What is the point if the Madakari Theme Park remains merely a subject of discussion?
-ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ತೀವ್ರ ಅಸಮಧಾನ । -ಹುಲ್ಲೂರು ಜೋಯಿಸರ ಸ್ಮಾರಕ ಉಪನ್ಯಾಸ ಮಾಲೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ಸಂಸ್ಥಾನವನ್ನಾಳಿದ ರಾಜವೀರ ಮದಕರಿನಾಯಕ ಥೀಂ ಪಾರ್ಕ್ ಬಗ್ಗೆ ಕೇವಲ ಚರ್ಚೆ, ಪ್ರಸ್ತಾಪವಾದರೆ ಸಾಲದು. ಅನುಷ್ಠಾನಕ್ಕೆ ಬರಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಹೇಳಿದರು.ರೇಣುಕಾ ಪ್ರಕಾಶನ, ಚಿತ್ರದುರ್ಗ ಇತಿಹಾಸ ಕೂಟ, ಚಿತ್ರದುರ್ಗ ಸಂಶೋಧನಾ ತಂಡ, ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಸಹಯೋಗದೊಂದಿಗೆ ಐಎಂಎ ಹಾಲ್ನಲ್ಲಿ ಭಾನುವಾರ ಹುಲ್ಲೂರು ಶ್ರೀನಿವಾಸ್ ಜೋಯಿಸರ ಸ್ಮಾರಕ ಉಪನ್ಯಾಸ ಮಾಲೆ-2 ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಾಜ್ಯೋತ್ಸವ ಹಾಗೂ ಎಂ.ಎಸ್. ಪುಟ್ಟಣ್ಣ ಜೀವನ ಸಾಧನೆ ಕುರಿತ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೋಟೆ ಸ್ಮಾರಕ ರಕ್ಷಣೆಯಾಗಬೇಕಾದರೆ ನಿರಂತರ ಪ್ರಯತ್ನವಿರಬೇಕು. ಈ ಸಂಬಂಧದ ಯೋಜನೆಗಳ ಜಾರಿಗೆ ಎಲ್ಲರೂ ಶ್ರಮಿಸಬೇಕು. ಸರ್ಕಾರಗಳ ಮೇಲೆ ಒತ್ತಡ ಹೇರಬೇಕೆಂದರು.
ಚಿತ್ರದುರ್ಗದ ಇತಿಹಾಸಕ್ಕಾಗಿ ಶ್ರಮಿಸಿದ ಸಾಹಿತಿಗಳು, ಸಂಶೋಧಕರು, ಬರಹಗಾರರನ್ನು ಸ್ಮರಿಸಿಕೊಂಡಾಗ ಮಾತ್ರ ಇತಿಹಾಸ ಶಾಶ್ವತವಾಗಿ ಉಳಿಯಲು ಸಾಧ್ಯ. ಹುಲ್ಲೂರು ಶ್ರೀನಿವಾಸ ಜೋಯಿಸರು, ಎಂ.ಎಸ್. ಪುಟ್ಟಣ್ಣ ಅವರು ಚಿತ್ರದುರ್ಗದ ಇತಿಹಾಸಕ್ಕಾಗಿ ಶ್ರಮಿಸಿದ್ದಾರೆ. ಆಧುನಿಕ ಮೊಬೈಲ್, ಎಐ ಯುಗದಲ್ಲಿದ್ದೇವೆ. ನಮ್ಮ ಸಂಸ್ಕೃತಿ ಮೌಲ್ಯ ಉಳಿಯಬೇಕಾದರೆ ಇತಿಹಾಸವನ್ನು ಮೆಲುಕು ಹಾಕಬೇಕು ಎಂದರು.ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾ ರಂಗ ಸೇರಿದಂತೆ ಎಲ್ಲಾ ಕ್ಷೇತ್ರಗಳು ಕಲುಷಿತಗೊಂಡಿವೆ. ಅದರಂತೆ ಜನರ ಬದುಕು ಕೂಡ ಬದಲಾವಣೆಯಾಗಿದೆ. ರಾಜನೀತಿಯನ್ವಯ ಪಾಳೆಯಗಾರರು ಯುದ್ಧಗಳನ್ನು ಮಾಡುತ್ತಿದ್ದರು. ಎಂ.ಎಸ್. ಪುಟ್ಟಣ್ಣ, ಹುಲ್ಲೂರು ಶ್ರೀನಿವಾಸ ಜೋಯಿಸರು ಪ್ರಾಮಾಣಿಕವಾಗಿ ಬದುಕಿದವರು ಎಂದು ಸ್ಮರಿಸಿದರು.
