ಮಡಿಕೇರಿ: ದೇಶದಲ್ಲಿ ಪ್ರತಿಯೊಬ್ಬರೂ ಸಂವಿಧಾನವನ್ನು ಒಪ್ಪಿ ಬದುಕಬೇಕು. ಸಂಘಟನೆ ನೋಂದಣಿ ಮಾಡಿಕೊಳ್ಳಲು ಯಾರಿಗೆ ಏನು ಅಪಮಾನ ಅಥವಾ ಸಮಸ್ಯೆ? ಎಂದು ಕೊಡಗು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಪ್ರಶ್ನಿಸಿದರು.ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರಿ ಮೈದಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲು ಸರ್ಕಾರದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುವ ಸಂಬಂಧ ಗೃಹ ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ನೋಂದಾಯಿತ ಸಂಸ್ಥೆಗಳಿಗೆ ಸಾರ್ವಜನಿಕ ಕಾರ್ಯಕ್ರಮ ನಡೆಸಲು ಅವಕಾಶವಿದೆ. ಆದರೆ ನೋಂದಾಯಿತವಲ್ಲದ ಸಂಸ್ಥೆಗಳು ಅನುಮತಿ ಇಲ್ಲದೆ ಕಾರ್ಯಕ್ರಮ ನಡೆಸಿದರೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಹೇಗೆ ? ಸಾಮೂಹಿವಾಗಿ ಒಗ್ಗೂಡಿ ಸಾರ್ವಜನಿಕ ಕಾರ್ಯಕ್ರಮ ಮಾಡುವಾಗ ಸರ್ಕಾರದ ಒಪ್ಪಿಗೆ ಪಡೆಯುವುದು ಕಡ್ಡಾಯ. ಹಿಂದೆ ಕೆಲವು ಅನಪೇಕ್ಷಿತ ಘಟನೆಗಳು ನಡೆದಿರುವುದರಿಂದ ಸರಿ ದಾರಿಯಲ್ಲಿ ಬನ್ನಿ ಎಂದು ಕರೆಯುತ್ತಿದ್ದೇವೆ ಎಂದರು.ಧ್ವಜಾರೋಹಣ ಮತ್ತು ಉಸ್ತುವಾರಿಯಿಂದ ವಿನಾಯಿತಿ ಕೋರಿದ ಕುರಿತು ಸಚಿವ ಜಮೀರ್ ಅಹಮ್ಮದ್ ಅವರ ಹೆಸರಿನಲ್ಲಿ ಬಂದ ಹೇಳಿಕೆಗಳನ್ನು ತಳ್ಳಿ ಹಾಕಿದರು. ನಾನು ಸದನದಲ್ಲೇ ಇದ್ದೆ, ಅಂತಹ ಯಾವುದೇ ಹೇಳಿಕೆ ನನ್ನ ಗಮನಕ್ಕೆ ಬಂದಿಲ್ಲ. ಅವರು ಸಿಎಂ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ರಾಜ್ಯದಲ್ಲಿ 31 ಜಿಲ್ಲೆಗಳಿದ್ದು, 34 ಜನ ಸಚಿವರಿದ್ದೇವೆ. ಇನ್ನೂ 3 ಜಿಲ್ಲೆಗಳ ಕೊರತೆ ಇದೆ. ಜಿಲ್ಲೆಗಳ ಹಂಚಿಕೆ ವೇಳೆ ಜಮೀರ್ ಅವರು ಸ್ಥಳದಲ್ಲಿ ಇರಲಿಲ್ಲ ಎಂದರು.
ಗುಟ್ಕಾ ನಿಷೇಧದಿಂದ ಸರ್ಕಾರ ಅಡಿಕೆ ಬೆಳೆಗಾರರಿಗೆ ವಂಚಿಸುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಡಿಕೆ ಬೆಳೆಗಾರರ ಸಂಘವೇ ಸ್ಪಷ್ಟನೆ ನೀಡಿದೆ. ಬಿಜೆಪಿಗೆ ಆ ಉತ್ತರವೇ ಸಾಕು. ರಾಜ್ಯದಿಂದ ಹೆಚ್ಚು ಸಂಸದರನ್ನು ಹೊಂದಿರುವ ಬಿಜೆಪಿ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಮತ್ತು ಪಾಲಿನ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಇರುವೆ ಹೋದದ್ದಕ್ಕೆ ಮಾತನಾಡುವವರು, ಆನೆ ಹೋದದ್ದಕ್ಕೆ ಯಾಕೆ ಮೌನವಾಗಿದ್ದಾರೆ? ಅವರು ಕನ್ನಡಿಗರ ಸ್ವಾಭಿಮಾನ ಎತ್ತಿ ಹಿಡಿಯುವಂತೆ ಹೇಳಿದರು.ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಒಕ್ಕೂಟ ವ್ಯವಸ್ಥೆಯ ಜವಾಬ್ದಾರಿಯನ್ನು ನೆನಪಿಸಿದ ಅವರು, ನ್ಯಾಯಾಧಿಕರಣದ ಆದೇಶಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ಇದರ ನಡುವೆ ರಾಜ್ಯ ಸರ್ಕಾರ ಮತ್ತು ತಮಿಳುನಾಡು ಎರಡೂ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಸೋಮವಾರ ವಿಚಾರಣೆಗೆ ಬರಲಿದೆ. ಮೇಕೆದಾಟು ಯೋಜನೆಗೆ ಇದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿವೆ. ವರ್ಷಕ್ಕೆ 500ರಿಂದ 600 ಟಿಎಂಸಿ ನೀರು ಸಮುದ್ರಕ್ಕೆ ಹರಿದು ಪೋಲಾಗುವುದನ್ನು ತಡೆಯಲು ಮೇಕೆದಾಟು ಯೋಜನೆಯೇ ಶಾಶ್ವತ ಪರಿಹಾರ. ಕೆಳಗಿನ ರಾಜ್ಯದೊಂದಿಗೆ ಸೌಹಾರ್ದಯುತವಾಗಿ ಹಾಗೂ ಜಾಣ್ಮೆಯಿಂದ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಹೇಳಿದರು.