ಸಾರಾಂಶ
ಬ್ರಹ್ಮಾವರ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಭೆಗಳಲ್ಲಿ ಭಾಗವಹಿಸಿ ಚುನಾವಣಾ ಪ್ರಚಾರ ನಡೆಸಿದರು.
ಈ ವೇಳೆ ಮಾತನಾಡಿದ ಅವರು ಹಿಂದಿನ ಸಂಸದರಿಗೆ 10 ವರ್ಷಗಳ ಕಾಲವನ್ನು ನೀಡಿದರೆ ನನಗೆ ಸಿಕ್ಕಿದ್ದು ಕೇವಲ 2 ವರ್ಷಗಳ ಅವಧಿ. ಈ ನಾನು ಅನುಮೋದನೆ ಪಡೆದ ಅನೇಕ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಹಿಂದಿನ ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ. ಕಳೆದ 10 ವರ್ಷಗಳಿಂದ ಕ್ಷೇತ್ರದಲ್ಲಿ ಯಾವುದೇ ರೀತಿಯ ಅಭಿವೃದ್ದಿಯಾಗದೇ ನಾವು 20 ವರ್ಷ ಹಿಂದೆ ಹೋಗಿದ್ದೇವೆ ಎಂದರು.
ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು, ಆದರೆ ಒಂದೇ ಒಂದು ಉದ್ಯೋಗ ನೀಡಿಲ್ಲ. ಇದ್ದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿರುವುದರಿಂದ ಇದ್ದ ಉದ್ಯೋಗಾವಕಾಶಗಳೂ ಕಳೆದಿದ್ದಾರೆ. ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರು ಸಂಸತ್ತಿನಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಒಂದು ದಿನವೂ ಬಾಯಿತೆರೆದಿಲ್ಲ. ಅಂತಹವರು ನಮ್ಮ ಸಂಸದರಾದರೆ ಎನು ಪ್ರಯೋಜನ ? ಎಂದವರು ಪ್ರಶ್ನಿಸಿದರು.
ಸಂಸತ್ತಿಗೆ ಹೋಗಿ ಕೂತು ಬರುವವನು ಸದಸ್ಯ ಹೊರತು ಸಂಸದನಲ್ಲ, ನಾನು ಸಂಸದನಾದರೆ ಮುಂದೆ ಕ್ಷೇತ್ರದಲ್ಲಿ ಪರಿಸರ ಸ್ನೇಹಿ ಪ್ರವಾಸಿ ವ್ಯವಸ್ಥೆ, ಪರಿಸರ ಸ್ನೇಹಿ ಉದ್ಯಮಗಳನ್ನು ತರುವುದರ ಮೂಲಕ ಇಲ್ಲಿನ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡಲಿದ್ದೇನೆ. ಮೀನುಗಾರರ ಅಭಿವೃದ್ಧಿಗೆ ಪ್ರತ್ಯೇಕ ಯೋಜನೆ ರೂಪಿಸಬೇಕಾಗಿದೆ. ಎಂದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬಗಳಿಗೆ ಅನುಕೂಲವಾಗುತ್ತಿದೆ. ಕಾಂಗ್ರೆಸ್ ನ ನ್ಯಾಯ್ ಗ್ಯಾರಂಟಿಯಲ್ಲಿ ಜಾತಿ ಗಣತಿಗೆ ಬಗ್ಗೆ ಭರವಸೆ ನೀಡಿದ್ದು ಈ ಮೂಲಕ ಯುವಜನರಿಗೆ, ವಿದ್ಯಾರ್ಥಿಗಳಿಗೆ ಮೀಸಲಾತಿಯನ್ನು ಪಡೆಯಲು ಸಹಾಯಕವಾಗುತ್ತದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ಮುಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ನೀಡುವ ಗ್ಯಾರಂಟಿ ಯೋಜನೆಗಳನ್ನು ಮನದಲ್ಲಿಟ್ಟುಕೊಂಡು ಮತ ಚಲಾಯಿಸಿ ಎಂದರು.
ಕಾಂಗ್ರೆಸ್ ನಾಯಕರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ವೆರೋನಿಕಾ ಕರ್ನೆಲಿಯೋ, ಪ್ರಖ್ಯಾತ್ ಶೆಟ್ಟಿ, ದಿನಕರ್ ಹೆರೂರು, ಮೈರ್ಮಾಡಿ ಸುಧಾಕರ ಶೆಟ್ಟಿ, ಭುಜಂಗ ಶೆಟ್ಟಿ, ಜಯಾನಂದ, ನಿತ್ಯಾನಂದ ಶೆಟ್ಟಿ, ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಡಾ. ಸುನೀತಾ ಶೆಟ್ಟಿ ಹಾಗೂ ಇತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು