ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ನೀವು ರಾಜ್ಯ ಮತ್ತು ದೇಶಕ್ಕೆ ಪರಿಚಯಿಸಿದ ನಾಯಕರು ನಿಮ್ಮ ಮಕ್ಕಳು ಹಾಗೂ ಜಿಲ್ಲೆಯ ಬಗ್ಗೆ ಎಂದೂ ಆಲೋಚನೆ ಮಾಡಲಿಲ್ಲ. ಆದರೆ, ನಾವು ನಿಮ್ಮ ಮನೆ ಮಕ್ಕಳಂತೆ ಕೆಲಸ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಕುಟುಂಬದವರ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.ತಾಲೂಕಿನ ಪಾದರಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಿಎಸ್ ಆರ್ ಅನುದಾನದಲ್ಲಿ 12.50 ಕೋಟಿ ರು. ವೆಚ್ಚದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೀವು ಸಾಕಷ್ಟು ರಾಜಕಾರಣಿಗಳಿಗೆ ಚುನಾವಣೆ ಮಾಡಿ ರಾಜ್ಯ ಮತ್ತು ದೇಶಕ್ಕೆ ಪರಿಚಯ ಮಾಡಿಸಿದ್ದೀರಿ. ಅವರು ಮುಖ್ಯಮಂತ್ರಿ ಮಾತ್ರವಲ್ಲದೆ ದೇಶದ ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಿದರು. ಅವರೆಲ್ಲರೂ ತಮ್ಮ ಕುಟುಂಬದ ಏಳಿಗೆಗಾಗಿ ಅಧಿಕಾರ ಬಳಸಿಕೊಂಡರೆ ಹೊರತು ಜಿಲ್ಲೆಯ ಅಭಿವೃದ್ಧಿಗಾಗಿ ಹಾಗೂ ನಿಮ್ಮ ಮಕ್ಕಳ ಭವಿಷ್ಯ ದೃಷ್ಟಿಯಿಂದ ಯಾವ ಕಾರ್ಯಕ್ರಮಗಳನ್ನೂ ರೂಪಿಸಲೇ ಇಲ್ಲ ಎಂದು ಹರಿಹಾಯ್ದರು.ಕಾಂಗ್ರೆಸ್ ಸರ್ಕಾರ ನುಡಿದಂತೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದೆ. ಈಗ ಅಭಿವೃದ್ಧಿ ಕಾರ್ಯಗಳತ್ತ ಚಿಂತನೆ ಮಾಡುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರು, ಚರಂಡಿ, ಸ್ಮಶಾನ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮಾತನಾಡಿ, ನಾನು ಶಾಸಕನಾಗಿದ್ದ ಅವಧಿಯಲ್ಲಿ ಜನರಿಗೆ ನಿವೇಶನ ಕೊಡುವ ಆಸೆ ಇತ್ತು. ಆದರೆ, ಸಂದರ್ಭ ಕೂಡಿ ಬರಲಿಲ್ಲ. ಈಗಿನ ಶಾಸಕ ಇಕ್ಬಾಲ್ ಹುಸೇನ್ ರವರು ನಿವೇಶನ ಹಂಚಿಕೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು.ಈ ಗ್ರಾಮದ ಮುಖಂಡರ ಒತ್ತಡಕ್ಕೆ ಮಣಿದು ಅಂದು ಪ್ರೌಢಶಾಲೆ ಮಂಜೂರು ಮಾಡಿಸಿದೆ. ಇಲ್ಲಿಗೆ ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ. ಈಗಿನ ಸ್ಪರ್ಧಾಯುಗದಲ್ಲಿ ಗ್ರಾಮೀಣ ಮಕ್ಕಳು ನಗರ ಪ್ರದೇಶದ ಮಕ್ಕಳೊಂದಿಗೆ ಸರಿಸಮಾನವಾಗಿ ಪೈಪೋಟಿ ನೀಡಬೇಕು. ಮಕ್ಕಳು ಉನ್ನತ ಶಿಕ್ಷಣ ಪಡೆದು ಉದ್ಯೋಗ ಗಿಟ್ಟಿಸಿಕೊಂಡರೆ ಸಾಲದು. ತಮ್ಮ ಗ್ರಾಮಗಳ ಅಭಿವೃದ್ಧಿ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು ಮಾತನಾಡಿ, ಪೋಷಕರು ಕಾನ್ವೆಂಟ್ ಶಿಕ್ಷಣಕ್ಕೆ ಮಾರು ಹೋಗುತ್ತಿರುವ ಕಾರಣ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಕಾನ್ವೆಂಟ್ ಮಾದರಿಯ ಶಿಕ್ಷಣ ನೀಡುವ ಉದ್ದೇಶದಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ರವರು ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ ಎಂದರು.