ಕಾಂಗ್ರೆಸ್ ಪಕ್ಷದಲ್ಲಿರುವ ಕೆಲವು ದಲಿತ ಮುಖಂಡರು ಅಂಬೇಡ್ಕರ್ ಹೆಸರನ್ನು ಕೇವಲ ದಲಿತ ಪ್ಲೇ ಕಾರ್ಡ್ ನಂತೆ ಬಳಸಿಕೊಳ್ಳುತ್ತಿದ್ದಾರೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಂದ ಹಿಡಿದು ರಾಜ್ಯ ಮತ್ತು ಜಿಲ್ಲಾ ಮಟ್ಟದವರೆಗಿನ ನಾಯಕರು ಅಂಬೇಡ್ಕರ್ ಅವರಿಗೆ ಆಗುತ್ತಿರುವ ಅವಮಾನದ ಬಗ್ಗೆ ಎಂದಿಗೂ ಬಹಿರಂಗವಾಗಿ ಧ್ವನಿ ಎತ್ತಲಿಲ್ಲ. ಇದು ದೇಶದ ಬಡ ದಲಿತ ಸಮುದಾಯಕ್ಕೆ ಮಾಡಿದ ಅವಮಾನವಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕೋಲಾರ
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರ ಪರವಾಗಿ ಧ್ವನಿ ಎತ್ತುವ ಮೂಲಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಮುಖಂಡರಿಗೆ, ಬಿಜೆಪಿಯನ್ನು ದಲಿತ ವಿರೋಧಿ ಎಂದು ಕರೆಯಲು ಯಾವ ನೈತಿಕತೆ ಇದೆ ಎಂದು ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ಕೆಂಬೋಡಿ ನಾರಾಯಣ ಸ್ವಾಮಿ ಪ್ರಶ್ನಿಸಿದ್ದಾರೆ.ಅವರು ಪತ್ರಿಕಾ ಹೇಳಿಕೆಯಲ್ಲಿ, ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷವು ಡಾ. ಅಂಬೇಡ್ಕರ್ ಅವರನ್ನು ನಿರಂತರವಾಗಿ ಅವಮಾನಿಸುತ್ತಾ ಬಂದಿದೆ ಎಂಬುದು ಇಡೀ ದೇಶದ ಜನತೆಗೆ ಗೊತ್ತಿರುವ ವಿಚಾರವಾಗಿದೆ. ಅಂಬೇಡ್ಕರ್‌ರನ್ನು ಚುನಾವಣೆಯಲ್ಲಿ ಸೋಲಿಸಿದ್ದು, ಪಂಡಿತ್ ನೆಹರು ನೇತೃತ್ವದ ಕಾಂಗ್ರೆಸ್ ಪಕ್ಷವೇ. ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ ನೀಡಲು ಬಿಜೆಪಿ ಬೆಂಬಲಿತ ಸರ್ಕಾರ ಅಧಿಕಾರಕ್ಕೆ ಬರಬೇಕಾಯಿತು. ಈ ಐತಿಹಾಸಿಕ ಸತ್ಯವನ್ನು ಕಾಂಗ್ರೆಸ್ಸಿಗರು ಮೊದಲು ಅರ್ಥಮಾಡಿಕೊಳ್ಳಬೇಕು ಎಂದು ಕೆಂಬೋಡಿ ನಾರಾಯಣ ಸ್ವಾಮಿ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿರುವ ಕೆಲವು ದಲಿತ ಮುಖಂಡರು ಅಂಬೇಡ್ಕರ್ ಹೆಸರನ್ನು ಕೇವಲ ದಲಿತ ಪ್ಲೇ ಕಾರ್ಡ್ ನಂತೆ ಬಳಸಿಕೊಳ್ಳುತ್ತಿದ್ದಾರೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಂದ ಹಿಡಿದು ರಾಜ್ಯ ಮತ್ತು ಜಿಲ್ಲಾ ಮಟ್ಟದವರೆಗಿನ ನಾಯಕರು ಅಂಬೇಡ್ಕರ್ ಅವರಿಗೆ ಆಗುತ್ತಿರುವ ಅವಮಾನದ ಬಗ್ಗೆ ಎಂದಿಗೂ ಬಹಿರಂಗವಾಗಿ ಧ್ವನಿ ಎತ್ತಲಿಲ್ಲ. ಇದು ದೇಶದ ಬಡ ದಲಿತ ಸಮುದಾಯಕ್ಕೆ ಮಾಡಿದ ಅವಮಾನವಲ್ಲವೇ ಎಂದು ಪ್ರಶ್ನಿಸಿದ್ದಾರೆ.ಇಂದು ಜಿಲ್ಲೆಯಲ್ಲಿ ಕೆಲವು ಮುಖಂಡರು ಭ್ರಷ್ಟಾಚಾರ ಆರೋಪದಲ್ಲಿರುವ ಮಾಜಿ ಸಚಿವರ ಪರವಾಗಿ ದಲಿತ ಕಾರ್ಡ್ ಬಳಸಿಕೊಂಡು ಹೋರಾಟ ಮಾಡುತ್ತಿರುವುದು ಸಂವಿಧಾನ ರಚಿಸಿದ ಅಂಬೇಡ್ಕರ್‌ರಿಗೆ ಮಾಡುವ ದ್ರೋಹವಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ₹೧೮೭ ಕೋಟಿ ಹಗರಣ ಹಾಗೂ ಎಸ್‌ಸಿಪಿ/ಟಿಎಸ್‌ಪಿ ಯ ₹೨೬ ಸಾವಿರ ಕೋಟಿ ಹಣವನ್ನು ಬೇರೆಡೆಗೆ ವರ್ಗಾವಣೆ ಮಾಡಿರುವುದು ಬಡ ದಲಿತರ ಹಣವನ್ನು ದೋಚಿದಂತೆ ಅಲ್ಲವೇ, ಇಷ್ಟೆಲ್ಲಾ ಅನ್ಯಾಯ ನಡೆಯುತ್ತಿದ್ದರೂ ಕಾಂಗ್ರೆಸ್ ಪಕ್ಷದಲ್ಲಿರುವ ದಲಿತ ರಾಜಕಾರಣಿಗಳು ಮತ್ತು ಕೆಲವು ದಲಿತ ಸಂಘಟನೆಗಳ ಮುಖಂಡರು ಏಕೆ ಮೌನವಾಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ.