ಸಾರಾಂಶ
ರಾಜ್ಯ ಸರ್ಕಾರ ಜಾತಿಗಳ ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿ ಅರಿಯಲು ಇಷ್ಟೊಂದು ಗಡಿಬಿಡಿಯಲ್ಲಿ ಸಮೀಕ್ಷೆ ಮಾಡುತ್ತಿರುವುದು ಸರಿಯಲ್ಲ. ಸಾಕಷ್ಟು ಕಾಲವಕಾಶ ಪಡೆದು ಸಿದ್ಧತೆ ಮಾಡಿಕೊಂಡು ಗೊಂದಲ ನಿವಾರಿಸಿಕೊಳ್ಳಬೇಕಿತ್ತು ಎಂದು ವಚನಾನಂದ ಸ್ವಾಮೀಜಿ ಹೇಳಿದರು.
ಕೊಪ್ಪಳ:
ಹುಬ್ಬಳ್ಳಿಯಲ್ಲಿ ನಡೆದಿರುವುದು ಏಕತಾ ಸಮಾವೇಶವಲ್ಲ, ಬೇಡ ಜಂಗಮ ಸಮಾವೇಶ. ಜನರಿಲ್ಲದೆ ಅದೊಂದು ವಿಫಲವಾದ ಸಮಾವೇಶವಾಗಿದೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.ನಗರದಲ್ಲಿ ಮನೆ-ಮನೆ ಸುತ್ತಾಡಿದ ಶ್ರೀಗಳು ಪಲ್ಲೇದರ ಓಣಿಯಲ್ಲಿ ಸಮೀಕ್ಷೆ ಕುರಿತು ಜನರಿಂದ ಅಭಿಪ್ರಾಯ ಪಡೆದು, ಸುದ್ದಿಗಾರರೊಂದಿಗೆ ಮಾತನಾಡಿದರು.
ನಾವು ಮತ್ತು ಕೂಡಲಸಂಗಮ ಪೀಠದ ಶ್ರೀಗಳು ಸೇರಿ ಆ ಸಮಾವೇಶಕ್ಕೆ ಪಂಚಮಸಾಲಿ ಸಮುದಾಯದವರು ಹೋಗುವುದು ಬೇಡ ಎಂದು ನಿರ್ಧರಿಸಿದ್ದೇವು. ಸಮಾವೇಶ ಮಾಡುವಾಗ ಲಿಂಗಾಯತ ಪಂಚಮಸಾಲಿ ಪೀಠಗಳನ್ನು ಪರಿಗಣಿಸಿಯೇ ಇಲ್ಲ. ಹೀಗಿರುವಾಗ ನಾವೇಗೆ ಅಲ್ಲಿಗೆ ಹೋಗಬೇಕು ಎಂದರು.ಸಮಾವೇಶಕ್ಕೆ ಲಕ್ಷ-ಲಕ್ಷ ಜನ ಬರುತ್ತಾರೆ ಎಂದು ಆಯೋಜಕರು ಹೇಳಿಕೊಂಡಿದ್ದರು. ಆದರೆ, ಅಲ್ಲಿ ಬಂದಿದ್ದು ಏಳು ಸಾವಿರ ಜನರು ಮಾತ್ರ. ಹೀಗಾಗಿ ಸಮಾವೇಶ ಸಂಪೂರ್ಣ ವಿಫಲವಾಗಿದೆ ಎಂದರು.
ಸಮೀಕ್ಷೆಗೆ ಗಡಿಬಿಡಿ ಬೇಕಿರಲಿಲ್ಲ:ರಾಜ್ಯ ಸರ್ಕಾರ ಜಾತಿಗಳ ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿ ಅರಿಯಲು ಇಷ್ಟೊಂದು ಗಡಿಬಿಡಿಯಲ್ಲಿ ಸಮೀಕ್ಷೆ ಮಾಡುತ್ತಿರುವುದು ಸರಿಯಲ್ಲ. ಸಾಕಷ್ಟು ಕಾಲವಕಾಶ ಪಡೆದು ಸಿದ್ಧತೆ ಮಾಡಿಕೊಂಡು ಗೊಂದಲ ನಿವಾರಿಸಿಕೊಳ್ಳಬೇಕಿತ್ತು ಎಂದರು.
ಸಮೀಕ್ಷೆಗೆ ವಿರೋಧವಿಲ್ಲ. ಆದರೆ, ಜಾತಿಗಳಲ್ಲಿನ ಗೊಂದಲ ನಿವಾರಿಸಬೇಕಿತ್ತು. ಇದೀಗ ದಸರಾ ಆರಂಭವಾಗಿದ್ದು ಸಮೀಕ್ಷೆ ನಡೆಸುವುದು ಬೇಕಾಗಿರಲಿಲ್ಲ ಎಂದ ಶ್ರೀಗಳು, ತರಾತುರಿಯಲ್ಲಿ ಸಮೀಕ್ಷೆ ಮಾಡುವುದು ಸರಿಯಲ್ಲ. ವೈಜ್ಞಾನಿಕವಾಗಿ ಗಣತಿ ನಡೆಸಬೇಕು ಎಂದು ಒತ್ತಾಯಿಸಿದರು.ಮನೆ-ಮನೆಗೆ ಭೇಟಿ:
ವಚನಾನಂದ ಶ್ರೀಗಳು, ಮನೆ-ಮನೆಗೆ ಭೇಟಿ ನೀಡಿ, ಚರ್ಚೆ ಮಾಡಿದರಲ್ಲದೆ ಸಮೀಕ್ಷೆಗೆ ಯಾವ ರೀತಿ ಸಿದ್ಧವಾಗಿದ್ದಾರೆ ಎನ್ನುವುದನ್ನು ಸಹ ಜನರ ಜತೆಗೆ ಚರ್ಚಿಸಿದರು. ಗಣತಿ ವೇಳೆ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಬರೆಸುವಂತೆ ಕರೆ ನೀಡಿದರು. ಈ ಕುರಿತು ಸ್ಟಿಕ್ಕರ್ ಅಂಟಿಸಿದರು.ಈ ವೇಳೆ ಮಾಜಿ ಸಂಸದ ಸಂಗಣ್ಣ ಕರಡಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ಪಂಚಮಸಾಲಿ ಸಂಘಟನೆಯ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್, ಮುಖಂಡರಾದ ಕರಿಯಪ್ಪ ಮೇಟಿ, ಉಮೇಶ ಎತ್ತಿನಮನಿ, ಸುಜಾತಾ ಪಟ್ಟಣಶೆಟ್ಟಿ, ಚೆನ್ನಪ್ಪ, ಗವಿ ಜಂತಕಲ್, ದೇವರಾಜ ಹಾಲಸಮುದ್ರ ಇದ್ದರು.