ಮಹಿಳೆ ಬುದ್ಧಿವಂತಿಕೆ ಮತ್ತು ಶಕ್ತಿಯಲ್ಲಿ ವಿಶಿಷ್ಟ ಸಾಮರ್ಥ್ಯ ಹೊಂದಿದ್ದಾಳೆ. ಆಕೆಯಲ್ಲಿ ಜ್ಞಾನದ ಸಂಕೇತವಾದ ಸರಸ್ವತಿ ಹಾಗೂ ಶಕ್ತಿಯ ಪ್ರತೀಕವಾದ ದುರ್ಗೆಯ ಸ್ವರೂಪಗಳಿವೆ.
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಸದ್ಗುರು ಮಧುಸೂದನ ಸಾಯಿ ಅಭಿಮತ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಮಹಿಳೆಯರಿಗೆ ಕನಿಕರ ತೋರುವುದಕ್ಕಿಂತ ಅವರ ಸಾಮರ್ಥ್ಯವನ್ನು ಗುರುತಿಸಿ ಸೂಕ್ತ ಅವಕಾಶಗಳನ್ನು ಕಲ್ಪಿಸಬೇಕು. ಮಹಿಳೆ ಜ್ಞಾನ, ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಿದ್ದರೂ ಸಮಾಜದಲ್ಲಿ ಆಕೆಗೆ ಅರ್ಹವಾದ ಸ್ಥಾನಮಾನ ಇನ್ನೂ ದೊರೆಯುತ್ತಿಲ್ಲ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದರು.ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಆಶೀರ್ವಚನ ನೀಡಿದ ಮಾತನಾಡಿ, ಮಹಿಳೆಯರ ಸಾಮರ್ಥ್ಯವನ್ನು ಗುರುತಿಸಿ ಅವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವ ಅಗತ್ಯವನ್ನು ಪ್ರತಿಪಾದಿಸಿದರು.
ಮಹಿಳೆ ಬುದ್ಧಿವಂತಿಕೆ ಮತ್ತು ಶಕ್ತಿಯಲ್ಲಿ ವಿಶಿಷ್ಟ ಸಾಮರ್ಥ್ಯ ಹೊಂದಿದ್ದಾಳೆ. ಆಕೆಯಲ್ಲಿ ಜ್ಞಾನದ ಸಂಕೇತವಾದ ಸರಸ್ವತಿ ಹಾಗೂ ಶಕ್ತಿಯ ಪ್ರತೀಕವಾದ ದುರ್ಗೆಯ ಸ್ವರೂಪಗಳಿವೆ. ಆದರೂ ಪುರುಷ ಪ್ರಧಾನ ಮನೋಭಾವದ ಸಮಾಜ ಮಹಿಳೆಯನ್ನು ಅಧೀನದಲ್ಲಿಡಲು ಬಯಸುತ್ತಿರುವುದು ವಿಪರ್ಯಾಸ ಎಂದು ಹೇಳಿದರು.ಕಾರ್ಪೊರೇಟ್ ಕಂಪನಿಗಳ ಆಡಳಿತ ಮಂಡಳಿಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಪ್ರಾತಿನಿಧ್ಯ ದೊರೆಯಲು ಇನ್ನೂ ನೂರು ವರ್ಷಗಳು ಬೇಕಾಗಬಹುದು ಎಂಬ ವಿಶ್ವಸಂಸ್ಥೆಯ ವರದಿಯನ್ನು ಉಲ್ಲೇಖಿಸಿದ ಅವರು, ಮಹಿಳೆಯರ ಕುರಿತಾದ ಸಾಮಾಜಿಕ ಮನೋಭಾವ ಬದಲಾಗಬೇಕು. ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ನ ವಿವಿಧ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮಿಷನ್ನ ಹಲವು ಘಟಕಗಳ ಜವಾಬ್ದಾರಿಯನ್ನು ಮಹಿಳೆಯರು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಿ,ಪ್ರಭು ಮಾತನಾಡಿ, ಇಡೀ ಜಗತ್ತನ್ನೇ ಒಂದೇ ಕುಟುಂಬವೆಂದು ಸಾರುವ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ನ ಕೇಂದ್ರ ನಮ್ಮ ಜಿಲ್ಲೆಯಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ. ಭಕ್ತಿಯ ಮೂಲಕ ಮಾನವೀಯ ಸೇವೆ ಸಲ್ಲಿಸುವುದು ಹಾಗೂ ಶಿಕ್ಷಣದ ಮೂಲಕ ಚಾರಿತ್ರ್ಯ ನಿರ್ಮಾಣಕ್ಕೆ ಒತ್ತು ನೀಡುವುದು ಮುದ್ದೇನಹಳ್ಳಿಯ ಶಿಕ್ಷಣ ಸಂಸ್ಥೆಗಳ ವಿಶೇಷತೆಯಾಗಿದೆ. ಈ ಸಂಸ್ಥೆಗಳು ಜಗತ್ತಿಗೆ ಮಾದರಿಯಾಗಿವೆ ಎಂದು ಶ್ಲಾಘಿಸಿದರು.ಖ್ಯಾತ ಹಿಂದೂಸ್ತಾನಿ ಗಾಯಕ ಉಸ್ತಾದ್ ಫಯಾಜ್ ಖಾನ್ ಅವರ ಸಂಗೀತ ಕಾರ್ಯಕ್ರಮ ನವರಾತ್ರಿ ಉತ್ಸವಕ್ಕೆ ವಿಶೇಷ ಮೆರುಗು ನೀಡಿತು. ಅವರ ಸುಮಧುರ ಗಾಯನ ಸಂಗೀತಾಸಕ್ತರನ್ನು ಮಂತ್ರಮುಗ್ಧಗೊಳಿಸಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ವೈ. ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ಎಚ್.ಸಿ. ಹಾಗೂ ಪ್ರಶಾಂತಿ ಬಾಲ ಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ ಇದ್ದರು.ಸಿಕೆಬಿ-1 ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಖ್ಯಾತ ಹಿಂದೂಸ್ತಾನಿ ಗಾಯಕ ಉಸ್ತಾದ್ ಫಯಾಜ್ ಖಾನ್ ಅವರ ಸಂಗೀತ ಕಾರ್ಯಕ್ರಮ ನವರಾತ್ರಿ ಉತ್ಸವಕ್ಕೆ ವಿಶೇಷ ಮೆರುಗು ನೀಡಿತು.