ದ.ಕ.ಕ್ಕೆ ಬಿಜೆಪಿ ಎಂಪಿಗಳ ಕೊಡುಗೆ ಏನು: ರಮಾನಾಥ ರೈ ಸವಾಲು

| Published : Apr 14 2024, 01:46 AM IST

ದ.ಕ.ಕ್ಕೆ ಬಿಜೆಪಿ ಎಂಪಿಗಳ ಕೊಡುಗೆ ಏನು: ರಮಾನಾಥ ರೈ ಸವಾಲು
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಎಂಪಿಗಳು ಏನು ಮಾಡಿದ್ದಾರೆ? ಕರಾವಳಿಯ ಅಸ್ಮಿತೆಯ ಬ್ಯಾಂಕ್‌ಗಳು ಹೇಗೆ ಮಾಯವಾದವು? ಸರ್ಕಾರಿ ಒಡೆತನದ ಏರ್‌ಪೋರ್ಟ್‌ ಖಾಸಗಿ ಕೈಗೆ ಕೊಟ್ಟವರು ಯಾರು? ಇದೇ ಬಿಜೆಪಿಯ ಸಾಧನೆ. ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಮಾಡಿದರೇ ವಿನಾ ಜಿಲ್ಲೆಯ ಅಭಿವೃದ್ಧಿಯ ಚಿಂತನೆ ಮಾಡಿಲ್ಲ ಎಂದು ರಮಾನಾಥ ರೈ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಎಂಪಿಗಳು ಅಧಿಕಾರಕ್ಕೆ ಬಂದ ಕಳೆದ 33 ವರ್ಷಗಳಲ್ಲಿ ಯಾವ ಸಾಧನೆ ಮಾಡಿದ್ದಾರೆ? ಹೇಳಿಕೊಳ್ಳುವ ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ? ಜಿಲ್ಲೆಗೆ ಅವರ ಕೊಡುಗೆ ಏನು? ಈ ಕುರಿತು ಬಿಜೆಪಿ ಉತ್ತರ ನೀಡಲಿ ಎಂದು ಮಾಜಿ ಸಚಿವ, ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಬಿ.ರಮಾನಾಥ ರೈ ಸವಾಲು ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್‌ ಏನು ಮಾಡಿದೆ ಎಂದು ಬಿಜೆಪಿಯವರು ಕೇಳುತ್ತಾರೆ. ದ.ಕ. ಜಿಲ್ಲೆಗೆ ಅಭಿವೃದ್ಧಿ ಆಗಿರುವ ಜಿಲ್ಲೆ ಎನ್ನುವ ಹೆಸರು ಬಂದಿದ್ದರೆ ಅದಕ್ಕೆ ಕಾರಣ ಕಾಂಗ್ರೆಸ್‌. ಜಿಲ್ಲೆಯಲ್ಲಿ ರಾ.ಹೆದ್ದಾರಿಗಳು, ರೈಲ್ವೆ, ಅಸಂಖ್ಯಾತ ಸೇತುವೆಗಳು, ಬಂದರು, ಏರ್‌ಪೋರ್ಟ್‌, ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳನ್ನು ತಂದು ಮೂಲಸೌಕರ್ಯಗಳನ್ನು ಮಾಡಿದ್ದು ಕಾಂಗ್ರೆಸ್‌ ಸಂಸದರು. ಈಗ ಶ್ರೀನಿವಾಸ ಮಲ್ಯರ ಹೆಸರನ್ನು ಬಿಜೆಪಿಯವರು ಹೇಳುತ್ತಾರೆ. ಮಲ್ಯರು ಎಂಪಿ ಆಗಿದ್ದು ಕಾಂಗ್ರೆಸ್‌ನಿಂದ. ಕಾಂಗ್ರೆಸ್‌ ಎಂಪಿಗಳು ಇಷ್ಟೆಲ್ಲ ಮಾಡಿರುವಾಗ, ಅದರ ನಂತರ ಬಂದ ಬಿಜೆಪಿ ಎಂಪಿಗಳು ಯಾವ ಸಾಧನೆ ಮಾಡಿದ್ದಾರೆ ಎಂಬುದನ್ನು ಜನರ ಮುಂದಿಡಬೇಕು, ಜಿಲ್ಲೆಯ ಜನರಿಗೆ ಕಾಂಗ್ರೆಸ್‌ ಸಾಧನೆಗಳು, ಬಿಜೆಪಿ ಸಾಧನೆಗಳು ಗೊತ್ತಾಗಲಿ ಎಂದರು.

ಬಿಜೆಪಿ ಎಂಪಿಗಳು ಏನು ಮಾಡಿದ್ದಾರೆ? ಕರಾವಳಿಯ ಅಸ್ಮಿತೆಯ ಬ್ಯಾಂಕ್‌ಗಳು ಹೇಗೆ ಮಾಯವಾದವು? ಸರ್ಕಾರಿ ಒಡೆತನದ ಏರ್‌ಪೋರ್ಟ್‌ ಖಾಸಗಿ ಕೈಗೆ ಕೊಟ್ಟವರು ಯಾರು? ಇದೇ ಬಿಜೆಪಿಯ ಸಾಧನೆ. ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಮಾಡಿದರೇ ವಿನಾ ಜಿಲ್ಲೆಯ ಅಭಿವೃದ್ಧಿಯ ಚಿಂತನೆ ಮಾಡಿಲ್ಲ ಎಂದು ರಮಾನಾಥ ರೈ ಆರೋಪಿಸಿದರು.

ಚುನಾವಣೆ ಬರುವಾಗ ಅಭಿವೃದ್ಧಿ ಕೆಲಸಗಳ ಚರ್ಚೆ ಆಗಬೇಕೇ ಹೊರತು ಭಾವನಾತ್ಮಕ ವಿಚಾರಗಳಿಗೆ ಜನ ಮರುಳಾಗಬಾರದು. ಜಿಲ್ಲೆಗೆ ಬೇಕಾಗಿರುವುದು ಅಭಿವೃದ್ಧಿಯೇ ಹೊರತು ಸುಳ್ಳು ಭಾಷಣಗಳು, ಸುಳ್ಳು ಭರವಸೆಗಳಲ್ಲ ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಮುಖಂಡರಾದ ಇಬ್ರಾಹಿಂ ಕೋಡಿಜಾಲ್‌, ಶಶಿಧರ ಹೆಗ್ಡೆ, ಶುಭೋದಯ ಆಳ್ವ, ಶಾಲೆಟ್‌ ಪಿಂಟೊ, ನವೀನ್‌ ಡಿಸೋಜ, ಅಶ್ರಫ್‌, ಎ.ಸಿ. ವಿನಯರಾಜ್‌, ಡಿ.ಕೆ. ಅಶೋಕ್‌, ಹರಿನಾಥ್‌ ಬೋಂದೆಲ್‌ ಇದ್ದರು.