ಸಾರಾಂಶ
- ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ಬಿಡಲ್ಲವೆಂದ ಜಮೀರ್ ಪ್ರಚೋದನೆ ಮಾತು ನಿಲ್ಲಿಸಲಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯದಲ್ಲಿ ವಕ್ಫ್ ಕಾಯ್ದೆ ಅನುಷ್ಠಾನಕ್ಕೆ ಬಿಡೋದಿಲ್ಲ ಎನ್ನುವ ಸಚಿವ ಜಮೀರ್ ಅಹಮ್ಮದ್ ಪ್ರಚೋದನೆ ಮಾತನ್ನು ಮೊದಲು ನಿಲ್ಲಿಸಲಿ. ರಾಜ್ಯವೇನು ಜಮೀರ್ ಅಪ್ಪನ ಮನೆಯಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹರಿಹಾಯ್ದರು.ಬಿಜೆಪಿಯ 3ನೇ ಹಂತದ ಜನಾಕ್ರೋಶ ಯಾತ್ರೆ ಏ.21ಕ್ಕೆ ಶ್ರೀ ಜಯದೇವ ವೃತ್ತದಲ್ಲಿ ಆಗಮಿಸುವ ಹಿನ್ನೆಲೆ ಭಾನುವಾರ ಸಂಜೆ ಸಿದ್ಧತಾ ಕಾರ್ಯಗಳ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ವಕ್ಫ್ ತಿದ್ದುಪಡಿ ಕಾಯ್ದೆಯನ್ನು ರಾಜ್ಯದಲ್ಲಿ ನಾವು ಜಾರಿಗೆ ತಂದೇ ತರುತ್ತೇವೆ. ಜಮೀರ್ ಅಹಮ್ಮದ್‌ನಂತಹ ಬಾಯಿಬಡುಕನನ್ನು ಪಕ್ಕದಲ್ಲಿ ಇಟ್ಟುಕೊಳ್ಳುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ. ಲೋಕಸಭೆ, ರಾಜ್ಯಸಭೆಯಲ್ಲಿ ಪಾಸ್ ಆಗಿ, ರಾಷ್ಟ್ರಪತಿಗಳಿಂದಲೂ ಅಂಕಿತ ಪಡೆದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರುವ ಕೆಲಸ ಆಗಲಿ ಎಂದು ತಾಕೀತು ಮಾಡಿದರು.ಜಮೀರ್ ಅಹಮ್ಮದ್ ಖಾನ್ ಪ್ರಚೋದನೆ ಮಾಡುತ್ತಾರಷ್ಟೇ. ನಾವು ಹಿಂದೂಗಳು, ಒಮ್ಮೆ ತಿರುಗಿ ಬಿದ್ದರೆ, ನಿನಗೆ ಎಲ್ಲಿಗೆ ಕಳಿಸಬೇಕೋ, ಅಲ್ಲಿಗೆ ಓಡಿಸುತ್ತೇವೆ. ರಾಜ್ಯದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೊಳಿಸಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಸುವವರೆಗೂ ಬಿ.ವೈ.ವಿಜಯೇಂದ್ರ ನೇತೃತ್ವದ ಜನಾಕ್ರೋಶ ಯಾತ್ರೆ ಮುಂದುವರಿಯುತ್ತದೆ ಎಂದು ರೇಣುಕಾಚಾರ್ಯ ಹೇಳಿದರು.
ಏ.7ರಂದು ಮೈಸೂರಿನಿಂದ ಆರಂಭವಾದ ಕಾಂಗ್ರೆಸ್ ಸರ್ಕಾರದ ವಿರುದ್ಧದ ಬಿಜೆಪಿ ಜನಾಕ್ರೋಶ ಯಾತ್ರೆ ಎರಡು ಹಂತಗಳನ್ನು ಮುಗಿಸಿ, ಏ.21ರಂದು ದಾವಣಗೆರೆಯಿಂದ 3ನೇ ಹಂತದ ಯಾತ್ರೆ ಆರಂಭಿಸಲಿದೆ. ಹಾಲಿ- ಮಾಜಿ ಜನಪ್ರತಿನಿಧಿಗಳು, ಎಲ್ಲ ಮುಖಂಡರು ಯಾತ್ರೆ ಯಶಸ್ವಿಗೊಳಿಸುತ್ತೇವೆ ಎಂದರು.ಜನಾಕ್ರೋಶ ಯಾತ್ರೆ ಕಂಡು ಕಾಂಗ್ರೆಸ್ ಸರ್ಕಾರಕ್ಕೆ ನಡುಕ ಶುರುವಾಗಿದೆ. 4ನೇ ಹಂತವು ಬೆಂಗಳೂರಿನಲ್ಲಿ ನಡೆಯಲಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಸುವವರೆಗೂ ಜನಾಕ್ರೋಶ ನಡೆಯಲಿದೆ. ಮುಂದಿನ ಹಂತದಲ್ಲಿ ಬಾರುಕೋಲು ಚಳವಳಿ, ಮಹಿಳೆಯರಿಂದ ಪೊರಕೆ ಸೇವೆ ಹೋರಾಟವನ್ನೂ ಮಾಡಬೇಕಾದೀತು ಎಂದರು.
- - -(ಬಾಕ್ಸ್) * ಯಾರಿಗೂ ಆರತಿ ಎತ್ತಿ ಕರೆಯೋಕ್ಕೆ ಆಗಲ್ಲ ದಾವಣಗೆರೆಯಲ್ಲಿ ಬಿಜೆಪಿಯ 3ನೇ ಹಂತದ ಜನಾಕ್ರೋಶ ಯಾತ್ರೆಗೆ ಬರುವಂತೆ ಯಾರಿಗೂ ಆರತಿ ಎತ್ತಿ ಕರೆಯುವುದಕ್ಕೆ ಆಗಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಮೇಲೆ ಅಭಿಮಾನ ಇರುವವರು, ಪಕ್ಷದ ಮೇಲೆ ನಿಷ್ಟೆ ಇದ್ದವರು ಜನಾಕ್ರೋಶ ಯಾತ್ರೆಗೆ ಬಂದೇ ಬರುತ್ತಾರೆ. ನಮ್ಮನ್ನು ಕರೆದಿಲ್ಲವೆಂದು ಯಾರೂ ಹೇಳುವುದಿಲ್ಲ ಎಂದು ಅವರು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗೆ ಗುರುತಿಸಿಕೊಂಡ ಜಿ.ಎಂ.ಸಿದ್ದೇಶ್ವರ, ಹರೀಶ್ ಅವರಿಗೆ ರೇಣುಕಾಚಾರ್ಯ ಪರೋಕ್ಷವಾಗಿ ಟಾಂಗ್ ನೀಡಿದರು.
- - --(ಫೋಟೋ ಬರಲಿವೆ)