ಈ ಕ್ಷೇತ್ರದಿಂದ ಗೆದ್ದು ಉನ್ನತ ಹುದ್ದೆ ಅಲಂಕರಿಸಿದ ನಾಯಕರು ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಜಾತಿ ಹೆಸರೇಳಿದರೆ ಕೆಲಸಗಳು ಆಗುವುದಿಲ್ಲ. ಅಣ್ಣ, ಅಪ್ಪ, ಬ್ರದರ್ ಅಂತ ಜನರ ಹೆಗಲ ಮೇಲೆ ಕೈ ಹಾಕಿಕೊಂಡು ಡವ್ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ಹಾಲಿ ಶಾಸಕ ಇಕ್ಬಾಲ್ ಹುಸೇನ್ ರವರು ವಾರದಲ್ಲಿ ಐದು ದಿನ ಕ್ಷೇತ್ರದಲ್ಲಿ ಜನರ ಕೈಗೆ ಸಿಗುತ್ತಿದ್ದು, ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ರಾಜು, ತಾಲೂಕು ಅಧ್ಯಕ್ಷ ವಿ.ಎಚ್.ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಮಾಜಿ ಅಧ್ಯಕ್ಷ ಆರ್.ದೊಡ್ಡವೀರಯ್ಯ, ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ಸದಸ್ಯರಾದ ಮೋಹನ್ ರಾಮ್ ಮನ್ನಾರ್, ಸತೀಶ, ರೂಪ, ಮಾಜಿ ಸದಸ್ಯ ಪುಟ್ಟೇಗೌಡ , ಮುಖಂಡರಾದ ಪ್ರಾಣೇಶ್, ಶಂಕರಪ್ಪ, ಉಮೇಶ್, ಎಸ್‌ಡಿಎಂಸಿ ಅಧ್ಯಕ್ಷ ಮಂಚೇಗೌಡ, ಮುಖಂಡರಾದ ಮಹದೇವು, ಅನಿಶ್, ಮೋಹನ್‌ರಾಜು, ಆನಂದ್, ಚಂದ್ರು, ಶೇಖರ್‌ಮಾರೇಗೌಡ, ಸಲೀಂಪಾಷ, ಬಿಇಒ ಸೋಮಲಿಂಗಯ್ಯ, ಟಿಕೆಎಂನ ಪ್ರಕಾಶ್, ರಮೇಶ್, ಶಾಲಾ ಮುಖ್ಯೋಪಾಧ್ಯಾಯ ಡಾಕ್ಯಾನಾಯಕ್, ಪಿಡಿಓ ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.ಏತ ನೀರಾವರಿ ಯೋಜನೆ ಸಾಕಾರ:
ಏತ ನೀರಾವರಿ ಯೋಜನೆ ಈ ಭಾಗದ ಜನರ ಕನಸಾಗಿತ್ತು. ಅದನ್ನು ಮಾಜಿ ಸಂಸದ ಡಿ.ಕೆ.ಸುರೇಶ್ ರವರು ಸಾಕಾರಗೊಳಿಸಿದರು. ರೈತರ ಬದುಕು ಹಸನಾಗಿಸಲು 28 ಕೋಟಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದೇವೆ. ಕಸಬಾ ಮತ್ತು ಕೈಲಾಂಚ ಹೋಬಳಿಗಳಿಗೆ ಮುಂದಿನ ಒಂದು ತಿಂಗಳಲ್ಲಿ ಮನೆಗಳಿಗೆ ನೀರು ಪೂರೈಕೆ ಆಗಲಿದೆ. ಈಗಾಗಲೇ ಮಂಚನಬೆಲೆ ಎಡ - ಬಲ ದಂಡೆ ನಾಲೆಯನ್ನು 20 ಕಿ.ಮೀ ವರೆಗೆ ಶುಚಿಗೊಳಿಸಲಾಗಿದೆ. ಕಳೆದ 20-25 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಮರು ಜೀವ ನೀಡಿದ್ದೇವೆ. ಒಂದೂವರೆ ವರ್ಷದಲ್ಲಿ ಸುಮಾರು 51 ಕೋಟಿ ರು.ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಈ ಭಾಗದಲ್ಲಿ ಚಾಲನೆಯಲ್ಲಿವೆ ಎಂದು ತಿಳಿಸಿದರು.ಗ್ರಾಮೀಣ ಮಕ್ಕಳಿಗೂ ಬೆಂಗಳೂರಿನ ಹೈಟೆಕ್ ಶಾಲೆಯ ಸವಲತ್ತು ಮತ್ತು ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಸ್ಥಾಪನೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 20 ಶಾಲೆಗಳು ಸಿಎಸ್ ಆರ್ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿವೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.‘ಕಳೆದ 30 ವರ್ಷಗಳಿಂದ ರಾಮನಗರ ಕ್ಷೇತ್ರವೂ ಅಭಿವೃದ್ಧಿಯಿಂದ ವಂಚಿತವಾಗಿದೆ. ನೀವು ಸಾಕಿದವರು, ನಿಮ್ಮಿಂದ ಅಧಿಕಾರ ಪಡೆದವರೇ ಮಹಾಮಾರಿ ಕೋವಿಡ್ ನಂತಹ ಸಂಕಷ್ಟ ಕಾಲದಲ್ಲಿಯೂ ನಿಮ್ಮ ಕಷ್ಟಗಳಿಗೆ ಸ್ಪಂದಿಸಲಿಲ್ಲ. ಆದರೆ, ನಾವು (ಕಾಂಗ್ರೆಸ್ ನಾಯಕರು) ಮನೆ ಮಕ್ಕಳಂತೆ ಕೆಲಸ ಮಾಡಿದೆವು. ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದ ಡಿ.ಕೆ.ಸುರೇಶ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದಿರಿ.’
-ಇಕ್ಬಾಲ್ ಹುಸೇನ್, ಶಾಸಕರು