಕಳಿಗೂ ಪಟ್ಟಣದ ವಿದ್ಯಾರ್ಥಿಗಳಂತೆ ಉತ್ತಮ ಶಿಕ್ಷಣ, ಸವಲತ್ತು ಸಿಗಬೇಕು ಎಂಬುವದು ಸಂಸ್ಥೆಯ ಮೂಲ ಆಶಯವಾಗಿದೆ. ಉಪನ್ಯಾಸಕರು ನಮ್ಮ ಸಂಸ್ಥೆಯ ಉದ್ದೇಶವನ್ನು ಈಡೇರಿಸಲು ಒಳ್ಳೆಯ ರೀತಿಯಿಂದ ಕಾರ್ಯನಿರ್ವಹಿಸುತ್ತಿರುವುದು ಸಂತಸದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ, ಶೈಕ್ಷಣಿಕ ಮಾರ್ಗದರ್ಶಕ ಶ್ರೀನಿವಾಸರೆಡ್ಡಿ, ರವಿ ಬಿರಾದಾರ, ಲಚಮಾರೆಡ್ಡಿ, ಶಿವಪ್ರಕಾಶ ಕುಂಬಾರ, ಗೋಪಿನಾಥ, ರಾಘವೇಂದ್ರ ಸೇರಿದಂತೆ ಇತರರು ಇದ್ದರು.