ಸಾರಾಂಶ
ಅಖಿಲ ಭಾರತ ವೀರಶೈವ ಮಹಾಸಭಾ ಕೇವಲ ಖಂಡ್ರೆ, ಯಡಿಯೂರಪ್ಪ, ಶಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕಷ್ಟೇ ಸೀಮಿತವಾಗಿದೆ, ಮಹಾಸಭಾದಿಂದ ವೀರಶೈವ ಲಿಂಗಾಯತ ಸಮಾಜಕ್ಕೆ ಯಾವುದೇ ಕೊಡುಗೆ ಇಲ್ಲವೆಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಗುರ ಹೇಳಿಕೆಯನ್ನು ಶಂಭು ಎಸ್. ಉರೇಕೊಂಡಿ ಖಂಡಿಸಿದ್ದಾರೆ.
ದಾವಣಗೆರೆ : ಅಖಿಲ ಭಾರತ ವೀರಶೈವ ಮಹಾಸಭಾ ಕೇವಲ ಖಂಡ್ರೆ, ಯಡಿಯೂರಪ್ಪ, ಶಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕಷ್ಟೇ ಸೀಮಿತವಾಗಿದೆ, ಮಹಾಸಭಾದಿಂದ ವೀರಶೈವ ಲಿಂಗಾಯತ ಸಮಾಜಕ್ಕೆ ಯಾವುದೇ ಕೊಡುಗೆ ಇಲ್ಲವೆಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಗುರ ಹೇಳಿಕೆಯನ್ನು ಅಭಾವೀಪ ತಾಲೂಕು ಅಧ್ಯಕ್ಷ ಶಂಭು ಎಸ್. ಉರೇಕೊಂಡಿ ಖಂಡಿಸಿದ್ದಾರೆ.
ಮಹಾಸಭಾವನ್ನು 120 ವರ್ಷಗಳ ಹಿಂದೆ ಹಾನಗಲ್ ಕುಮಾರಸ್ವಾಮಿಗಳು ಸ್ಥಾಪಿಸಿದ್ದು, ವೀರಶೈವ, ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳನ್ನು ಒಗ್ಗೂಡಿಸಲು ಶ್ರಮಿಸಿದ್ದರು. ಸಮಾಜದ ಶ್ರೇಯೋಭಿವೃದ್ಧಿಗಾಗಿ ಅನೇಕ ಹಿರಿಯರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈಚೆಗೆ ಖಂಡ್ರೆ, ಶಾಮನೂರು ಶಿವಶಂಕರಪ್ಪ ಸಂಘಟನೆಯನ್ನು ಬಲಪಡಿಸಲು ಶ್ರಮಿಸುತ್ತಿದ್ದಾರೆ. ಇಂತಹವರ ಬಗ್ಗೆ ಯತ್ನಾಳ್ ಹಗುರ ಹೇಳಿಕೆಗಳನ್ನು ಖಂಡಿಸುತ್ತೇವೆ ಎಂದಿದ್ದಾರೆ.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯಾವುದೇ ತೊಂದರೆಯಾದರೂ ಮಹಾಸಭಾ ಬೆಂಬಲವಾಗಿ ನಿಲ್ಲುತ್ತಿದೆ. ಶಾಮನೂರು ಶಿವಶಂಕರಪ್ಪನವರು ಸಮಾಜದ ವಿಷಯ ಬಂದಾಗ ತಮ್ಮ ಪಕ್ಷದ್ದೇ ಸರ್ಕಾರವಿದ್ದರೂ ಲೆಕ್ಕಿಸದೇ, ಸಮಾಜವು ಒಡೆದು ಹೋಗುವುದನ್ನು ಕಟುವಾಗಿ ವಿರೋಧಿಸಿ, ಸಮಾಜದ ಬಗ್ಗೆ ತಮ್ಮ ಬದ್ಧತೆ ತೋರಿಸಿದ್ದರು. ಅಧ್ಯಕ್ಷರು ಕೈಗೊಳ್ಳುವ ಎಲ್ಲ ನಿರ್ಧಾರಗಳಿಗೆ ಸಮಾಜದ ನಾಯಕರಾದ ಯಡಿಯೂರಪ್ಪ, ಈಶ್ವರ ಖಂಡ್ರೆ ಸೇರಿದಂತೆ ಅನೇಕರು ಬೇಷರತ್ ಬೆಂಬಲ ನೀಡಿ, ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಶಾಮನೂರು ಶಿವಶಂಕರಪ್ಪ ನೇತೃತ್ವದ ಮಹಾಸಭಾ ಎಷ್ಟೆಲ್ಲಾ ಕೆಲಸ ಮಾಡುತ್ತಿದ್ದಾರೆಂಬುದು ಇಡೀ ಸಮಾಜಕ್ಕೆ ಗೊತ್ತಿದೆ. ಅದೇ ರೀತಿ ಯತ್ನಾಳ್‌ರಿಗೂ ಎಲ್ಲ ಗೊತ್ತಿದ್ದರೂ ಲಘುವಾಗಿ ಮಾತನಾಡಿದ್ದಾರೆ. ವೀರಶೈವ ಲಿಂಗಾಯತ ಸಮಾಜದ ಒಳಿತಿಗಾಗಿ ಯತ್ನಾಳ್ ಏನು ಕೆಲಸ ಮಾಡಿದ್ದಾರೆ? ಸಮಾಜಕ್ಕೆ ಯತ್ನಾಳ್ ಕೊಡುಗೆ ಏನೆಂಬುದನ್ನು ಮೊದಲು ತಿಳಿಸಲಿ. ತಮ್ಮ ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಪಂಚಮಸಾಲಿ ಹೋರಾಟದ ಅಂತಿಮ ಹಂತದಲ್ಲಿದ್ದಾಗ ಅಮಿತ್ ಶಾ ಸೂಚನೆ ಮೇರೆಗೆ ಚುನಾವಣೆಯಲ್ಲಿ ಬಿಜೆಪಿಗೆ ತೊಡಕಾಗಬಾರದೆಂದು ಹೋರಾಟದ ದಿಕ್ಕು ತಪ್ಪಿಸಿದ ಸ್ವಾರ್ಥಿ ಯತ್ನಾಳ್. ಇನ್ನೊಮ್ಮೆ ಇಂತಹ ವ್ಯಕ್ತಿ ನಮ್ಮ ಸಮಾಜದ ಪ್ರಶ್ನಾತೀತ, ಮುತ್ಸದ್ದಿ ನಾಯಕ ಶಾಮನೂರು ಶಿವಶಂಕರಪ್ಪ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಇರಲಿ ಎಂದು ತಾಕೀತು ಮಾಡಿದ್ದಾರೆ.