ಸಾರಾಂಶ
ಕನ್ನಡಪ್ರಭ ವಾರ್ತೆ ಚೇಳೂರು
ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸರ್ಕಾರ ವಸತಿ ನಿಲಯಗಳನ್ನು ಮಂಜೂರು ಮಾಡುತ್ತದೆ. ಆದರೆ, ಮಂಜೂರಾದ ನಿಲಯಗಳಿಗೆ ಸೌಲಭ್ಯಗಳ ಕೊರತೆ ದೊಡ್ಡ ಮಟ್ಟದಲ್ಲಿದೆ. ಕೆಲವು ಹಾಸ್ಟೆಲ್‌ಗಳಿಗೆ ತೆರಳಲು ದಾರಿ ಸಹ ಇರುವುದಿಲ್ಲ.ಇದಕ್ಕೊಂದು ತಾಜಾ ಉದಾಹರಣೆ ಚೇಳೂರು ತಾಲೂಕಿನ ಸೇರಿದ ಚೀಲಕಲನೇರ್ಪು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಟಿ ಗೊಲ್ಲಹಳ್ಳಿ ಗ್ರಾಮದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ. ಇಲ್ಲಿ ಸುಮಾರು 45 ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಆದರೆ ಹಾಸ್ಟೆಲ್‌ಗೆ ಹೋಗಿಬರಲು ದಾರಿಯೇ ಇಲ್ಲದೆ ನಿತ್ಯವೂ ಹರಸಾಹಸ ಮಾಡುವಂತಾಗಿದೆ.
ಹಾಸ್ಟೆಲ್‌ಗೆ ದಾರಿಯೇ ಇಲ್ಲನಿಲಯಕ್ಕೆ ಸೂಕ್ತ ದಾರಿಯೇ ಇಲ್ಲದ್ದರಿಂದ 45 ವಿದ್ಯಾರ್ಥಿಗಳು ನಿತ್ಯ ಗೋಳು ಅನುಭವಿಸುತ್ತಿದ್ದಾರೆ. ಗ್ರಾಮದ ಹೊರವಲಯದಲ್ಲಿರುವ ಈ ವಸತಿ ನಿಲಯಕ್ಕೆ ವಿದ್ಯಾರ್ಥಿಗಳು ಬೇಸಿಗೆ ಕಲ್ಲು ಮಣ್ಣಿನ ದಾರಿಯಲ್ಲಿ ಸಾಗಿದರೆ, ಮಳೆಗಾಲದಲ್ಲಿ ಕೆಸರುಗದ್ದೆಯಲ್ಲಿ ಹೆಜ್ಜೆಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಸ್ಟೆಲ್‌ಗೆ ತೆರಳುವ ರಸ್ತೆ ಜಾಗ ಅತಿಕ್ರಮಣವೇ ಇದಕ್ಕೆ ಕಾರಣ ಎನ್ನಲಾಗಿದೆ.