ಸಂಶೋಧನೆಗೆ ಮುಡುಪು:ತೆಲಗಾವಿಸಂಶೋಧಕ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಡಾ. ಲಕ್ಷ್ಮಣ ತೆಲಗಾವಿ ಮಾತನಾಡಿ, ಹೊಸಗನ್ನಡ ಗದ್ಯದ ಕೃಷಿ ಮಾಡಿದ ಎಂ.ಎಸ್.ಪುಟ್ಟಣ್ಣನವರು ಕೃತಿ ರಚಿಸಿ 102 ವರ್ಷಗಳಾಗಿದೆ. ಹುಲ್ಲೂರು ಶ್ರೀನಿವಾಸ ಜೋಯಿಸರು ತಮ್ಮ ಜೀವಿತಾವಧಿಯ ಅರ್ಧ ವಯಸ್ಸನ್ನು ಚಿತ್ರದುರ್ಗದ ಸಂಶೋಧನೆಗೆ ಮುಡುಪಿಟ್ಟವರು. ಎಂ.ಎಸ್.ಪುಟ್ಟಣ್ಣ 1897 ರಲ್ಲಿ ಚಿತ್ರದುರ್ಗದಲ್ಲಿ ಹವಲ್ದಾರ್ ಆಗಿದ್ದವರು. ಕೋಟೆಯಲ್ಲಿ ಸಾಕಷ್ಟು ಓಡಾಡಿ ಇಲ್ಲಿನ ಸ್ಮಾರಕಗಳಿಂದ ಪ್ರೇರಣೆ ಪಡೆದು ಚಾರಿತ್ರಿಕ ಕೃತಿಗಳ ಸರಣಿ ಆರಂಭಿಸಿದರು ಎಂದರು.
1919ರ ಹಿಂದೆ ಚಿತ್ರದುರ್ಗಕ್ಕೆ ಪುಟ್ಟಣ್ಣನವರ ಪ್ರವೇಶವಾಗಿತ್ತು. 1923ರಲ್ಲಿ ಎಂ.ಎಸ್.ಪುಟ್ಟಣ್ಣ ಪಾಳೆಯಗಾರರ ಐದು ಉಪನ್ಯಾಸಗಳು ಪುಸ್ತಕ ಹೊರ ತಂದರು. ಹುಲ್ಲೂರು ಶ್ರೀನಿವಾಸ ಜೋಯಿಸರು ಹಾಗೂ ಎಂ.ಎಸ್.ಪುಟ್ಟಣ್ಣನವರು ಹಾಕಿದ ಅಡಿಪಾಯದ ಮೇಲೆ ಹೊಸ ಸಂಶೋಧನೆಗಳು ನಡೆದಿವೆ. ಇವರಿಬ್ಬರು ಕನ್ನಡದ ಕಟ್ಟಾಳುಗಳಾಗಿದ್ದರು ಎಂದರು.ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ. ಗೋಪಾಲಸ್ವಾಮಿ ನಾಯಕ ಮಾತನಾಡಿ, ಚಿತ್ರದುರ್ಗದ ಇತಿಹಾಸಕ್ಕೆ ದುಡಿದವರನ್ನು ವರ್ಷಕ್ಕೆ ಎರಡು ಬಾರಿ ಸ್ಮರಿಸುವುದಕ್ಕಾಗಿ ಚಿತ್ರದುರ್ಗ ಇತಿಹಾಸ ಕೂಟ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮತ್ತಿತಿಮ್ಮಣ್ಣನಾಯಕ ಚಿತ್ರದುರ್ಗದ ಪ್ರಥಮ ರಾಜ. ಕೋಟೆ ಮುಂಭಾಗ ಅವರ ಸರ್ಕಲ್ ನಿರ್ಮಾಣ ಮಾಡುವಾಗ ಅನೇಕ ಅಡೆತಡೆಗಳನ್ನು ಎದುರಿಸಬೇಕಾಯಿತು ಎಂದರು.
