ಏನೇ ಭಿನ್ನಾಭಿಪ್ರಾಯ ಇದ್ರೂ ಕುಳಿತು ಮಾತನಾಡಿ: ಶಾಸಕ ಎಚ್.ಟಿ.ಮಂಜು

| Published : Jan 05 2025, 01:30 AM IST

ಸಾರಾಂಶ

ಮುಖಂಡರಲ್ಲಿ ಏನೇ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಕುಳಿತು ಮಾತನಾಡಿಕೊಂಡು ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಮುಂದೆ ಜಿಲ್ಲಾ, ತಾಲೂಕು ಪಂಚಾಯ್ತಿ, ಟಿಎಪಿಸಿಎಂಎಸ್, ಮನ್ಮುಲ್, ಸೊಸೈಟಿಗಳು, ಗ್ರಾಮ ಪಂಚಾಯ್ತಿ, ಎಪಿಎಂಸಿ ಸೇರಿದಂತೆ ಸರಣಿ ಚುನಾವಣೆಗಳಿವೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸ್ಥಳೀಯ ಸಂಸ್ಥೆಗಳು ಹಾಗೂ ಮನ್ಮುಲ್ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗದೇ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಮೂಲಕ ತಾಲೂಕಿನಲ್ಲಿ ಪಕ್ಷ ಸದೃಢವಾಗಿದೆ ಎಂಬುದನ್ನು ನಿರೂಪಿಸಬೇಕಿದೆ ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಸಂಬಂಧ ಕಾರ್ಯಕರ್ತರೊಂದಿಗೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಪಕ್ಷದ ಶಿಸ್ತಿನ ಸಿಪಾಯಿಗಳಂತೆ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಎಲ್ಲಾ ರೀತಿಯ ಸಹಕಾರ, ಬೆಂಬಲ ನೀಡಲು ನಾನು ಮತ್ತು ಪಕ್ಷ ಸಿದ್ಧರಿದ್ದೇವೆ ಎಂದರು.

ಮುಖಂಡರಲ್ಲಿ ಏನೇ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಕುಳಿತು ಮಾತನಾಡಿಕೊಂಡು ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಮುಂದೆ ಜಿಲ್ಲಾ, ತಾಲೂಕು ಪಂಚಾಯ್ತಿ, ಟಿಎಪಿಸಿಎಂಎಸ್, ಮನ್ಮುಲ್, ಸೊಸೈಟಿಗಳು, ಗ್ರಾಮ ಪಂಚಾಯ್ತಿ, ಎಪಿಎಂಸಿ ಸೇರಿದಂತೆ ಸರಣಿ ಚುನಾವಣೆಗಳಿವೆ ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವನ್ನು ಬಲಪಡಿಸಿದರೆ ಎಲ್ಲರಿಗೂ ಅಧಿಕಾರ ಸಿಗಲಿದೆ. ಮುಂದಿನ ಐದು ವರ್ಷಗಳ ಕಾಲ ಅಧಿಕಾರವನ್ನು ಅನುಭವಿಸಬಹುದು. ಮನ್ಮುಲ್ ಚುನಾವಣೆ ಸಂಬಂಧ ಪಕ್ಷ ಈಗಾಗಲೇ ನನ್ನನ್ನು ಹಾಗೂ ಮಹೇಶ್‌ ಅವರನ್ನು ಅಭ್ಯರ್ಥಿಗಳೆಂದು ಪಕ್ಷದಲ್ಲಿ ಘೋಷಿಸಲಾಗಿದೆ ಎಂದರು.

ಕೆಲವೊಬ್ಬರು ಪಕ್ಷದಲ್ಲಿ ಗೊಂದಲ ಮೂಡಿಸುವ ಪ್ರಯತ್ನದಲ್ಲಿದ್ದಾರೆ. ಸೋಲಿನ ಭೀತಿಯಿಂದ ಹೆದರಿಸಿ, ಬೆದರಿಸಿ ಚುನಾವಣೆಯಲ್ಲಿ ಗೆಲ್ಲಲು ನಾನಾ ತಂತ್ರ ಅನುಸರಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಪಕ್ಷ ವಿರೋಧಿ ಚಟುವಟಿಕೆಯನ್ನು ನಾನು ಎಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ವಿರೋಧಿಗಳನ್ನು ಎದುರಿಸುವ ಶಕ್ತಿ ನನಗೂ ಇದೆ. ಆದರೆ, ಆ ಶಕ್ತಿಯನ್ನು ಒಳ್ಳೆಯ ಕೆಲಸಗಳಿಗಾಗಿ ಮೀಸಲಿಟ್ಟಿದ್ದೇನೆ. ಗಂಡ ಹೆಂಡತಿ, ಅಣ್ಣ ತಮ್ಮ, ತಂದೆತಾಯಿಗಳ ನಡುವ ದ್ವೇಷ ಬಿತ್ತುವ ಸಂಸ್ಕೃತಿ ನಮ್ಮದಲ್ಲ. ಅದನ್ನು ಮಾಡುತ್ತಿರುವ ವ್ಯಕ್ತಿಗೆ ನೀವು ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

ಮನ್ಮುಲ್ ಅಧ್ಯಕ್ಷರ ಚುನಾವಣೆ ಸಮಯದಲ್ಲಿ ಈ ವ್ಯಕ್ತಿಯನ್ನು (ಡಾಲುರವಿ) ಅಧ್ಯಕ್ಷರನ್ನಾಗಿ ಮಾಡಲು ಪಕ್ಷ ಸಿದ್ಧವಿತ್ತು. ಆದರೆ, ಅಂತಿಮವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಫೋನ್ ಕರೆ ಮಾಡಿದ ಕೂಡಲೇ ನಮ್ಮಿಂದ ಓಡಿ ಹೋಗಿ ಕಾಂಗ್ರೆಸ್ ಪಕ್ಷಕ್ಕೆ ಮತಚಲಾಯಿಸಿದರು. ಪಕ್ಷದ ವ್ಯಕ್ತಿಯನ್ನು ಅನರ್ಹಗೊಳಿಸಿದ ವೇಳೆಯೂ ನಮ್ಮ ಪಕ್ಷದವರನ್ನು ಬೆಂಬಲಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು, ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಲೋಕೇಶ್, ಮನ್ಮುಲ್ ಅಭ್ಯರ್ಥಿ ಮಹೇಶ್, ಜೆಡಿಎಸ್ ಮುಖಂಡರಾದ ಹುಲ್ಲೇಗೌಡ, ರಾಮಚಂದ್ರೇಗೌಡ, ಸ್ವಾಮಿಗೌಡ, ತಾಪಂ ಮಾಜಿಸದಸ್ಯ ಮೋಹನ್, ತೋಟಪ್ಪಶೆಟ್ಟಿ, ವಕೀಲ ಧನಂಜಯ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.