ಟಿ ಗೋಲ್ಲಹಳ್ಳಿ ಗ್ರಾಮದ ಹೋರವಲಯದ ವಿದ್ಯಾರ್ಥಿ ನಿಲಯಕ್ಕೆ ಹೋಗುವ ಹಾಲಿ ರಸ್ತೆಯು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ವಿದ್ಯಾರ್ಥಿ ನಿಲಯದ ವರೆಗೂ ರಸ್ತೆ ಇಕ್ಕೆಲಗಳಲ್ಲಿ ಜಾಲಿ ಮುಳ್ಳಿನ ಗಿಡ ಗಂಟೆಗಳು ಹಾಗೂ ಮರದ ರೆಂಬೆ ಕೊಂಬೆಗಳಿಂದ ಆವೃತವಾಗಿರುತ್ತದೆ. ಈ ರಸ್ತೆಯನ್ನು ಅಕ್ಕಪಕ್ಕದ ಜಮೀನಿನವರು ಆಕ್ರಮಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ, ಇದನ್ನು ಸರ್ವೇ ಮಾಡಿಸಿ ರಸ್ತೆ ನಿರ್ಮಿಸಿ ಕೊಡಬೇಕಾದ ಅಧಿಕಾರಿಗಳು ಮೌನವಾಗಿದ್ದಾರೆ.ಡಾಂಬರ್ ರಸ್ತೆ ಮಾಡಿಸಲಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಟಿ ಗೊಲ್ಲಹಳ್ಳಿ ಗ್ರಾಮದಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಹೋಗುವ ರಸ್ತೆ ವರೆಗೆ ಸುಮಾರು 400 ಮೀ. ಡಾಂಬರ್ ರಸ್ತೆ ಮಾಡಿದರೆ ನಿಲಯದಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ. ಈ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಇಲ್ಲಿವರೆಗೆ ರಸ್ತೆ ನಿರ್ಮಾಣವಾಗಿಲ್ಲ.ಹಾಸ್ಟೆಲ್ ವಿದ್ಯಾರ್ಥಿಗಳ ಪ್ರಕಾರ, ವಸತಿ ನಿಲಯಕ್ಕೆ ಹೋಗಲು ರಸ್ತೆ ಪಕ್ಕದಲ್ಲಿ ಜಾಲಿ ಮುಳ್ಳಿನ ಗಿಡಗಳಿಂದ ರಸ್ತೆಗೆ ಅಡ್ಡಲಾಗಿ ಬಂದಿದ್ದು ದಾರಿಯೇ ಕಾಣುವುದಿಲ್ಲ. ರಸ್ತೆಯೂ ಸಹ ಮಣ್ಣಿನಿಂದ ಕೂಡಿದ್ದು ಗುಂಡಿಗಳು ಹೆಚ್ಚಾಗಿವೆ. ನಿತ್ಯವೂ ಕಚ್ಚಾ ರಸ್ತೆಯಲ್ಲಿ ಹೋಗುತ್ತೇವೆ. ಮಳೆ ಬಂದರೆ ನಿಲಯಕ್ಕೆ ತೆರಳಲು ಬಹಳ ಕಷ್ಟವಾಗುತ್ತದೆ. ಸೂಕ್ತ ರಸ್ತೆ ನಿರ್ಮಿಸಲು ಅಧಿಕಾಗಳು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ.
ಅಧಿಕಾರಿಗಳು ಸರ್ವೇ ಮಾಡಿಸಲಿಅಧಿಕಾರಿಗಳು ಇನ್ನಾದರೂ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿ ಅರಿತುಕೊಂಡು ಅಧಿಕಾರಿಗಳು ರಸ್ತೆಯನ್ನು ಸರ್ವೆ ಮಾಡಿಸಿ, ಸಮರ್ಪಕ ರಸ್ತೆ ವ್ಯವಸ್ಥೆಯನ್ನು ನಿರ್ಮಿಸಿಕೊಡಬೇಕು ಎಂದು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಕೋಟ್... ಟಿ ಗೊಲ್ಲಹಳ್ಳಿ ಗ್ರಾಮದಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ವಸತಿ ನಿಲಯಕ್ಕೆ ರಸ್ತೆ ಇಲ್ಲದಿರುವುದು ತಮ್ಮ ಗಮನಕ್ಕೆ ಬಂದಿದೆ. ತಾವು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ನರೇಗಾ ಯೋಜನೆಯಡಿ ರಸ್ತೆ ನಿರ್ಮಿಸಿ ಕೊಡಲಾಗುವುದು. ರಸ್ತೆಯ ಬದಿಗಳಲ್ಲಿ ಇರುವ ಕಂಬಗಳಿಗೆ ವಿದ್ಯುತ್ ದೀಪ ವ್ಯವಸ್ಥೆ ಮಾಡಲಾಗುವುದು.
- ರವಿ ಪಿಡಿಒ, ಚಿಲಕಲನೇರ್ಪು ಗ್ರಾಪಂ.