ಸಂಶೋಧಕರಿಂದ ಇತಿಹಾಸ:ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಮಾಜಿ ಅಧ್ಯಕ್ಷ ಬಿ. ಕಾಂತರಾಜು ಮಾತನಾಡಿ, ಬರಹಗಾರರು, ಸಾಹಿತಿಗಳು, ಸಂಶೋಧಕರುಗಳಿಂದ ಚಿತ್ರದುರ್ಗದ ಇತಿಹಾಸ ಉಳಿದಿದೆ. ಹುಲ್ಲೂರು ಶ್ರೀನಿವಾಸ ಜೋಯಿಸರು, ಎಂ.ಎಸ್.ಪುಟ್ಟಣ್ಣ, ಬಿ.ಎಲ್.ವೇಣು, ಡಾ.ಲಕ್ಷ್ಮಣ ತೆಲಗಾವಿಯವರಂತ ಇನ್ನು ಅನೇಕರು ಬದ್ಧತೆಯಿಂದ ಕೆಲಸ ಮಾಡಿದ್ದಾರೆ. ಅಂತಹ ಬದ್ಧತೆಯಿರುವ ರಾಜಕಾರಣಿ ಚಿತ್ರದುರ್ಗಕ್ಕೆ ಸಿಗಲಿಲ್ಲವೆನ್ನುವ ಕೊರಗು ಇದೆ ಎಂದರು.
ರಾಜಕಾರಣಿಗಳು, ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯಿದ್ದರೆ ಮಾತ್ರ ಯಾವುದೇ ಒಂದು ಕ್ಷೇತ್ರ ಅಭಿವೃದ್ಧಿಯಾಗಲು ಸಾಧ್ಯ. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿರವರ ಅಭಿವೃದ್ಧಿಯನ್ನು ನೋಡಿ ಸರ್ಕಾರ ಅವರಿಗೆ ಸಚಿವ ಸ್ಥಾನ ನೀಡಿದೆಯೆಂದರೆ ತಪ್ಪಲ್ಲ. ಊರನ್ನು ಉದ್ಧಾರ ಮಾಡಬೇಕೆಂಬ ಮನಸ್ಸು ಜನಪ್ರತಿನಿಧಿಗಳಲ್ಲಿರಬೇಕೆಂದರು.ಚಳ್ಳಕೆರೆಗಷ್ಟೆ ಸೀಮಿತ ಬೇಡ:
ಇತಿಹಾಸಕಾರರು, ಸಂಶೋಧಕರು, ಬರಹಗಾರರಿಗೆ ಸರ್ಕಾರ ನೆರವಿಗೆ ಬರಬೇಕು. ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿರವರು ಚಳ್ಳಕೆರೆಗಷ್ಟೆ ಸೀಮಿತವಾಗಬಾರದು. ಚಿತ್ರದುರ್ಗ ಅಭಿವೃದ್ಧಿ ಜೊತೆಗೆ ಕೋಟೆಗೆ ಸಿಗಬೇಕಾದ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ವಿನಂತಿಸಿದರು.ಇತಿಹಾಸ ಪ್ರಾಧ್ಯಾಪಕ ಡಾ.ಎನ್.ಎಸ್.ಮಹಂತೇಶ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಡಾ.ಕೆ.ಎಸ್.ಮುಕುಂದರಾವ್, ರೇಣುಕಾ ಪ್ರಕಾಶನದ ಗೌರವಾಧ್ಯಕ್ಷೆ ವೈ.ಗುಣವತಿ ಮಹಂತೇಶ್ ಇದ್ದರು.ಪೋಟೋ
ಹುಲ್ಲೂರು ಶ್ರೀನಿವಾಸ ಜೋಯಿಸರ ಸ್ಮಾರಕ ಉಪನ್ಯಾಸ ಮಾಲೆ ವತಿಯಿಂದ ಆಯೋಜಿಸಿದ್ದ ಎಂ.ಎಸ್.ಪುಟ್ಟಣ್ಣ ಜೀವನ-ಸಾಧನೆ ಕುರಿತ ಒಂದು ದಿನದ ವಿಚಾರ ಸಂಕಿರಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಉದ್ಘಾಟಿಸಿದರು.---------ಫೋಟೋ: 15 ಸಿಟಿಡಿ1