ಸಾರಾಂಶ
ಶಿವಮೊಗ್ಗ : ಬಿ.ಎಸ್. ಯಡಿಯೂರಪ್ಪನವರ ಮಕ್ಕಳು ಈಗ ಸಿಗಂದೂರು ಸೇತುವೆ ಮೇಲೆ ನಿಂತು ಅಭಿವೃದ್ಧಿಯ ಮಾತನಾಡುವುದಲ್ಲ. ರಾಜ್ಯಕ್ಕೆ ನೀರಾವರಿ ಯೋಜನೆಗಳಿಗಾಗಿ ಅವರು ಏನು ತ್ಯಾಗ ಮಾಡಿದ್ದಾರೆ? ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಳ್ಳುಗಳನ್ನು ಹೇಳಿ ಜನರನ್ನು ವಂಚಿಸಲು ಆಗುವುದಿಲ್ಲ. ಅವರು ದಂಡಾವತಿ ಯೋಜನೆಯನ್ನು ವಿರೋಧಿಸಿದವರು. ಅವರಿಗೆ ನೀರಾವರಿ ಯೋಜನೆಗಳೇ ಬೇಕಾಗಿರಲಿಲ್ಲ. ಒಬ್ಬರ ಮನೆ ಹಾಳು ಮಾಡಿ ಅಭಿವೃದ್ಧಿ ಮಾಡಬಾರದು ಎಂದು ಕಿಡಿಕಾರಿದರು.
ಸಿಗಂದೂರು ಸೇತುವೆಯೇ ಬಹುದೊಡ್ಡ ಸಾಧನೆ ಎಂದು ಹೇಳುತ್ತಾ ಹೊರಟಿದ್ದಾರೆ. ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ತೆರಿಗೆ ಹೋಗುತ್ತದೆ ಎಂಬ ಕಲ್ಪನೆಯೂ ಅವರಿಗಿಲ್ಲ. ರಾಜ್ಯದ ಅಡಕೆ ತೆರಿಗೆಯ ಭಾಗವನ್ನು ಕರ್ನಾಟಕಕ್ಕೆ ನೀಡಿದರೆ ಸಾಕು. ಆದರೆ, ಅದು ಅವರಿಗೆ ಬೇಕಾಗಿಲ್ಲ ಎಂದು ದೂರಿದರು.
ಮೆಗ್ಗಾನ್ ಆಸ್ಪತ್ರೆಯ ದುಸ್ಥಿತಿಗೆ ಯಡಿಯೂರಪ್ಪ ಮತ್ತು ಅವರ ಮಕ್ಕಳೇ ಕಾರಣ. ಜಿಲ್ಲಾಸ್ಪತ್ರೆಯನ್ನು ಶಿಕಾರಿಪುರಕ್ಕೆ ತೆಗೆದುಕೊಂಡು ಹೋದರು. ಶರಾವತಿ ಸಂತ್ರಸ್ತರನ್ನು ಬೀದಿಗೆ ಬಿಟ್ಟವರು ಅವರೇ. ದಂಡಾವತಿ ಯೋಜನೆಯ ಪರವಾಗಿ ಮುಷ್ಕರ ನಡೆಸುತ್ತಿದ್ದ ಹೆಣ್ಣುಮಕ್ಕಳಿಗೆ ಲಾಠಿಯಲ್ಲಿ ಹೊಡೆದಿದ್ದು ಇನ್ನೂ ನೆನಪಿದೆ. ಬೇರೆಯವರ ಮನೆಗಳನ್ನು ಮುಳುಗಿಸಿ ಅಭಿವೃದ್ಧಿ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಎಲ್ಲರನ್ನು ತಲುಪುತ್ತಿದೆ. ಆದರೆ, ಈ ಬಿಜೆಪಿಯವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಬೇಕು ಎಂದು ಹೇಳುವ ಇವರೇ ಮತ್ತೊಂದು ಕಡೆ ವಿರೋಧಿಸುತ್ತಾರೆ. ಹೀಗೆ ದ್ವಂದ್ವ ಹೇಳಿಕೆಗಳಲ್ಲೇ ಅಣ್ಣ-ತಮ್ಮ ಮುಳುಗಿ ಹೋಗಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ಆರ್. ಅಶೋಕ್ ಅವರಿಗೆ ಏನು ಮಾತನಾಡಬೇಕೆಂಬುದೇ ಗೊತ್ತಿಲ್ಲ. ನಮ್ಮ ಸರ್ಕಾರದ ಭವಿಷ್ಯ ಹೇಳಲು ಹೊರಟಿದ್ದಾರೆ. ಅವರು ಜ್ಯೋತಿಷಿಯಾಗಿರುವುದು ಕ್ಷೇಮ ಎಂದು ಕುಟುಕಿದರು.
ಗೋಷ್ಠಿಯಲ್ಲಿ ಪ್ರಮುಖರಾದ ಆಯನೂರು ಮಂಜುನಾಥ್, ಆರ್. ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ಚಂದ್ರಭೂಪಾಲ್, ಕಲೀಂ ಪಾಷಾ, ವೈ.ಎಚ್. ನಾಗರಾಜ್, ಜಿ.ಡಿ. ಮಂಜುನಾಥ್, ಎಸ್.ಟಿ. ಹಾಲಪ್ಪ, ರಮೇಶ್ ಶಂಕರಘಟ್ಟ ಮತ್ತಿತರರು ಇದ್ದರು.